ದೌರ್ಜನ್ಯದ ವಿರುದ್ಧ ಸಿಡಿದೇಳಿ
ಕ.ಪ್ರ.ವಾರ್ತೆ, ಶಿವಮೊಗ್ಗ, ಜೂ.30
ಮಹಿಳೆಯರ ಮೇಲೆ ಪ್ರತಿನಿತ್ಯ ನಡೆಯುವ ದೌರ್ಜನ್ಯ ಹಾಗೂ ಸಾಮಾಜಿಕ ಪಿಡುಗಗಳ ವಿರುದ್ಧ ಸಿಡಿದೇಳುವ ಮನೋಭಾವವನ್ನು ಪ್ರತಿಯೊಬ್ಬ ಮಹಿಳೆ ಹೊಂದಬೇಕು ಎಂದು ಅನುಪಮಾ ಪ್ರಶಸ್ತಿ ಪುರಸ್ಕೃತೆ ಹಿರಿಯ ಸಾಹಿತಿ ಪ್ರೇಮಾಭಟ್ ಹೇಳಿದರು.
ಕರ್ನಾಟಕ ಲೇಖಕಿಯರ ಸಂಘ ನಗರದ ಕರ್ನಾಟಕ ಸಂಘದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆ ಉದ್ಘಾಟಿಸಿದ ಅವರು, ಮಹಿಳೆಯರ ಮೇಲೆ ಅತ್ಯಾಚಾರ, ದುಷ್ಕೃತ್ಯ ನಡೆದ ಸಂದರ್ಭದಲ್ಲಿ ಎಲ್ಲಾ ಮಹಿಳೆಯರು, ಲೇಖಕಿಯರು ಒಟ್ಟಾಗಿ ನಿಂತು ವಿರೋಧ ವ್ಯಕ್ತಪಡಿಸಬೇಕು ಹಾಗೂ ನಮ್ಮ ಪ್ರತಿಭಟನೆ ಮುಖ್ಯ ವಾಹಿನಿಯಲ್ಲಿ ಕಾಣಿಸಿಕೊಳ್ಳಬೇಕು ಎಂದರು.
ವಿಂಗಡಣೆ ಸಲ್ಲ: ಕೆಲವು ಸಾಹಿತಿಗಳು ಕಾರ್ಪೋರೇಟ್ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂದು ಹೇಳುತ್ತಿದ್ದಾರೆ. ಆದರೆ ಸಾಹಿತ್ಯ ಪ್ರಕಾರವನ್ನು ವಿಂಗಡಣೆ ಮಾಡುವುದರಲ್ಲಿ ಅರ್ಥವಿಲ್ಲ. ಐಟಿಬಿಟಿ ಕಂಪನಿಗಳಲ್ಲಿ ರಾತ್ರಿ ಪಾಳಯದಲ್ಲಿ ಕೆಲಸ ಮಾಡುವ ಅನೇಕ ಮಹಿಳೆಯರಿದ್ದು, ಅವರ ತಲ್ಲಣಗಳು ಜಗತ್ತಿಗೆ ಅರ್ಥವೇ ಆಗುವುದಿಲ್ಲ. ಅವುಗಳನ್ನು ಕಾರ್ಪೋರೇಟ್ ಸಾಹಿತ್ಯ ತೆರೆದಿಡುತ್ತದೆ ಎಂದು ವಿಶ್ಲೇಷಿಸಿದರು.
ಗ್ರಾಮೀಣ ಪ್ರದೇಶದವರಿಗೆ ಯಾವ ಅವಕಾಶವೂ ಸಿಗುವುದಿಲ್ಲ. ಆದರಿಂದ ಗ್ರಾಮಾಂತರ ಪ್ರದೇಶದ ಹೆಣ್ಣು ಮಕ್ಕಳಿಗೆ ಇಂತಹ ಸಂಘಗಳು ವೇದಿಕೆ ಕಲ್ಪಿಸಿಕೊಡಬೇಕು. ಎಸ್ಸೆಸೆಲ್ಸಿ, ಪಿಯುಸಿವರೆಗೆ ಬಡತನದ ಬೇಗೆಯಲ್ಲಿ ಹೇಗೋ ವಿದ್ಯಾಭ್ಯಾಸ ಪಡೆದುಕೊಳ್ಳುತ್ತಾರೆ. ಅದರಲ್ಲಿ ಶೇ.10 ಮಂದಿ ಮಾತ್ರ ಪದವಿವರೆಗೆ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.
ಗುರುತಿಸಬೇಕು: ಅಲ್ಲಿ ಯಾವ ಸೌಕರ್ಯಗಳೂ ಇರುವುದಿಲ್ಲ. ವಿಶೇಷವೆಂದರೆ ವಿವಿಯಲ್ಲಿ ರ್ಯಾಂಕ್‌ಗಳನ್ನು ಪಡೆದುಕೊಳ್ಳುವವರು ಕೂಡ ಗ್ರಾಮೀಣರೇ ಆಗಿದ್ದಾರೆ. ಅವರಲ್ಲಿಯೂ ಪ್ರತಿಭೆ ಹುದುಗಿರುತ್ತದೆ. ಅವರನ್ನೂ ಕೂಡ ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ಕರೆ ತರಬೇಕು ಎಂದರು.
ನಮ್ಮ ಮಕ್ಕಳು ಪಠ್ಯಪುಸ್ತಕದ ಹುಳುಗಳಾಗುತ್ತಿದ್ದಾರೆ. ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕರೆ ತರಲು ತಾಯಂದಿರು ಮುಂದಾಗಬೇಕು. ಪಠ್ಯಪುಸ್ತಕದಲ್ಲಿ ಸಿಗುವ ಜ್ಞಾನ ಸೀಮಿತವಾದದ್ದು. ಇಂದು ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಪರ್ಧೆ ಏರ್ಪಟ್ಟಿರುವುದರಿಂದ ಮಕ್ಕಳಿಗೆ ಜೀವನಕ್ಕೆ ಬೇಕಾದ ಎಲ್ಲಾ ಸಂಗತಿಗಳನ್ನು ತಿಳಿಸಿಕೊಡುವುದು ಪೋಷಕರ ಆದ್ಯ ಕರ್ತವ್ಯ ಎಂದರು.
ಮಕ್ಕಳಲ್ಲಿ ಬೆಳೆಸಿ: ಪಠ್ಯಪುಸ್ತಕಗಳು ಜೀವನವನ್ನು ರೂಪಿಸುವುದಿಲ್ಲ. ಬೇರೆ ಬೇರೆ ಪುಸ್ತಕ ಓದುವ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸಬೇಕು. ಇಂದಿನ ಶಿಕ್ಷಣ ಸರಿಯಾದ ಗುಣಮಟ್ಟದಲ್ಲಿ ಸಿಗುತ್ತಿಲ್ಲ. ಪಠ್ಯಪುಸ್ತಕಗಳ ಭಾರವನ್ನು ಮಕ್ಕಳ ಮೇಲೆ ಹೊರಿಸಲಾಗುತ್ತಿದೆ. ಭಾರ ಹೊರಿಸುವ ಪಠ್ಯಪುಸ್ತಕಗಳಲ್ಲಿ ಬದಲಾವಣೆಯಾಗಬೇಕು. ಇಂದಿನ ಮಾಧ್ಯಮಗಳು, ಶಿಕ್ಷಕರು ಎಲ್ಲರೂ ಸೇರಿ ಶಿಕ್ಷಣ ಕ್ರಮದ ದಾರಿ ತಪ್ಪುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಇದೇ ವೇಳೆ ಸ್ಥಳೀಯ ಕವಯತ್ರಿಯರಿಂದ ಕವನ ವಾಚನ ನಡೆಯಿತು.
ಕರ್ನಾಟಕ ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ, ಸಂಘದ ಕಾರ್ಯದರ್ಶಿ ಆಶಾ ಹೆಗಡೆ, ಸದಸ್ಯೆ ಮಂಜುಳಾ ಮೋಹನ್, ಎಸ್.ವಿ. ಚಂದ್ರಕಲಾ ಮತ್ತಿತರರು ಇದ್ದರು.