'ಯೋಜನೆ ಯಶಸ್ವಿ ಅನುಷ್ಠಾನ'
ಶಿವಮೊಗ್ಗ: ಜಿಲ್ಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯಕ್ರಮ ಸರ್ಕಾರ ಹಾಗೂ ಯೋಜನೆ ಸದಸ್ಯರ ಸಹಯೋಗದಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕ ಸುಧೀರ್ ಕುಮಾರ್ ಬಂಟ್ವಾಳ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವಾರ್ಷಿಕ ವಿವರ ಬಿಡುಗಡೆ ಮಾಡಿದ ಅವರು, ಕಳೆದ ವರ್ಷ ಉತ್ತಮ ಸಾಧನೆ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ಪ್ರಗತಿ ನಿಧಿ: ಜಿಲ್ಲೆಯಲ್ಲಿ 20,036 ಪ್ರಗತಿ ಬಂಧು ಸ್ವಸಹಾಯ ಸಂಘಗಳನ್ನು ಸಂಘಟಿಸಿ 2,29,672 ಸದಸ್ಯರನ್ನು ಒಳಪಡಿಸಲಾಗಿದೆ. ಸಂಘದ ಸದಸ್ಯರ ವಿವಿಧ ಬೇಡಿಕೆ ಅನುಸಾರ ಪ್ರಸ್ತುತ ವರ್ಷದಲ್ಲಿ ರು. 311.06 ಲಕ್ಷ ಹಾಗೂ ಈ ವರೆಗೆ ಒಟ್ಟು ರು. 999.23 ಲಕ್ಷ ಪ್ರಗತಿನಿಧಿ ವಿತರಿಸಲಾಗಿದ್ದು, ರು. 325.94 ಲಕ್ಷ ಪ್ರಗತಿನಿಧಿ ಹೊರೆ ಬಾಕಿ ಇದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದು, ಈ ವರ್ಷ ಹಮ್ಮಿಕೊಂಡಿದ್ದ 2,060 ಕೃಷಿ ತರಬೇತಿ ಕಾರ್ಯಕ್ರಮಗಳಲ್ಲಿ ಒಟ್ಟು 82,400 ರೈತರು ಮಾಹಿತಿ ಪಡೆದಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 7 ಕೃಷಿ ಉತ್ಸವ, 30 ಕೃಷಿ ಸಂಬಂಧಿ ವಿಚಾರ ಸಂಕಿರಣ, 52 ಕೃಷಿ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗಿದೆ ಎಂದರು.
ಕೃಷಿ ತಾಕಿಗೆ ಭೇಟಿ: ಹೊರ ಜಿಲ್ಲೆಗಳಿಂದ ಆಗಮಿಸಿದ ಒಟ್ಟು 117 ಅಧ್ಯಯನ ತಂಡಗಳಲ್ಲಿ ಒಟ್ಟು 6,084 ಪ್ರಗತಿಬಂಧು ರೈತ ಸದಸ್ಯರು ನಮ್ಮ ಮಾದರಿ ಕೃಷಿ ತಾಕುಗಳಿಗೆ ಭೇಟಿ ಮಾಹಿತಿ ಪಡೆದುಕೊಂಡಿರುತ್ತಾರೆ. ಜಿಲ್ಲೆಯ 6 ತಾಲೂಕುಗಳಿಂದ 183 ಪ್ರಗತಿಬಂಧು ರೈತರಿಗೆ ಅಂತಾ ರಾಜ್ಯ ಕೃಷಿ ಅಧ್ಯಯನ ಪ್ರವಾಸ ಕೈಗೊಂಡು ಮಾಹಿತಿ ಪಡೆದಿದ್ದಾರೆ ಎಂದು ವಿವರಿಸಿದರು.
ನಬಾರ್ಡ್ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಶ್ರೀ ಪ್ರೇರಕರ ತರಬೇತಿ, ಶ್ರೀ ಕೂಟದ ಅಧ್ಯಕ್ಷರ ತರಬೇತಿ, ಶ್ರೀ ಕೂಟದ ಅಧ್ಯಕ್ಷರ ತರಬೇತಿ, ಶ್ರೀ ರೈತರ ತರಬೇತಿಗಳನ್ನು ನಡೆಸುವ ಮೂಲಕ ಪ್ರಸ್ತುತ 1,139 ಕುಟುಂಬಗಳಲ್ಲಿ 1,288 ಎಕರೆ ಪ್ರದೇಶದಲ್ಲಿ ಶ್ರೀ ಪದ್ಧತಿ ಭತ್ತದ ಬೇಸಾಯ ಅನುಷ್ಠಾನ ಮಾಡಲಾಗಿದೆ ಎಂದರು.
58 ಹಾಳೆ ಉತ್ಪಾದನಾ ಘಟಕ: ಜಿಲ್ಲೆಯಲ್ಲಿ 58 ಹಾಳೆ ತಟ್ಟೆ ಉತ್ಪಾದನಾ ಘಟಕ, 27 ಅಗರಬತ್ತಿ ಘಟಕಗಳ ಮೂಲಕ ನೂರಾರು ಮಂದಿ ಸ್ವಯಂ ಉದ್ಯೋಗ ಕಂಡುಕೊಂಡಿದ್ದಾರೆ. ಆಹಾರ ಪದಾರ್ಥಗಳ ಮಾರಾಟ, ಟೈಲರಿಂಗ್ ಮುಂತಾದ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಜಗದೀಶ ಅಲ್ಸೆ, ಶಿವಮೊಗ್ಗ ತಾಲೂಕು ಕೃಷಿ ಅಧಿಕಾರಿ ಯೋಗೀಶ್, ಚಂದ್ರಶೇಖರ್, ಸುನಿತಾ, ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.