ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನುದಾನ ಬಳಕೆ ನಿರ್ಬಂಧ ಸಡಿಲಿಕೆ

Rashmi Kasaragodu
Updated On : 30 Jun 2013, 12:27 pm

ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ  ಜೂ.29
ಜಿಲ್ಲಾ ಪಂಚಾಯ್ತಿ ಸದಸ್ಯರಿಗೆ ಶಾಶ್ವತ ಸರ್ಕಾರಿ ಆಸ್ತಿ ನಿರ್ಮಾಣಕ್ಕಿಂತ ರಸ್ತೆ ಕಾಮಗಾರಿ ಮೇಲೆಯೇ ಪ್ರೀತಿ ಹೆಚ್ಚು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅತ್ತು ಸುರಿದು, ಕಾಡಿಬೇಡಿ 13ನೇ ಹಣಕಾಸು ಆಯೋಗದ ಅನುದಾನ ಬಳಕೆಗಿದ್ದ ನಿರ್ಬಂಧವನ್ನು ಸ್ವಲ್ಪ ಮಟ್ಟಿಗೆ ಸರ್ಕಾರ ಸಡಿಲಗೊಳಿಸುವಂತೆ ಮಾಡಿದ್ದಾರೆ.
ಸರ್ಕಾರ ಎರಡು ತಿಂಗಳ ಹಿಂದೆ 13ನೇ ಹಣಕಾಸು ಆಯೋಗದ ಅನುದಾನದಲ್ಲಿ ಶೇ.90ರಷ್ಟು ಭಾಗವನ್ನು ದೀರ್ಘಕಾಲ ಬಾಳಿಕೆ ಬರುವಂಥ ಮೂಲ ಸೌಕರ್ಯಕ್ಕೆ ಬಳಸುವುದನ್ನು ಕಡ್ಡಾಯ ಮಾಡಿ ಆದೇಶಿಸಿತ್ತು. ಈ ಆದೇಶ ಹೊರಬಿದ್ದಾಗ ಜಿಪಂ ಸದಸ್ಯರಿಗೆ ಸಿಡಿಲು ಬಡಿದಂತಾಗಿತ್ತು. ಏಕೆಂದರೆ ಈ ಸದಸ್ಯರಿಗೆ ತಮ್ಮ ಕ್ಷೇತ್ರದಲ್ಲಿ ನಡೆಯುವ ಕಾಮಗಾರಿಯ ಗಾತ್ರಕ್ಕಿಂತ ಸಂಖ್ಯೆ ಹೆಚ್ಚಾದರೆ ಖುಷಿ. ಜಿಪಂ ಸದಸ್ಯರಿಗೂ, ಗುತ್ತಿಗೆದಾರರಿಗೂ, ಎಂಜಿನಿಯರಿಂಗ್ ವಿಭಾಗದವರಿಗೂ ಅನೈತಿಕ ಮೈತ್ರಿ ಇರುವುದು ಗೊತ್ತಿಲ್ಲದ ವಿಷಯವೇನಲ್ಲ.
ಡಾಂಬರ್ ಕಚ್ಚಾ ರಸ್ತೆ ಕಾಮಗಾರಿ ನಡೆಸುವುದು ಎಂದರೆ ಜಿಪಂ ಸದಸ್ಯರಿಗೆ ಎಲ್ಲಿಲ್ಲದ ಸಂತೋಷದ ವಿಚಾರ. ಏಕೆಂದರೆ ಈ ಕಾಮಗಾರಿಯನ್ನು ಪ್ರತಿ ವರ್ಷ, ನೆನಪಾದಾಗೆಲ್ಲಾ ಮಾಡಬಹುದು. ಇಂಥ ಕಾಮಗಾರಿಯನ್ನು 13ನೇ ಹಣಕಾಸು ಆಯೋಗದ ಅನುದಾನದಲ್ಲಿ ನಡೆಸಲಾಗುವುದಿಲ್ಲ ಎಂದಾಗ ಸಹಜವಾಗಿಯೇ ನೋವಾಗಿತ್ತು.
ಅನುದಾನದ ಶೇ.20ರಷ್ಟು ಬಳಕೆ: ರಾಜ್ಯದ ಎಲ್ಲ ಜಿಪಂ ಸದಸ್ಯರ ಒಕ್ಕೊರಲ ಒತ್ತಾಯಕ್ಕೆ ರಾಜ್ಯ ಸರ್ಕಾರ ಕೊನೆಗೂ ಮಣಿದಿದೆ. ಹಿಂದಿನ ಆದೇಶವನ್ನು ಹಿಂಪಡೆದು ಇದೇ ಜೂ.27ರಂದು ಪರಿಷ್ಕೃತ ಆದೇಶ ಹೊರಡಿಸಿದ್ದು, ಅನುದಾನದ ಶೇ.20ರಷ್ಟು ಭಾಗವನ್ನು ಗ್ರಾಮೀಣ ರಸ್ತೆಗಳ ನಿರ್ಮಾಣ, ಉನ್ನತೀಕರಣಕ್ಕೆ ಬಳಸಲು ಅವಕಾಶ ನೀಡಿದೆ.
13ನೇ ಹಣಕಾಸು ಆಯೋಗದ ಅನುದಾನ ಬಳಕೆಗೆ ಹಲವು ನಿರ್ಬಂಧಗಳನ್ನು ವಿಧಿಸಿದ್ದು, ಅಭಿವೃದ್ಧಿ ಯೋಜನೆ ತಯಾರಿಸುವಾಗ ಯೋಜನೆಗಳಿಗೆ ಅವಶ್ಯಕತೆ ಇರುವ ಪೂರ್ಣ ಅನುದಾನ ಕಾಯ್ದಿರಿಸುವಂತೆ ಸೂಚಿಸಿದೆ. ಅಂದರೆ ಒಂದು ಶಾಲಾ ಕಟ್ಟಡ ಪೂರ್ಣಗೊಳಿಸಲು 10 ಲಕ್ಷ ಅಗತ್ಯವಿದ್ದಲ್ಲಿ, 2 ಲಕ್ಷ, 4 ಲಕ್ಷ ಎಂದು ಹಣ ನೀಡದೆ ಸಂಪೂರ್ಣ 10 ಲಕ್ಷ ಹಣ ನೀಡಿ ಎಂದರ್ಥ.
ಈ ನಿರ್ಬಂಧವೂ ಸದಸ್ಯರ ಪರಸ್ಪರ ಅಸಮಾಧಾನಕ್ಕೆ ಕಾರಣವಾಗಿದೆ. ಒಂದೇ ಕ್ಷೇತ್ರಕ್ಕೆ ಗರಿಷ್ಠ ಅನುದಾನ ದೊರೆತಂತಾಗುತ್ತದೆ. ಬಲಾಢ್ಯ ಸದಸ್ಯರು ಪಡೆಯುತ್ತಾರೆ. ನಾವೇನು ಮಾಡಬೇಕೆಂದು ಇತರೆ ಸದಸ್ಯರ ನೋವು.
ಪ್ರತ್ಯೇಕ ಕ್ರಿಯಾಯೋಜನೆಗೂ ತಡೆ: ಇದರೊಂದಿಗೆ ಪ್ರತ್ಯೇಕವಾಗಿ ಅನುದಾನದ ಕಂತುವಾರು ಕ್ರಿಯಾಯೋಜನೆ ತಯಾರಿಸುವುದಕ್ಕೂ ಸರ್ಕಾರ ತಡೆಹಾಕಿದೆ.
ಕ್ರಿಯಾಯೋಜನೆ ತಯಾರಿಸುವಾಗ ಗ್ರಾಮೀಣ ಜನರ ಜೀವನಮಟ್ಟ ಹೆಚ್ಚಿಸಲು ಅನುಕೂಲವಾಗುವ ಕ್ಷೇತ್ರಗಳಾದ ಕುಡಿಯುವ ನೀರು, ನೈರ್ಮಲ್ಯ ಶಿಕ್ಷಣ, ಆರೋಗ್ಯ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಪೌಷ್ಟಿಕಾಂಶ, ಅಭಿವೃದ್ಧಿ ಯೋಜನೆಗಳಲ್ಲಿ ಬಳಸಿಕೊಳ್ಳಲು ಸೂಚಿಸಲಾಗಿದೆ.
 

ಯಾವುದಕ್ಕೆ ಬಳಸುವಂತಿಲ್ಲ...
ಟಿ  ಯಾವುದೇ ವ್ಯಕ್ತಿಯ ಹೆಸರಲ್ಲಿ ಅಥವಾ ವೈಯಕ್ತಿಕ ಜ್ಞಾಪಕಾರ್ಥದಲ್ಲಿ ಪ್ರತಿಮೆ ನಿರ್ಮಿಸುವುದು, ಕಟ್ಟಡಗಳನ್ನು ನಿರ್ಮಿಸಲು.
ಟಿ  ಧಾರ್ಮಿಕ ಕ್ಷೇತ್ರಗಳಿಗೆ ದೇಣಿಗೆ ನೀಡುವುದು, ಆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಟ್ಟಡ ಅಥವಾ ಇತರೆ ಕಾಮಗಾರಿಗಳನ್ನು ತೆಗೆದುಕೊಳ್ಳುವುದು.
ಟಿ  ವ್ಯಯಕ್ತಿಕ ಫಲಾನುಭವಿಗಳಿಗೆ ಸಹಾಯಾನುದಾನ ಅಥವಾ ಸಾಲ ನೀಡುವುದು.
ಟಿ  ಕಚೇರಿಯ ಆವರ್ತಕ ವೆಚ್ಚ, ಸಿಬ್ಬಂದಿ ವೇತನ ಭರಿಸುವುದು, ಕಚೇರಿಗೆ ಸಾಧನ ಖರೀದಿಗೆ, ಸಾದಿಲ್ವಾರು ವೆಚ್ಚ ಮಾಡುವುದು.
ಟಿ ವಾಹನಗಳ ಖರೀದಿ, ದುರಸ್ತಿ, ಇಂಧನ ವೆಚ್ಚ ಅಥವಾ ಬಾಡಿಗೆ ಮೇಲೆ ವಾಹನಗಳನ್ನು ಕಚೇರಿ ಕಾರ್ಯಕ್ಕೆ.
ಟಿ  ಖಾಸಗಿ ಸಂಸ್ಥೆಗಳಿಗೆ ಸಹಾಯಕ್ಕೆ.
ಟಿ  ಚುನಾಯಿತ ಪ್ರತಿನಿಧಿಗಳ ಉಪವೇಶನ ಶುಲ್ಕ, ಗೌರವಧನಕ್ಕೆ ಬಳಸುವುದು, ಯಾವುದೇ ರೀತಿಯ ಪ್ರವಾಸ ಕಾರ್ಯಕ್ರಮಕ್ಕೆ ಬಳಸುವುದು.


ಸರ್ಕಾರದ ಪರಿಷ್ಕೃತ ಆದೇಶ ಶುಕ್ರವಾರ ತಲುಪಿದೆ. ಅದರಂತೆ ಕ್ರಮ ಕೈಗೊಳ್ಳುತ್ತೇನೆ. ಯಾವ ರೀತಿ ಬಳಸಬೇಕೆಂಬುದು ಜಿಪಂ ಸಾಮಾನ್ಯ ಸಭೆಯ ತೀರ್ಮಾನಕ್ಕೆ ಬಿಟ್ಟದ್ದು.
ಟಿ ಸಸಿಕಾಂತ್ ಸೆಂಥಿಲ್, ಸಿಇಒ, ಶಿವಮೊಗ್ಗ ಜಿಪಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement