ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿದ್ಯಾರ್ಥಿಗಳಿಂದ ರೈತ ಮಿತ್ರ ಯಂತ್ರ ಆವಿಷ್ಕಾರ

Lingaraj Badiger
Updated On : 1 Jul 2013, 11:35 am

ಕ.ಪ್ರ.ವಾರ್ತೆ  ಶಿವಮೊಗ್ಗ  ಜೂ 30 ನಗರದ ಜೆಎನ್‌ಎನ್‌ಸಿಇ ಕಾಲೇಜಿನ ಮೆಕ್ಯಾನಿಕಲ್ ವಿದ್ಯಾರ್ಥಿಗಳು ರೈತರಿಗೆ ಅನುಕೂಲವಾಗುವ ಐದು ಪ್ರಾಜೆಕ್ಟ್‌ಗಳನ್ನು ಸಿದ್ದಪಡಿಸಿದ್ದಾರೆ.
ಕಾಲೇಜಿನ ಯಾಂತ್ರಿಕ ವಿಭಾಗದ 8ನೇ ಸೆಮಿಸ್ಟರ್‌ನ ಎಸ್.ವಿ. ಕಾರ್ತಿಕ್, ಕೆ.ಎಲ್. ಶಶಿಧರ್, ಕೆ.ಎಸ್. ಶರತ್ ಮತ್ತು ವಿ.ಆರ್. ನವೀನ್ ತಂಡ, ರೈತ ಮಿತ್ರ ಯಂತ್ರವೊಂದನ್ನು ಸಿದ್ದಪಡಿಸಿದ್ದು, ಬತ್ತ ಕಟಾವು ಮಾಡುವುದರಲ್ಲಿ ಅದು ಸಹಕಾರಿ. ಯಂತ್ರ ಅತ್ಯಂತ ಹಗುರವಾಗಿದ್ದು, ಇತರೆ ಬತ್ತ ಕಟಾವು ಮಾಡುವ ದೊಡ್ಡ ಯಂತ್ರಕ್ಕೆ ಹೋಲಿಕೆ ಮಾಡಿದರೆ ಬಳಕೆ ಸುಲಭ, ಯಂತ್ರವನ್ನು ಗದ್ದೆಯ ಎಲ್ಲಾ ಮೂಲೆಗಳಿಗೂ ಕೂಡ ಒಯ್ಯಬಹುದು.
 ಬತ್ತದ ಕಡ್ಡಿಯನ್ನು ನೆಲದ ಮಟ್ಟದಿಂದ ಕಟಾವು ಮಾಡುವುದರಿಂದ ಬೇರೆ ಯಂತ್ರಗಳಿಂದ ಆಗುತ್ತಿದ್ದ ಮೇವಿನ ನಷ್ಟವನ್ನು ನಿವಾರಿಸುವಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಗಿದೆ. ಈ ಯಂತ್ರದ ತಯಾರಿಕೆಗೆ 3ರಿಂದ 4 ಲಕ್ಷ ರುಪಾಯಿವರೆಗೆ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಬೀಜ ಬಿತ್ತನೆ ಯಂತ್ರ: ಈ ಯಂತ್ರ ರೈತನಿಗೆ ಬೀಜವನ್ನು ಬಿತ್ತನೆ ಮಾಡುವಾಗ ಸಹಕಾರಿಯಾಗುತ್ತದೆ. ನೇಗಿಲನ್ನು ಹೋಲುವಂತೆ ತಯಾರಿಸಿದ್ದು, ಇದನ್ನು ಒಬ್ಬ ರೈತ ಮತ್ತು ಎರಡು ಎತ್ತುಗಳ ಸಹಾಯದಿಂದ ಚಲಾಯಿಸಬಹುದು. ಬೀಜ ಬಿತ್ತನೆ ಮಾಡುವುದರೊಂದಿಗೆ ಗೊಬ್ಬರದ ಸಮತೋಲನ ವಿತರಣೆಯಲ್ಲೂ ಸಹಕಾರಿಯಾಗಿದ್ದು, ಗಂಟೆಗೆ 1 ಎಕರೆ ಲೆಕ್ಕದಲ್ಲಿ ಬೀಜವನ್ನು ಬಿತ್ತುವ ಕಾರ್ಯಕ್ಷಮತೆಯನ್ನು ಹೊಂದಿದೆ.
 ಈ ಪ್ರಾಜೆಕ್ಟ್‌ಗಳಿಗೆ ಮೆಕಾನಿಕಲ್ ವಿಭಾಗದ ಉಪನ್ಯಾಸಕ ಜಯವರ್ಧನ ಆಚಾರ್ಯ ಮತ್ತು ಮೆ. ಮಾರುತಿ ಟೆಕ್ನಾಲಜಿಸ್‌ನ ಸ್ಥಾಪಕ ಎ.ಎಸ್. ವಿಶ್ವನಾಥ್, ಜಿ.ಎಸ್. ವೆಂಕಟೇಶ್ ಅವರು ಮಾರ್ಗದರ್ಶನ ಮಾಡಿದ್ದರು.
ಕಬ್ಬಿನ ಕಣ್ಣು ಬೇರ್ಪಡಿಸುವ ಯಂತ್ರ: ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಡಿ.ಎಸ್. ರಾಮಕೃಷ್ಣ ಅವರ ಮಾರ್ಗದರ್ಶನದಲ್ಲಿ 8ನೇ ಸೆಮಿಸ್ಟರ್‌ನ ವಿದ್ಯಾರ್ಥಿಗಳಾದ ಎಸ್.ವಿ. ರೋಹಿತ್, ಎನ್. ವಿನೋದ್, ಟಿ. ದಿಲೀಪ್, ಎಂ.ಜೆ. ಉದಯ್ ಅವರ ತಂಡ, ಕಬ್ಬಿನ ಕಣ್ಣು ಬೇರ್ಪಡಿಸುವ ಯಂತ್ರವನ್ನು ತಯಾರಿಸಿದೆ. ಪ್ರಸ್ತುತ ಬೆಳೆಸುವ ಸುಧಾರಿತ ವಿಧಾನದಲ್ಲಿ ಕಬ್ಬಿನ ಕಣ್ಣು ಬೇರ್ಪಡಿಸಿ ಸಸಿ ಮಾಡಲಾಗುವುದು. ಅದಕ್ಕಾಗಿ ಕಬ್ಬಿನ ಕಣ್ಣು ಬೇರ್ಪಡಿಸುವ ಅವಶ್ಯಕತೆ ಇದೆ. ಪ್ರಸ್ತುತವಾಗಿ ಅಭಿವೃದ್ಧಿ ಪಡಿಸಿದ ಯಂತ್ರದಲ್ಲಿ ಕ್ರ್ಯಾಂಕ್ ಮೆಕ್ಯಾನಿಸಮ್ ಅಳವಡಿಸಿ, ಮೋಟಾರ್, ಗೇರ್ ಬಾಕ್ಸ್, ಕ್ರ್ಯಾಂಕ್, ಕನೆಕ್ಟಿಂಗ್ ಗ್ರಾಡ್ ಮತ್ತು ಸ್ಲೈಡರ್‌ಗಳನ್ನು ಹೊಂದಿದ್ದು, ಸ್ಲೈಡರ್ ಬಾಕ್ಸ್‌ಗೆ ಕಟರ್‌ನ್ನು ಜೋಡಿಸಲಾಗಿದೆ. ಸ್ಲೈಡರ್ ಬ್ಲಾಕ್ ಕೆಳಗೆ ಚಲಿಸಿದಾಗ ಕಬ್ಬಿನ ಕಣ್ಣು ಬೇರ್ಪಡುತ್ತದೆ. ಈ ಯಂತ್ರವನ್ನು ಉಪಯೋಗಿಸಿ ಗಂಟೆಗೆ 1,200ರಷ್ಟು ಕಣ್ಣುಗಳನ್ನು ಬೇರ್ಪಡಿಸಬಹುದು.
ಕಳೆ ತೆಗೆಯುವ ಯಂತ್ರ: ಮೆಕ್ಯಾನಿಕಲ್ ವಿಭಾಗದ ಪ್ರೊ.ವಿ.ಅಶೋಕ್ ಅವರ ಮಾರ್ಗದರ್ಶನದಲ್ಲಿ ಎರಡು ಕಡಿಮೆ ಖರ್ಚಿನ ವಿದ್ಯುತ್ ಚಾಲಿತ ಕಳೆ ತೆಗೆಯುವ ಯಂತ್ರವನ್ನು ವಿದ್ಯಾರ್ಥಿಗಳು ಸಿದ್ದಪಡಿಸಿದ್ದಾರೆ. ಈ ಯಂತ್ರಕ್ಕೆ ತಗುಲುವ ವೆಚ್ಚ 1,500 ರುಪಾಯಿಯಿಂದ 3 ಸಾವಿರ ರುಪಾಯಿ ಮಾತ್ರ. ಈ ಯಂತ್ರಗಳು ಗಂಟೆಗೆ ಒಂದು ಯೂನಿಟ್ ವಿದ್ಯುತ್ ಬಳಸುವುದರಿಂದ ಅವುಗಳ ನಿರ್ವಹಣಾ ವೆಚ್ಚ ಕೇವಲ 1ಗಂಟೆಗೆ 5 ರುಪಾಯಿ ಮಾತ್ರ. (ಈಗಿರುವ ಪೆಟ್ರೋಲ್ ಚಾಲಿತ ಯಂತ್ರಗಳು 2ಗಂಟೆಗೆ 1ಲೀಟರ್ ಪೆಟ್ರೋಲ್ ಬಳಸುವುದರಿಂದ ನಿರ್ವಹಣೆಗೆ 75 ರುಪಾಯಿ ಮೀರುತ್ತದೆ) ಅಲ್ಲದೇ ಈ ಯಂತ್ರಗಳಿಂದ 1ಗಂಟೆಗೆ 1ರಿಂದ 5 ಚದುರ ಮೀಟರ್ ಜಾಗದ ಕಳೆಯನ್ನು ಕೀಳಬಹುದು. ಈ ಯಂತ್ರಗಳಿಗೆ ಯಾವುದೇ ವಿಶೇಷ ತರಬೇತಿ ಪಡೆದ ವ್ಯಕ್ತಿಗಳ ಅಗತ್ಯವಿರುವುದಿಲ್ಲ.
ಮೊಟ್ಟೆಗೆ ಕಾವು ಕೊಡುವ ಸೌರಶಕ್ತಿ ಸಾಧನ: ಡಾ.ಎಲ್.ಕೆ.ಶ್ರೀಪತಿಯವರ ಮಾರ್ಗದರ್ಶನದಲ್ಲಿ ಟಿ.ಯು. ಹೇಮಂತ್, ಕೆ.ಆರ್. ಶಶಿಧರ್, ತೇಜಸ್ವಿ, ಸಂದೇಶ್, ಕೆ. ಆಚಾರ್ ವಿದ್ಯಾರ್ಥಿಗಳ ತಂಡ, ಪರಿಸರದಲ್ಲಿ ಹೇರಳವಾಗಿ ಸಿಗುವ ಸೌರಶಕ್ತಿಯನ್ನು ಬಳಸಿ ಕೋಳಿ ಮೊಟ್ಟೆಗೆ ಕಾವು ಕೊಡುವ ಸಾಧನವನ್ನು ಸಿದ್ದಗೊಳಿಸಿದ್ದಾರೆ.
 ಈ ಸಾಧನ ಒಮ್ಮೆಗೆ 500 ಕೋಳಿ ಮೊಟ್ಟೆಗಳಿಗೆ ಕಾವು ಕೊಡಬಹುದಾದ ಸಾಮರ್ಥ್ಯ ಹೊಂದಿದೆ. ಇದಕ್ಕೆ ಸುಮಾರು 20 ಸಾವಿರ ರುಪಾಯಿಗಳು ವೆಚ್ಚವಾಗುತ್ತದೆ. ಅಷ್ಟೇ ಅಲ್ಲದೇ ಈ ಸಾಧನದಲ್ಲಿ ನೀರು ಕಾಯಿಸುವ ಸಾಧನ, ರೇಡಿಯೇಟರ್, ಬಾಯ್ಲರ್, ಮೊಟ್ಟೆಗಳನ್ನು ಇಡುವ ಪೆಟ್ಟಿಗೆ ಇರುತ್ತದೆ. ಸೌರಶಕ್ತಿಯಿಂದ ಬಿಸಿಯಾದ ನೀರು ರೇಡಿಯೇಟರ್ ಮುಖಾಂತರ ಹರಿಯುತ್ತದೆ. ಬಾಯ್ಲರ್ ಮುಖಾಂತರ ಹಾದು ಖಾದ ಗಾಳಿಯು ರೇಡಿಯೇಟರ್ ಪ್ರವೇಶಿಸಿದಾಗ, ಗಾಳಿ ಬಿಸಿಯಾಗಿ ನಂತರ ಮೊಟ್ಟೆ ಇಡುವ ಪೆಟ್ಟಿಗೆಯನ್ನು ಪ್ರವೇಶಿಸಿ, ಆ ಪೆಟ್ಟಿಗೆಯನ್ನು ಸದಾ ಉಷ್ಣತೆಯಲ್ಲಿ ಇಡಲು ಸಹಕಾರಿಯಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement