ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬದಲಾವಣೆಗೆ ಅನುಗುಣವಾಗಿ ಸಜ್ಜಾಗಿ

Rashmi Kasaragodu
Updated On : 2 Mar 2013, 10:40 am

ಕನ್ನಡಪ್ರಭ ವಾರ್ತೆ, ಶಿವಮೊಗ್ಗ   ಮಾ. 1 ತಂತ್ರಜ್ಞಾನ ನಿರಂತರವಾಗಿ ಬದಲಾಗುತ್ತಿದ್ದು ಹೊಸ ರೂಪ ಪಡೆಯುತ್ತಿದೆ. ಇದಕ್ಕೆ ಅನುಗುಣವಾಗಿ ನಾವು ಸಜ್ಜುಗೊಳ್ಳಬೇಕು ಎಂದು ಭಾರತೀಯ ಸಾಂಖ್ಯಿಕ ಸಂಸ್ಥೆಯ ನಿಕಟಪೂರ್ವ ನಿರ್ದೇಶಕ ಪ್ರೊ.ಕಲ್ಯಾಣ ಬಿ.ಸಿನ್ಹಾ ಅಭಿಪ್ರಾಯಪಟ್ಟರು.
   ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಎಂಜಿನಿಯರಿಂಗ್ ಮತ್ತು ನಿರ್ವಹಣಾ ಶಾಸ್ತ್ರದ ಇತ್ತೀಚಿನ ವಿದ್ಯಮಾನಗಳು ಕುರಿತಂತೆ ಹಮ್ಮಿಕೊಂಡ 2 ದಿನಗಳ ರಾಷ್ಟ್ರಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಅಹಂ ಪ್ರಜ್ಞೆ: ಮನುಷ್ಯನ ಕುತೂಹಲ ಹಾಗೂ ಕ್ರಿಯಾಶೀಲತೆಯು ಹೊಸ ಆವಿಷ್ಕಾರಗಳಿಗೆ ನಾಂದಿಯಾಗಿದೆ. ಅನೇಕ ವಿಜ್ಞಾನಿಗಳು ಸತತ ಸಂಶೋಧನೆಯ ಫಲವಾಗಿ ಅನೇಕ ಹೊಸ ಆವಿಷ್ಕಾರಗಳನ್ನು ಮಾಡಿದರೂ ಅಹಂ ಪ್ರಜ್ಞೆಯಿಂದಾಗಿ ಅದನ್ನು ನಿರ್ವಹಿಸುವಲ್ಲಿ ಅವರು ವಿಫಲರಾಗುತ್ತಿದ್ದಾರೆ ಎಂದು ಹೇಳಿದರು.
ಆವಿಷ್ಕಾರ: ಕ್ರಿಯಾಶೀಲವಾದ ಜ್ಞಾನ ಹಾಗೂ ನಿರ್ವಹಣಾ ಜ್ಞಾನ ಸಂಪೂರ್ಣ ವಿಭಿನ್ನ ಕೌಶಲ್ಯಗಳು ಎಂದು ಅರಿಯುವ ಅಗತ್ಯವಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹೊಸ ಆವಿಷ್ಕಾರದ ಕಡೆ ಯುವಜನತೆ ಮನಸ್ಸು ಮಾಡುತ್ತಿಲ್ಲ. ಈ ನಿಟ್ಟಿನಲ್ಲಿ ಅವರನ್ನು ಸಂಶೋಧನೆಗೆ ತೊಡಗುವಂತೆ ಮಾಡುವ ಅಗತ್ಯತೆ ಹೆಚ್ಚಾಗಿದೆ ಎಂದು ತಿಳಿಸಿದರು.
ಸಂಶೋಧನೆ: ತಾಂತ್ರಿಕತೆ ಮಾನವನ ಇತಿಹಾಸದುದ್ದಕ್ಕೂ ಬೆಳೆದುಬಂದಿದ್ದು, ಅದು ನಿರಂತರ ಬದಲಾಗುತ್ತಿರುತ್ತದೆ. ಇದನ್ನು ಯುವ ಮನಸ್ಸುಗಳಿಗೆ ಮುಟ್ಟಿಸುವ ಕೆಲಸವಾಗಬೇಕಾಗಿದೆ. ಜಗತ್ತಿನ ತಂತ್ರಜ್ಞಾನ ಬೆಳವಣಿಗೆಗೆ 2500 ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಆರ್ಕಿಮಿಡಿಸ್ನ ಸಂಶೋಧನೆ ನಡೆದಾಗಿನಿಂದಲೂ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇದೆ. ಹಿಂದಿನ ತಂತ್ರಜ್ಞಾನ ಇಂದು ಪಳೆಯುಳಿಕೆಯಾಗುತ್ತದೆ. ಹೊಸ ಸಂಶೋಧನೆಗಳಿಗೆ ಹಳೆಯ ತಂತ್ರಜ್ಞಾನಗಳು ದಾರಿ ಮಾಡಿಕೊಡುತ್ತಿವೆ ಎಂದರು. ಪುರಾತನ ಕಾಲದಲ್ಲಿ ಸಮುದ್ರದಲ್ಲಿ ಸಾಗಲು ಕಟ್ಟಿಗೆಗಳ ದೋಣಿ ಬಳಸಲಾಗುತ್ತಿತ್ತು. ಇಂದು ಅದೇ ತಂತ್ರಜ್ಞಾನ ಅಭಿವೃದ್ಧಿಗೊಂಡು ದೊಡ್ಡ ಹಡಗುಗಳ ನಿರ್ಮಾಣಕ್ಕೆ ದಾರಿಯಾಗಿದೆ ಎಂದು ತಿಳಿಸಿದರು.
ಅಭಿವೃದ್ಧಿ: ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಸ್.ಎ. ಬಾರಿ ಮಾತನಾಡಿ, ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗುತ್ತಿವೆ. ವಿಜ್ಞಾನ, ತಂತ್ರಜ್ಞಾನಗಳೆಲ್ಲವೂ ತೀವ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿವೆ. ಇವುಗಳಿಗೆ ಅನುಗುಣವಾಗಿ ಇಂದಿನ ಶೈಕ್ಷಣಿಕ ಕ್ಷೇತ್ರವೂ ಬದಲಾಗುವ ಅಗತ್ಯವಿದೆ ಎಂದರು.
 ಇಂದು ನಾವು ಹಿಂದಿನ ಬ್ರಿಟಿಷರ ಕಾಲದ ಶಿಕ್ಷಣ ಪದ್ಧತಿಯನ್ನೇ ಮುಂದುವರೆಸಿಕೊಂಡು ಬರುತ್ತಿದ್ದೇವೆ. ನಮ್ಮ ವಿದ್ಯಾರ್ಥಿಗಳು ಮೆಕಾಲೆಯ ಇಂಗ್ಲಿಷ್ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾಭ್ಯಾಸ ಮಾಡಿ ನಿರುದ್ಯೋಗಿಗಳಾಗುತ್ತಿದ್ದಾರೆ ಎಂದ ಅವರು, ಇಂದಿನ ಕೈಗಾರಿಕೆಗಳು ಹಾಗೂ ಬಹುರಾಷ್ಟ್ರೀಯ ಕಂಪನಿಗಳಿಗೆ ಅಗತ್ಯವಿರುವ ಕೌಶಲ್ಯವನ್ನು ನಾವು ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ನೀಡಿ ಅವರನ್ನು ಪರಿಣಿತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
 ನಿವೃತ್ತ ಪ್ರಾಧ್ಯಾಪಕ ಅಖಿಲ ಸಿನ್ಹ ಮಾತನಾಡಿ, ಟೆಕ್ನಾಲಜಿ ಹಾಗೂ ಮ್ಯಾನೇಜ್ಮೆಂಟ್ ಎರಡೂ ಕ್ಷೇತ್ರಗಳೂ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಭಾರತದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ಪಂಡಿತರನ್ನು, ದಿಗ್ಗಜರನ್ನು ಕಾಣುತ್ತಿದ್ದೇವೆ. ಆದ್ದರಿಂದ ಉತ್ತಮ ಸಹಕಾರ ಹಾಗೂ ಸಾಂಘಿಕ ಪ್ರಯತ್ನದ ಮೂಲಕ ದೇಶವು ಪ್ರಗತಿ ಪಥದಲ್ಲಿ ಸಾಗಲು ಯುವಕರು ಯತ್ನಿಸಬೇಕೆಂದರು.
 ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಪಿಇಎಸ್ ಜಂಟಿ ಖಜಾಂಚಿ ಬಿ.ವೈ. ವಿಜಯೇಂದ್ರ ಮಾತನಾಡಿ, ಈ ಸಮ್ಮೇಳನದಿಂದ ಹಲವು ಹೊಸ ವಿಚಾರಗಳು ಮೂಡಿಬರಲಿ. ಹಾಗೆಯೇ ಸಂಶೋಧಕರು ಹಾಗೂ ವಿದ್ವಾಂಸರ ಜ್ಞಾನ, ಆಲೋಚನೆಗಳನ್ನು ಎಲ್ಲರಿಗೂ ತಲುಪಿ ಆ ಮೂಲಕ ಉಪಯುಕ್ತವಾಗಲಿ ಎಂದು ಹಾರೈಸಿದರು.
 ಸಮಾರಂಭದಲ್ಲಿ ರಾಷ್ಟ್ರಮಟ್ಟದ ಸಮ್ಮೇಳನದ ಮಾಹಿತಿ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು. ಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಎಸ್.ವೈ. ಉಮಾದೇವಿ ಉಪಸ್ಥಿತರಿದ್ದರು. ಧಾರಿಣಿ ರಾವ್ ಪ್ರಾರ್ಥಿಸಿದರು. ಪ್ರಾಂಶುಪಾಲ ಡಾ. ಸುರೇಶ್ ಚಂದ್ರ ಮೋಹನ್ ಸ್ವಾಗತಿಸಿದರು. ಸಮ್ಮೇಳನದ ಸಂಚಾಲಕ ಡಾ. ರವಿ ಎಂ. ಯಡಹಳ್ಳಿ ಪ್ರಾಸ್ತಾವಿಕವಾಗಿ ಮಾತಮಾಡಿದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಆರ್. ನಾಗರಾಜ್ ವಂದಿಸಿದರು. ಸಿಎಸ್ಇ ವಿಭಾಗದ ಮುಖ್ಯಸ್ಥ ವಿನಯ್ ಎಸ್ ಹಾಗೂ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement