ಶಾಲೆಗೊಂದು ಸಾಹಿತ್ಯ ಸಮ್ಮೇಳನ: ಮಂಜುನಾಥ್
ಸೊರಬ: ಮುಂದಿನ ದಿನಗಳಲ್ಲಿ ಶಾಲೆಗೊಂದು ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ನಡೆಸಲಾಗುವುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್ ಹೇಳಿದ್ದಾರೆ.
ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಾಲೆಗಳು ಶಿಕ್ಷಕರಿಗೆ ಕೇವಲ ವೇತನ ನೀಡುವ ಸ್ಥಳವಾಗಬಾರದು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಶಿಕ್ಷಕರು, ಸಾಹಿತ್ಯ ಪರಿಷತ್ತುಗಳು ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದರು.
ರಾಜ್ಯ ಸರ್ಕಾರ 7ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡುವುದಾಗಿ ತಿಳಿಸಿದೆ. ಈ ಮಾತನ್ನು ಉಳಿಸಿಕೊಳ್ಳುವ ಜೊತೆಗೆ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ನೋಡಿಕೊಳ್ಳಲು ಮುಂದಾಗಬೇಕು ಎಂದು ಕೋರಿದರು.
ಇನ್ಫೋಸಿಸ್ ಮುಖ್ಯಸ್ಥ ನಾರಾಯಣಮೂರ್ತಿಯವರು ಇಂಗ್ಲಿಷ್ ಮೂಲಕವೇ ಶಿಕ್ಷಣ ಕಲಿಯಬೇಕು ಎಂದು ಹೇಳಿಕೆ ನೀಡಿರುವುದು ಖಂಡನೀಯ ಎಂದ ಅವರು, ಖಾಸಗೀಕರಣ ವ್ಯವಸ್ಥೆಗಳು ಸರ್ಕಾರದ ಸದುದ್ದೇಶವನ್ನು ಹಾಳುಗೆಡವುತ್ತಿವೆ. ಖಾಸಗಿ ಶಾಲೆಗಳಿಗೆ ರಾಜ್ಯ ಮತ್ತು ಕೇಂದ್ರೀಯ ಪಠ್ಯಪುಸ್ತಕವನ್ನು ನೀಡುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ವ್ಯವಸ್ಥೆ ಪ್ರತಿಹಂತದಲ್ಲಿ ನಡೆಯುತ್ತಿರುವುದು ವಿಷಾದಕರ ಎಂದು ತಿಳಿಸಿದರು.
ಶಾಸಕ ಮಧು ಬಂಗಾರಪ್ಪ ಮಾತನಾಡಿ, ಕಾವೇರಿ ವಿಷಯ ಬಂದಾಗ ಮಾತ್ರ ಕನ್ನಡದ ನೆನಪಾಗಬಾರದು. ಕನ್ನಡವನ್ನು ಉಳಿಸಲು ಎಲ್ಲರೂ ಪ್ರಯತ್ನಿಸಬೇಕು ಎಂದರು. ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ರಾಷ್ಟ್ರಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ ಸೇರಿದಂತೆ ಹಲವು ಸಾಹಿತಿಗಳು ಶಿವಮೊಗ್ಗ ಜಿಲ್ಲೆಯವರಾದರೂ ಇಂದಿಗೂ ಕನ್ನಡ ಭಾಷೆ ಉಳಿಸಲು ಹೋರಾಟ ಮಾಡುವ ಅನಿವಾರ್ಯತೆ ಇದೆ ಎಂದರು.
ಕನ್ನಡ ಮಾತನಾಡುವುದನ್ನು ಬಿಟ್ಟರೆ ಭಾಷೆ ನಶಿಸಿ ನಮ್ಮ ಅಸ್ತಿತ್ವವೇ ಇಲ್ಲದಂತಾಗುತ್ತದೆ ಎಂದ ಅವರು ಇಂಗ್ಲಿಷ್ ಶಿಕ್ಷಣ ಅನಿವಾರ್ಯವಾದರೂ ಅದನ್ನು ಕನ್ನಡಕ್ಕೆ ಧಕ್ಕೆಬಾರದಂತೆ ಬಳಸಬೇಕು. ಸಾಹಿತ್ಯ ಸಮ್ಮೇಳನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಸತತವಾಗಿ ಕನ್ನಡಾಭಿಮಾನವನ್ನು ಬೆಳೆಸುವಲ್ಲಿ ಕ್ರಿಯಾಶೀಲವಾಗಬೇಕು ಎಂದರು.
ಸಮ್ಮೇಳದಲ್ಲಿ ಕೇಳಿ ಬಂದ ಒತ್ತಾಯಗಳು
ಆಡುಭಾಷೆಯನ್ನಾಗಿ ಮಾಡಿಕೊಂಡು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಎಲ್ಲರಿಂದಾಗಬೇಕು
ಧರ್ಮದಲ್ಲಿ ಮರ್ಮವಿದೆ. ಮತ ಮೌಡ್ಯ ಸ್ವಾರ್ಥಪರತೆ ಮೆರೆದಾಗ ಅಪಸ್ವರಗಳು, ಆದ್ವಾನ ಹುಟ್ಟಿಕೊಳ್ಳುತ್ತವೆ
ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿಜ್ಞಾನ ಮಾದರಿಗಳ ಪ್ರದರ್ಶನ, ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ, ಗೃಹ ಕೈಗಾರಿಕೆಗಳ ವಸ್ತುಗಳ ಪ್ರದರ್ಶನ ಮತ್ತು ಮಾರಾಟ
ಪುರಾತನ ಕಾಲದಿಂದಲೂ ಸಹ ಕನ್ನಡ ಭಾಷೆಗೆ ಒಂದು ಉತ್ತಮ ಸ್ಥಾನವಿದ್ದು, ಅದನ್ನು ಕಡೆಗಣಿಸಬಾರದು. ಕನ್ನಡ ಸಾಹಿತ್ಯ ಬಗ್ಗೆ ಚರ್ಚೆ ಅಗತ್ಯ