ಶಾಸಕ-ಮಂತ್ರಿ ಸೇವೆಗೆ ಹೊರಟ ಶಿಕ್ಷಕರು
ಶಿವಮೊಗ್ಗ: ನಿಮಗೆ ರಾಜಕೀಯದವರ ಸಹವಾಸ ಬೇಡ, ಮಕ್ಕಳ ಶೈಕ್ಷಣಿಕ ಚಟುವಟಿಕೆಗೆ ತೊಂದರೆ ಮಾಡಬೇಡಿ ಎಂದು ಪರಿಪರಿಯಾಗಿ ಕೇಳಿಕೊಂಡರೂ ಸರ್ಕಾರಿ ಶಾಲೆ ಶಿಕ್ಷಕರು ಮಾತ್ರ ಶಾಸಕ-ಮಂತ್ರಿಗಳ ಸೇವೆಗೆ ಹೊರಡುವ ಪರಿಪಾಠ ಈ ಸಾಲಿನಲ್ಲೂ ನಿಲ್ಲಿಸಿಲ್ಲ.
ಇದೀಗ ತಾನೆ ಹೊಸ ಸರ್ಕಾರ ಬಂದಿದೆ, ಹೊಸ ಶಾಸಕರು ಮಂತ್ರಿಗಳಿಗೆ ಆಪ್ತಸಹಾಯಕರಾಗಿ ಜಿಗಿಯಲು ಹೊಂಚುಹಾಕಿರುವ ಶಿಕ್ಷಕರನೇಕರು ಇನ್ನಿಲ್ಲದ ಲಾಭಿ ಆರಂಭಿಸಿದ್ದಾರೆ. ಕೆಲವರು ಈಗಾಗಲೇ ವಿಶೇಷಾಧಿಕಾರಿ, ಆಪ್ತಸಹಾಯಕ ಹುದ್ದೆ ಅಲಂಕರಿಸಿ ಕಾರ್ಯ ಆರಂಭಿಸಿದ್ದಾರೆ.
ಗೀಳು ನಿಂತಿಲ್ಲ: ಶಾಲಾ ಶಿಕ್ಷಕರು ಶಾಸಕರು, ಸಂಸದರು, ಸಚಿವರ ಸೇವೆಗೆ ಮುಂದಾಗುವುದು ಇತ್ತೀಚಿನ ಬೆಳವಣಿಗೆಯೇನಲ್ಲ. ದಶಕಗಳಿಂದಲೂ ಈ ಸಂಪ್ರದಾಯ ನಡೆದುಬಂದಿದೆ. ಹಾಗೆಯೇ 7-8 ವರ್ಷಗಳಿಂದ ಈ ಬೆಳವಣಿಗೆ ಚರ್ಚಾ ವಿಷಯವೂ ಹೌದು. ಶಿಕ್ಷಕರನ್ನು ಶಾಸಕರು, ಮಂತ್ರಿಗಳ ಸೇವೆಗೆ ಬಳಸಿಕೊಳ್ಳಬಾರದು ಎಂಬ ಕೂಗು ಇದೆ.
ಈ ಹಿನ್ನೆಲೆಯಲ್ಲಿಯೇ 2005ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಮೊಂದನ್ನು ಹೊರಡಿಸಿ ಶಾಸಕರಿಗೆ ಶಿಕ್ಷಕರನ್ನು ಆಪ್ತ ಸಹಾಯಕರನ್ನಾಗಿ ಮಾಡಿಕೊಳ್ಳದಂತೆ ನಿರ್ದೇಶನ ನೀಡಿತು.
ನಂತರದ ಬೆಳವಣಿಗೆಯಲ್ಲಿ ಶಿಕ್ಷಕರನ್ನು ಬೋಧಕೇತರ ಕೆಲಸಗಳಿಗೆ, ಕಚೇರಿ ಕೆಲಸಕ್ಕೆ ಎರವಲು ಸೇವೆಯ ಮೇಲೆ ನಿಯೋಜಿಸುವ ಕುರಿತು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ಅಂತಿಮವಾಗಿ ಉಚ್ಚ ನ್ಯಾಯಾಲಯ ಹಾಗೂ ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಿದ್ದು, ಅದರ ಆಧಾರದ ಶಿಕ್ಷಣ ಇಲಾಖೆ 2008ರಲ್ಲಿ ಆದೇಶವೊಂದನ್ನು ಹೊರಡಿಸಿತು.
ಹಕ್ಕಿಗೆ ಧಕ್ಕೆ: ರಾಜ್ಯದಲ್ಲಿ ಶಾಲಾ ಶಿಕ್ಷಕರ ಕೊರತೆ ಇದ್ದು, ಶಿಕ್ಷಕರನ್ನು ಶಾಲೆಯ ಸೇವೆಯಿಂದ ತೆಗೆದು ಬೇರೆಡೆ ನಿಯೋಜನೆ ಮಾಡಿದರೆ ಶಾಲೆಗಳಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಲಾರದಷ್ಟು ನಷ್ಟವಾಗುತ್ತದೆ. ಮತ್ತು ವಿದ್ಯಾರ್ಥಿಗಳ ಸಂವಿಧಾನಾತ್ಮಕ ಹಕ್ಕಿಗೆ ಧಕ್ಕೆ ತರುವಂತಹದ್ದಾಗುತ್ತದೆ. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯವೂ ಸಹ, ಶಿಕ್ಷಕರನ್ನು ಬೋಧಕೇತರ ಕೆಲಸಕ್ಕೆ ನಿಯೋಜಿಸಬಾರದೆಂದು ಆದೇಶ ಮಾಡಿವೆ ಎಂದು ಶಿಕ್ಷಣ ಇಲಾಖೆ ಆಯುಕ್ತರೇ ಎಲ್ಲಾ ಜಿಲ್ಲಾಡಳಿತಕ್ಕೆ ಪತ್ರಮುಖೇನ ತಿಳಿಸಿದ್ದಾರೆ.
ಇಷ್ಟಾದರೂ ಶಿಕ್ಷಕರ ರಾಜಕೀಯ ಗೀಳು ನಿಂತಿಲ್ಲ. ಶಾಸಕರು, ಮಂತ್ರಿಗಳ ಸೇವೆಗೆ ಶಿಕ್ಷಕರು ಹೊರಟುನಿಂತಿದ್ದಾರೆ.
ಶಿವಮೊಗ್ಗದ್ದೇ ಉದಾಹರಣೆ: ಶಿವಮೊಗ್ಗದ ಸರ್ಕಾರಿ ಶಾಲೆಯ ದೈಹಿಕ ಶಿಕ್ಷಕರು ನೆರೆಯ ಚನ್ನಗಿರಿ ತಾಲೂಕಿನ ಶಾಸಕರಿಗೆ ಆಪ್ತ ಸಹಾಯಕರಾಗಿ ಎರವಲು ಸೇವೆ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಶಿಕ್ಷಣ ಇಲಾಖೆ ಅವರನ್ನು ಎರವಲು ಸೇವೆಗೆ ಕಳುಹಿಸಿಕೊಟ್ಟಿದೆ.
ಶಾಸಕರು ಶಿವಮೊಗ್ಗ ಜಿಲ್ಲಾಧಿಕಾರಿಯವರನ್ನು ಕೋರಿದ್ದು, ಡಿಸಿಯವರು ಡಿಡಿಪಿಐ ಅವರಿಗೆ ಶಾಸಕರ ಬೇಡಿಕೆಯ ಪರಿಶೀಲನೆಗೆ ಸೂಚಿಸಿದ್ದಾರೆ. ಡಿಡಿಪಿಐಯವರು ಸಂಬಂಧಪಟ್ಟ ದೈಹಿಕ ಶಿಕ್ಷಕರನ್ನು ಎರವಲು ಸೇವೆಗೆ ಕಳುಹಿಸಿಕೊಟ್ಟಿದ್ದಾರೆ. ಅಂತಿಮವಾಗಿ ಶಾಲೆಯ ದೈಹಿಕ ಶಿಕ್ಷಣ ವಿಭಾಗಕ್ಕೆ ಶಿಕ್ಷಕರ ಕೊರತೆ ಬಿದ್ದಿದೆ.
ಶಿಕ್ಷಣ ಇಲಾಖೆ ಸಿಬ್ಬಂದಿಯನ್ನು ಈ ಬಗ್ಗೆ ವಿಚಾರಿಸಿದರೆ, ಜನಪ್ರತಿನಿಧಿಗಳಿಗೆ ಶಿಕ್ಷಕರ ನಿಯೋಜನೆ ಎಂಬುದು ರಾಜಕೀಯ ವಿಚಾರ ಎಂದೇ ಅಭಿಪ್ರಾಯಪಡುತ್ತಾರೆ. ಅವರವರ ಶಕ್ತ್ಯಾನುಸಾರವಾಗಿ ನಿಯೋಜನೆಗೊಳ್ಳುತ್ತಾರೆ. ರಾಜ್ಯದಲ್ಲಿ ಈ ರೀತಿಯ ಹತ್ತಾರು ಪ್ರಕರಣಗಳಿದ್ದು, ಈ ಬೆಳವಣಿಗೆಯನ್ನು ಯಾರು ಪ್ರಶ್ನೆ ಮಾಡುತ್ತಾರೆ ಹೇಳಿ ಎಂದು ಮರುಪ್ರಶ್ನೆ ಹಾಕುತ್ತಾರೆ.
- ಶ್ರೀಕಾಂತ ಭಟ್