ಬಸ್ ಬೈಕ್ ಡಿಕ್ಕಿ : ಪೇದೆ ಸಾವು
ಕನ್ನಡಪ್ರಭ ವಾರ್ತೆ, ಸಾಗರ ಮಾ.1 ತಾಲೂಕಿನ ಕಾರ್ಗಲ್ ಚೈನಾ ಗೇಟ್ ಸಮೀಪದಲ್ಲಿ ಕುಮುದ್ವತಿ ಬಸ್ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಜೋಗ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೊನ್ನೇಗೌಡ (47) ಎಂಬುವವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಕುಮುದ್ವತಿ ಬಸ್ ಜೊಗದ ಕಡೆಯಿಂದ ಸಾಗರದ ಕಡೆಗೆ ಸಾಗುತ್ತಿತ್ತು. ಸಾಗರದ ಕಡೆಯಿಂದ ಕಾರ್ಗಲ್ ಕಡೆಗೆ ಬರುತ್ತಿದ್ದ ಹೊನ್ನೇಗೌಡರು ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಈ ಸಂಬಂಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.