ಬೇಡಿಕೆ ಈಡೇರಿಕೆಗೆ ಆಗ್ರಹ
ಶಿವಮೊಗ್ಗ: ಜಿಲ್ಲಾ ಅಡಕೆ ಬೆಳೆಗಾರರ ಸಂಘ ಅಡಕೆ ಬೆಳೆಗಾರರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದೆ.
ಜಿಲ್ಲಾ ಅಡಕೆ ಬೆಳೆಗಾರರ ಸಂಘ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಡಕೆ ಬೆಳೆಗಾರರ ಸಮಸ್ಯೆ ಹಾಗೂ ಪರಿಹಾರ ಮತ್ತು ಗೋರಕ್ ಸಿಂಗ್ ವರದಿ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಸಚಿವ ಕಿಮ್ಮನೆ ರತ್ನಾಕರ್ ಮೂಲಕ ಸರ್ಕಾರವನ್ನು ಆಗ್ರಹಿಸಿದೆ.
ಸೂಕ್ತ ಪ್ರಸ್ತಾವನೆ: ಡಾ. ಗೋರಕ್ಸಿಂಗ್ ವರದಿ ಶಿಫಾರಸಿನ ಪ್ರಕಾರ ಅಡಕೆ ಬೆಳೆಗಾರರ ಸಾಲ ಮನ್ನಾ ಮಾಡುವಂತೆ ಹಾಗೂ ಮರುಸಾಲ ನೀಡುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದಿಂದ ಸೂಕ್ತ ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯದಲ್ಲಿ ಅಡಕೆ ಮಂಡಳಿ ಸ್ಥಾಪಿಸಬೇಕು ಎಂದು ಒತ್ತಾಯಿಸಲಾಯಿತು.
ನೇಪಾಳ ಹಾಗೂ ಬಾಂಗ್ಲಾ ದೇಶಗಳು ಸಾರ್ಕ್ ವ್ಯಾಪಾರ ಒಪ್ಪಂದ ಪ್ರಕಾರ ವಿದೇಶೀ ಅಡಕೆ ಹೆಚ್ಚಾಗಿ ನಮ್ಮ ದೇಶಕ್ಕೆ ಆಮದಾಗುವ ಸಂಭವವಿದ್ದು, ಈ ಬಗ್ಗೆ ನಿರ್ಬಂಧ ಹೇರಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಬೆಳೆಗಳ ಪಟ್ಟಿಯಲ್ಲಿ ಅಡಕೆಗೆ ಮಾನ್ಯತೆ ನೀಡಬೇಕು, ಕೇಂದ್ರ ಸರ್ಕಾರದ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಲ್ಲಿ ಅಡಕೆಗೆ ಪುನಶ್ಚೇತನ ಯೋಜನೆಯನ್ನು ಅಡಕೆಯ ರೋಗಗಳ ಬಾಧೆಗೆ ಒಳಗಾಗಿರುವ ತೋಟಗಳಿಗೂ ವಿಸ್ತರಿಸಿ, ಯೋಜನೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಆಗ್ರಹಿಸಲಾಯಿತು.
ಸೂಕ್ತ ಕ್ರಮ: ಕೇಂದ್ರ ಸರ್ಕಾರದ ರಿಷೆಡ್ಯೂಲ್ಮೆಂಟ್ ಆಫ್ ಅರೆಕಾ ಲೋನ್ ಯೋಜನೆಯ ಲಾಭವನ್ನು ಅಡಕೆ ಬೆಳೆಗಾರರಿಗೆ ತಲುಪಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಡಕೆ ತೋಟಗಳ ಕೃಷಿ ಚಟುವಟಿಕೆಗೆ ಅನುದಾನ ದೊರಕಿಸಲು ಒತ್ತಾಯಿಸಬೇಕು. ಅಡಕೆಯ ಪರ್ಯಾಯ ಉಪಯೋಗಗಳ ಬಗ್ಗೆ ಅಧ್ಯಯನ ನಡೆಸಲು ಹಾಗೂ ಉತ್ಪನ್ನಗಳನ್ನು ತಯಾರಿಸಲು ಮತ್ತು ಮಾರುಕಟ್ಟೆ ಮಾಡಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ತಂಬಾಕು ಹಾಗೂ ನಿಕೋಟಿನ್ ರಹಿತವಾದ ಪಾನ್ ಮಸಾಲ ಅಡಕೆ ವ್ಯಾಪಾರ ವಹಿವಾಟಿಗೆ ರಾಜ್ಯ ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧ್ಯಕ್ಷ ರಮೇಶ್ ಹೆಗ್ಡೆ ಸರ್ಕಾರವನ್ನು ಒತ್ತಾಯಿಸಿದರು.