ಮಹಿಳೆಯರಿಂದಲೇ ಮಹಿಳೆ ಶೋಷಣೆ: ಆತಂಕ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ ಮಾ. 1
ಇಂದು ಮಹಿಳೆ ಒಂದಿಲ್ಲೊಂದು ಕಾರಣಕ್ಕಾಗಿ ಪ್ರತಿನಿತ್ಯ ಶೋಷಣೆಗೊಳಗಾಗುತ್ತಿದ್ದಾಳೆ. ಅದರಲ್ಲೂ ಮಹಿಳೆಯರಿಂದಲೇ ಮಹಿಳೆ ಶೋಷಣೆಗೊಳಗಾಗುತ್ತಿರುವುದು ವಿಷಾದದ ಸಂಗತಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜಶೇಖರ್ ಎಂ. ಶೆಟ್ಟರ್ ಅಭಿಪ್ರಾಯಪಟ್ಟರು.
ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಕೀಲರ ಸಂಘ, ಆರೋಗ್ಯ ಇಲಾಖೆ, ವಾರ್ತಾ ಇಲಾಖೆ ಹಾಗೂ ರಾಷ್ಟ್ರೀಯ ಕಾನೂನು ಕಾಲೇಜು ಸಂಯುಕ್ತಾಶ್ರಯದಲ್ಲಿ ಏರ್ಪಡಾಗಿದ್ದ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ, ವರದಕ್ಷಿಣೆ ನಿಷೇಧ ಕಾಯಿದೆ ಮತ್ತು ಮಹಿಳೆಯರಿಗೆ ಸಂಬಂಧಪಟ್ಟ ಇತರೆ ಕಾಯಿದೆಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕೌಟುಂಬಿಕ ದೌರ್ಜನ್ಯ: ಮಹಿಳೆಯರು ಶಿಕ್ಷಿತರಾಗುವುದರಿಂದ ತಮ್ಮ ಮೇಲೆ ಅವ್ಯಾಹತವಾಗಿ ಆಗುತ್ತಿರುವ ದೌರ್ಜನ್ಯ, ಹಿಂಸೆ ಮತ್ತು ಕೌಟುಂಬಿಕ ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸಬಹುದಾಗಿದೆ ಎಂದ ಅವರು, ಸಮಾಜದಲ್ಲಿ ಕೆಲವರು ಹೆಣ್ಣು ಶಿಶುವನ್ನು ಭ್ರೂಣಾವಸ್ಥೆಯಲ್ಲಿ ಹೊಸಕಿ ಹಾಕುವ ಹೀನಕೃತ್ಯಕ್ಕೆ ಮುಂದಾಗಿದ್ದಾರೆ. ಅಷ್ಟೇ ಅಲ್ಲ ಪೋಷಕರು ಹೆಣ್ಣುಮಕ್ಕಳ ಉನ್ನತಿಗೆ ನಿರ್ಲಕ್ಷಿಸುತ್ತಿದ್ದಾರೆ ಜೊತೆಗೆ ಅವರಿಗೆ ಅಗತ್ಯ ಶಿಕ್ಷಣ ಕೊಡಿಸುವಲ್ಲಿಯೂ ತಾತ್ಸಾರ ಮನೋಭಾವ ಹೊಂದಿದ್ದಾರೆ. ಅವರೆಲ್ಲರ ಈ ಮನೋಭಾವ ಬದಲಾಯಿಸಲೇಬೇಕಾದ ಅಗತ್ಯವಿದೆ ಎಂದರು.
ಗ್ರಾಮೀಣ ಪ್ರದೇಶದ ಅಶಕ್ತ ಮಹಿಳೆಯರು ಪರಿಸ್ಥಿತಿಯ ಒತ್ತಡದಿಂದಾಗಿ ಅನಿವಾರ್ಯವಾಗಿ ದೌರ್ಜನ್ಯ ಸಹಿಸಿಕೊಳ್ಳಬೇಕಾದ ಸ್ಥಿತಿಯಲ್ಲಿದ್ದಾರೆ. ಮಹಿಳೆಗೆ ಕೌಟುಂಬಿಕ ವ್ಯವಸ್ಥೆಯಿಂದಲೇ ಸಮಾನತೆ ದೊರೆಯುವಂತಾಗಬೇಕು.
ಸರ್ಕಾರವು ಮಹಿಳೆಯರ ಶ್ರೇಯೋಭಿವೃದ್ಧಿಗೆ ರೂಪಿಸಿರುವ ಕಾನೂನುಗಳ ಕುರಿತು ಶೋಷಿತ ಮಹಿಳೆಯರಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಅಶೋಕ ಜಿ. ಭಟ್ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಸಿಕಾಂತ್ ಸಂಥಿಲ್, ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಂಶುಪಾಲ ಜಗದೀಶ್ ಜಿ.ಆರ್., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಎನ್. ಬಸವರಾಜು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಿವಣ್ಣರೆಡ್ಡಿ ಮೊದಲಾದವರು ಕಾರ್ಯಕ್ರದ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.