ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಲ ವಿತರಣೆಗೂ, ಸರ್ಕಾರಕ್ಕೂ ನೇರ ಸಂಬಂಧವಿಲ್ಲ

Rashmi Kasaragodu
Updated On : 29 Jun 2013, 10:28 am

ಕಪ್ರ ವಾರ್ತೆ   ಶಿವಮೊಗ್ಗ    ಜೂ.29
ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ನಬಾರ್ಡ್ ಸಾಲ ನೀಡಿಲ್ಲ. ಸಾಲ ಮನ್ನಾ ಆಗಿದ್ದರೂ ಈ ಹಣ ಬ್ಯಾಂಕ್ಗೆ ಬಾರದೆ ಹೊಸ ಸಾಲ ನೀಡುವಂತಿಲ್ಲ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಸಹಕಾರಿ ಸಂಸ್ಥೆಗಳಿವೆ. ಇದನ್ನು ಅರಿಯದೇ ಕೆಲ ರಾಜಕಾರಣಿಗಳು ಟೀಕೆ ಮಾಡುತ್ತಲೇ ಇದ್ದಾರೆ ಎಂದು ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ. ಮಂಜುನಾಥ ಗೌಡ ಹೇಳಿದ ರು.
ಕೇಂದ್ರ, ರಾಜ್ಯ ಸರ್ಕಾರದ ಅನುದಾನದಲ್ಲಿ ಸಹಕಾರಿ ಸಂಸ್ಥೆಗಳು ಸಾಲ ನೀಡುತ್ತಿವೆ ಎಂಬ ಭಾವನೆ ರೈತರಲ್ಲಿದೆ. ಇದು ವಾಸ್ತವ ಅಲ್ಲ. ಸಾಲ ವಿತರಣೆಗೂ ಸರ್ಕಾರಕ್ಕೂ ನೇರ ಸಂಬಂಧವಿಲ್ಲ. ಸಹಕಾರಿ ಸಂಸ್ಥೆಗಳ ಮೂಲಕ ಕೊಡ ಮಾಡುವ ಸಾಲದಲ್ಲಿ ಕೇಂದ್ರ ಸರ್ಕಾರವಾಗಲೀ, ರಾಜ್ಯ ಸರ್ಕಾರವಾಗಲೀ ಒಂದು ರೂಗಳನ್ನೂ  ನೀಡುತ್ತಿಲ್ಲ. ಆದರೆ ಕೆಲವರು ಸರ್ಕಾರ ಹಣ ನೀಡಿದರೂ ಬ್ಯಾಂಕ್ಗಳು ರೈತರಿಗೆ ಸಾಲ ನೀಡುತ್ತಿಲ್ಲ ಎಂದು ಹೇಳಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಟೀಕಿಸಿದರು.
ರು. 25, 000 ಸಾಲಮನ್ನಾ: ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಬಜೆಟ್ನಲ್ಲಿ ರು. 25,000 ವರೆಗಿನ ಸಾಲಮನ್ನಾ ಮಾಡುವುದಾಗಿ ಘೋಷಿಸಿತು. ಆದರೆ ಪೂರ್ಣ ಹಣ ಬಿಡುಗಡೆ ಮಾಡಲಿಲ್ಲ. ಸಾಲಮನ್ನಾ ಸೌಲಭ್ಯ ಪಡೆದಿರುವ ರೈತರಿಂದ ಬ್ಯಾಂಕ್ಗೆ ಬರಬೇಕಾದ ಹಣ ಯಾವ ರೂಪದಿಂದಾದರೂ ಪಾವತಿಯಾಗದಿದ್ದರೆ ನಬಾರ್ಡ್ ನೆರವು ನೀಡುವುದಿಲ್ಲ. ಈ ಸಾಲ ಜಮಾ ಆಗದೆ ಹೊಸ ಸಾಲ ನೀಡಲು ಬರುವುದಿಲ್ಲ ಎಂದರು.
ರೈತರ ಬೆಳೆ ಸಾಲ ಮನ್ನಾ ಯೋಜನೆಯಡಿ ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕುಗಳಿಗೆ ನೀಡಬೇಕಾದ ಹಣವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಸದ್ಯದಲ್ಲೇ ಬಿಡುಗಡೆ ಮಾಡುವುದಾಗಿ ಅಭಯ ನೀಡಿದ ಹಿನ್ನೆಲೆಯಲ್ಲಿ ಶೀಘ್ರದಲ್ಲಿಯೇ ಸಾಲಮನ್ನಾ ಆದ ರೈತರಿಗೂ ಬೆಳೆ ಸಾಲ ನೀಡುವ ಪ್ರಕ್ರಿಯೆ ಆರಂಭಿಸುವುದಾಗಿ ಮಂಜನಾಥಗೌಡ ಹೇಳಿದರು.
ಅಂಕಿಅಂಶ: ಸಾಲಮನ್ನಾ ಯೋಜನೆಯಡಿ ಈ ಹಿಂದಿನ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರ್ಕಾರ ಒಂದು ಲಕ್ಷ ರು. ವರೆಗೆ ಬೆಳೆ ಸಾಲ ಪಡೆದಿದ್ದ ರೈತರಿಗೆ ರು. 25,000 ಸಾಲ ಮನ್ನಾ ಮಾಡಿತ್ತು. ಇದರಂತೆ 7,48,482 ರೈತರಿಗೆ ರು. 1,344.41 ಕೋಟಿ ಹಾಗೂ ರು. 25,000 ಮೇಲ್ಪಟ್ಟು 7,76,023 ರೈತರಿಗೆ 1,940 ಕೋಟಿ ರು. ಸಾಲ ಮನ್ನಾ ಆಗಿದೆ ಎಂದರು.
ಒಟ್ಟು 15,24,505 ರೈತರಿಗೆ ರು. 3,284.47 ಕೋಟಿ ಮನ್ನಾ ಆಗಿದ್ದು, ಇದರಲ್ಲಿ ಸರ್ಕಾರದಿಂದ ಬಿಡುಗಡೆ ಆಗಿರುವುದು ರು. 1,133.25 ಕೋಟಿ ಮಾತ್ರ ಎಂದರು.
ರೈತರ ಸಾಲ ಮನ್ನಾ ಯೋಜನೆಯಡಿ ರಾಜ್ಯ ಸರ್ಕಾರ ನೀಡಬೇಕಾದ ಸುಮಾರು ರು. 2,200 ಕೋಟಿಗೂ ಅಧಿಕ ಹಣವನ್ನು ಈವರೆಗೂ ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ರೈತರಿಗೆ ಸಕಾಲದಲ್ಲಿ ಸಾಲ ವಿತರಿಸಲು ಸಾಧ್ಯವಾಗಿಲ್ಲ. ಇದರಿಂದಾಗಿ ಸಹಕಾರಿ ಸಂಸ್ಥೆಗಳನ್ನೇ ನಂಬಿಕೊಂಡಿರುವ ರೈತರು ಮುಂಗಾರು ಬಿತ್ತನೆಗೆ ಅಗತ್ಯವಾದ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಸಹಕಾರ ಸಂಘಗಳಿಂದ ಸಾಲ ದೊರೆಯದೇ ತೊಂದರೆ ಅನುಭವಿಸುವಂತಾಗಿದೆ ಎಂದರು.
ವಾಸ್ತವ ಇದು: ರೈತರಿಗೆ ಸಾಲ ನೀಡಲು ನಬಾರ್ಡ್ ನಿಗದಿತ ಬಡ್ಡಿ ದರದಲ್ಲಿ ಅಪೆಕ್ಸ್ ಬ್ಯಾಂಕಿಗೆ ಸಾಲ ನೀಡುತ್ತಿದ್ದು, ಈ ಹಣವನ್ನು ಡಿಸಿಸಿ ಬ್ಯಾಂಕಿಗೆ ಬಿಡುಗಡೆ ಮಾಡಲಾಗುತ್ತದೆ. ಡಿಸಿಸಿ ಬ್ಯಾಂಕುಗಳು ಸಹಕಾರಿ ಸಂಸ್ಥೆಗಳ ಮೂಲಕ ರೈತರಿಗೆ ಸಾಲ ವಿತರಿಸುತ್ತವೆ ಎಂದರು.
ಸಹಕಾರಿ ರಂಗದ 108 ವರ್ಷಗಳ ಇತಿಹಾಸದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರಿ ಬ್ಯಾಂಕುಗಳಿಗೆ ಒಂದು ಪೈಸೆ ನೀಡಿದ ಉದಾಹರಣೆ ಇಲ್ಲ. ಆದರೆ ಅದೇ ಕೇಂದ್ರ ಸರ್ಕಾರ ವಾಣಿಜ್ಯ ಬ್ಯಾಂಕುಗಳು ನಷ್ಟ ಹೊಂದಿದ ಸಂದರ್ಭದಲ್ಲಿ ಈ ನಷ್ಟ ತುಂಬಿಕೊಡುತ್ತಿದೆ. ಆದರೆ ಸಹಕಾರಿ ಕ್ಷೇತ್ರ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಇದೇ ಕೇಂದ್ರ ಸರ್ಕಾರ  ನೆರವಿಗೆ ಬಾರದೆ ತಾರತಮ್ಯ ತೋರುತ್ತಿರುವುದು ದುರಂತ ಎಂದರು.
ಬಡ್ಡಿ ನಿಗದಿ ಆಗಿಲ್ಲ: ಸರ್ಕಾರ ಸಾಲಮನ್ನಾ ಮಾಡುವ ಮುನ್ನ ಬಡ್ಡಿ ದರ ನಿಗದಿ ಮಾಡದಿರುವುದು ಸಹ ಸಹಕಾರಿ ಕ್ಷೇತ್ರ ಸೊರಗುವಂತಾಗಿದೆ. ರೈತರಿಗೆ ಯಾವ ಬಡ್ಡಿ ದರದಲ್ಲಿ ಸಾಲ ನೀಡಬೇಕು ಎಂಬುದೇ ತಿಳಿಯುತ್ತಿಲ್ಲ. ನಬಾರ್ಡ್ ನೀಡುವ ಸಾಲದ ಮೇಲಿನ ಬಡ್ಡಿ ಹಾಗೂ ಡಿಪಾಜಿಟ್ದಾರರಿಗೆ ನೀಡಲಾಗುವ ಬಡ್ಡಿಯಂತೆ  ನಿಗದಿಗೊಳಿಸಿ, ಸರ್ಕಾರವೇ ತುಂಬಿಕೊಡಬೇಕಿದೆ.
2011-12ರಲ್ಲಿ ರಾಜ್ಯ ಸರ್ಕಾರ ಶೇ. 9.45ರಷ್ಟು ಬಡ್ಡಿ ದರ ನಿಗದಿಗೊಳಿಸಿ ಅದರಂತೆ ಸಹಕಾರ ಸಂಸ್ಥೆಗಳಿಗೆ ತುಂಬಿ ಕೊಟ್ಟಿತ್ತು. ನಂತರ ಬಡ್ಡಿ ದರವನ್ನೇ ಸರ್ಕಾರ ನಿಗದಿಗೊಳಿಸದೆ ಸಹಕಾರ ಸಂಸ್ಥೆಗಳು ತೊಂದರೆ ಅನುಭವಿಸುವಂತಾಗಿದೆ ಎಂದರು.
ಬಡ್ಡಿ ನಿಗದಿ ಇಲ್ಲ: ಅದೇ ರೀತಿ ರು. 1,500 ಕೋಟಿ ಮಧ್ಯಮಾವಧಿ ಸಾಲ ಹಾಗೂ ಸ್ವಸಹಾಯ ಗುಂಪುಗಳಿಗೆ ವಿತರಿಸಲಾಗಿರುವ ಸಾಲಕ್ಕೆ 2011-12ರಿಂದ ಈ ವರೆಗೂ ಬಡ್ಡಿ ನಿಗದಿಯಾಗಿಲ್ಲ. ಈ ನಡುವೆ ರೈತರಿಗೆ ಸಾಲ ವಿತರಿಸಲು ರಾಜ್ಯ ಅಪೆಕ್ಸ್ ಬ್ಯಾಂಕಿಗೆ ನಬಾರ್ಡ್ ರು. 3,900 ಕೋಟಿ ನೀಡಿದ್ದು, ಈ ಸಾಲದ  ಮೊತ್ತವನ್ನು ಬಡ್ಡಿ  ಸಮೇತ ಅಪೆಕ್ ಬ್ಯಾಂಕ್ ಮರ್ಚ್ ಹಾಗೂ ಜೂನ್ನಲ್ಲಿ ಎರಡು ಕಂತುಗಳಲ್ಲಿ ಮರುಪಾವತಿಸಿದೆ.
ಅತ್ತ ಸಾಲ ಮನ್ನಾ ಆದ ರೈತರು ಸಾಲ ಕಟ್ಟಿಲ್ಲ. ಇತ್ತ ರಾಜ್ಯ ಸರ್ಕಾರ ಹಣ ನೀಡಿಲ್ಲ. ಆದರೂ ಅಪೆಕ್ಸ್ ಬ್ಯಾಂಕ್ ತನ್ನ ಠೇವಣಿ ಮೂಲಕ ಈ ಮೊತ್ತವನ್ನು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿ ಡಿಫಾಲ್ಟ್ ನಿಂದ ತಪ್ಪಿಸಿಕೊಂಡಿದೆ ಎಂದರು.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಹಕಾರ ಸಚಿವರೊಂದಿಗೆ ಜುಲೈ ಮೊದಲ ವಾರದಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ಹಾಗೂ ರಾಜ್ಯದ ಡಿಸಿಸಿ ಬ್ಯಾಂಕುಗಳ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ಅಂದು ಈ ಕುರಿತು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು. ಪ್ರಸಕ್ತ ಸಾಲಿನಲ್ಲಿ 25 ಲಕ್ಷ ರೈತರಿಗೆ 8 ಸಾವಿರ ಕೋಟಿ ಸಾಲ ವಿತರಿಸುವ ಗುರಿ ಹೊಂದಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement