'ಯುವ ಜನರ ಚಿಂತನಾ ಲಹರಿ ಬದಲಾಗಲಿ'
ಬೆಂಗಳೂರು: ರಾಜಕೀಯ ಮತ್ತು ಆಡಳಿತದಲ್ಲಿನ ಅವ್ಯವಸ್ಥೆಗೆ ವಿದ್ಯಾವಂತರೇ ಪ್ರಮುಖ ಕಾರಣ. ಹಾಗಾಗಿ, ವ್ಯವಸ್ಥೆ ಸುಧಾರಿಸಬೇಕಿದ್ದರೆ ಯುವ ಜನತೆ ಚಿಂತನೆಯಲ್ಲಿ ಬದಲಾವಣೆ ಆಗಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಕಿವಿಮಾತು ಹೇಳಿದ್ದಾರೆ.
ಮಲೆನಾಡ ಬೆಂಗಳೂರು ನಿವಾಸಿಗಳು ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಇತಿಹಾಸ ಗೊತ್ತಿಲ್ಲದಿದ್ದರೆ ಕಷ್ಟ: ರಾಜಕಾರಣ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸುಮಾರು ಶೇ.90ರಷ್ಟು ಮಂದಿ ವಿದ್ಯಾವಂತರೇ ಇದ್ದಾರೆ. ಅಂತಹ ವಿದ್ಯಾವಂತರೆಲ್ಲರ ಅಸಮರ್ಪಕ ಕಾರ್ಯನಿರ್ವಹಣೆಯಿಂದಾಗಿ ವ್ಯವಸ್ಥೆ ಹದಗೆಟ್ಟಿದೆ. ಪ್ರಮುಖವಾಗಿ ಯುವಕರಿಗೆ ಮಹಾತ್ಮಗಾಂಧಿ, ಲೋಹಿಯಾ, ಅಂಬೇಡ್ಕರ್ ಮುಂತಾದವರ ಇತಿಹಾಸ ಗೊತ್ತಿಲ್ಲದಿರುವುದೇ ದುರಂತ ಮಾತ್ರವಲ್ಲ, ಸಮಸ್ಯೆಗೆ ಅದೇ ಕಾರಣ ಎಂದು ಪ್ರತಿಪಾದಿಸಿದರು.
ವ್ಯವಸ್ಥೆಯ ಸುಧಾರಣೆಗೆ ಚಿಂತಿಸಿ: ಈ ನಿಟ್ಟಿನಲ್ಲಿ ಯುವಕರು ಹಾಗೂ ವಿದ್ಯಾವಂತರು ತಮ್ಮ ಚಿಂತನೆ ಬದಲಾಯಿಸಿಕೊಂಡು ವ್ಯವಸ್ಥೆಯ ಸುಧಾರಣೆಗೆ ಮುಂದಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾಜ ಸುಧಾರಣೆಯನ್ನು ರಾಜಕಾರಣಿಗಳಿಗೆ ಗುತ್ತಿಗೆ ನೀಡಲಾಗಿದೆ ಎಂಬಂತಹ ಭಾವನೆ ಹಲವರಲ್ಲಿದೆ. ಅದು ಸರಿಯಲ್ಲ. ರಾಜಕೀಯ ವ್ಯವಸ್ಥೆ ಕುಲಗೆಟ್ಟಿರುವ ಈ ಸಂದರ್ಭದಲ್ಲಿ ಕೇವಲ ರಾಜಕಾರಣಿಗಳಿಂದ ಬದಲಾವಣೆ ಸಾಧ್ಯವಿಲ್ಲ. ಬದಲಾವಣೆ ಸಾಮಾಜಿಕ ಜವಾಬ್ದಾರಿಯಾದ್ದರಿಂದ ಜನ ಸಾಮಾನ್ಯರು ಕೂಡ ಅದರಲ್ಲಿ ಪಾಲ್ಗೊಳ್ಳಬೇಕು. ಅಲ್ಲದೆ, ಸಾಕ್ಷರತಾ ಪ್ರಮಾಣ ಹೆಚ್ಚಿಸಿ ಬಡತನದ ಪ್ರಮಾಣವನ್ನು ತಗ್ಗಿಸದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಇದೆ ಸಂದರ್ಭದಲ್ಲಿ ಸಂಸದ ಡಿ.ಬಿ.ಚಂದ್ರೇಗೌಡ ನೇತೃತ್ವದಲ್ಲಿ ಮಲೆನಾಡ ಬೆಂಗಳೂರು ನಿವಾಸಿಗಳು ಕಿಮ್ಮನೆ ರತ್ನಾಕರ್ ಅವರನ್ನು ಸನ್ಮಾನಿಸಿದರು.
ಗಾಯಕ ಶಿವಮೊಗ್ಗ ಸುಬ್ಬಣ್ಣ, ಚಿತ್ರಸಾಹಿತಿ ಕವಿರಾಜ್, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್, ಉದ್ಯಮಿಗಳಾದ ದಿನೇಶ್ ತಲಗೋಡು, ಡಿ.ಸಿ.ರಮೇಶ್, ನಾಗರಾಜ ಶೆಟ್ಟಿ ಮತ್ತಿತರರು ಹಾಜರಿದ್ದರು.
ರಾಜ್ಯದ ಆಡಳಿತ ವ್ಯವಸ್ಥೆ ಹಾಗೂ ನಿಯಮ ಅನಕ್ಷರಸ್ಥರಿಗೂ ಅರ್ಥವಾಗುವಂತಿರಬೇಕು. ಆದರೆ, ನಮ್ಮಲ್ಲಿನ ಬಜೆಟ್ ರಚನಾ ವಿಧಾನವೇ ಸರಿಯಿಲ್ಲ ಎಂದ ಸಚಿವ ಕಿಮ್ಮನೆ ರತ್ನಾಕರ್, ಅದು ತಮಗೆ ಮಾತ್ರವಲ್ಲ ಆಡಿಟರ್ಗೂ ಅರ್ಥವಾಗುವುದಿಲ್ಲ.
ಬಜೆಟ್ ಪ್ರತಿ ನೋಡಿ ರಾಜ್ಯದ ಆರ್ಥಿಕ ಸ್ಥಿತಿ ಗತಿ ಅರ್ಥೈಸಲು ಕೂಡ ಸಾಧ್ಯವಿಲ್ಲ. ಹಾಗಾಗಿ ರಾಜ್ಯದ ಬಜೆಟ್ ಆದಾಯ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಪ್ರಾಥಮಿಕ ಶಿಕ್ಷಣ ಇಲಾಖೆಗೆ ಬಜೆಟ್ನಲ್ಲಿ ರು. 12 ಸಾವಿರ ಕೋಟಿ ನೀಡಿದರೆ ಅದರಲ್ಲಿ ವೇತನಕ್ಕೇ ರು. 10.5 ಸಾವಿರ ಕೋಟಿ, ಬಿಸಿಯೂಟಕ್ಕೆ ರು. 1 ಸಾವಿರ ಕೋಟಿ ಖರ್ಚಾಗುತ್ತದೆ. ಉಳಿದ ಹಣದಲ್ಲಿ ರಾಜ್ಯದಲ್ಲಿನ ಶಾಲೆಗಳಿಗೆ ಬಣ್ಣ ಬಳಿಯಲು ಕೂಡ ಹಣ ಇರುವುದಿಲ್ಲ, ಹಾಗಿದೆ ನಮ್ಮ ಬಜೆಟ್ ಎಂದು ಸಚಿವರು ಬಜೆಟ್ ವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.