ತಾಪಂ ಇಒ ವರ್ತನೆಗೆ ಸದಸ್ಯರ ಆಕ್ರೋಶ
ಕನ್ನಡಪ್ರಭ ವಾರ್ತೆ, ಹೊಸನಗರ ಮಾ.2
ತಾಲೂಕಿನ ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ ಬಾರಿ ಕಂಡುಬಂದ ಭಾರಿ ನೆರೆಹಾವಳಿಯಿಂದಾಗಿ ಹಾನಿಗೊಳಗಾಗಿದ್ದರು ಖಾತ್ರಿ ಯೋಜನೆಯಡಿ ದುರಸ್ತಿ ಕಾಮಗಾರಿಗೆ ಕಾರ್ಯಾದೇಶ ನೀಡಲು ತಾಪಂ ಇಒ ಮೀನಮೇಷ ಎಣಿಸುತ್ತಿದ್ದಾರೆ ಎಂದು ತಾಪಂ ಸದಸ್ಯ ಬಿ.ಇ. ಮಂಜುನಾಥ್ ಮತ್ತು ಕರಿಮನೆ ಗ್ರಾಪಂ ಪ್ರಭಾರ ಅಧ್ಯಕ್ಷ ನರ್ತಿಗೆ ಸುರೇಶ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಹಾವಳಿಯಿಂದ ಅನಾಹುತಕ್ಕೀಡಾದ ಕರಿಮನೆ ಗ್ರಾಪಂ ವ್ಯಾಪ್ತಿಗೆ ವಿಶೇಷ ಅನುದಾನದಡಿ 36 ಲಕ್ಷ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಕ್ರಿಯಾಯೋಜನೆ ಸಿದ್ಧಗೊಂಡಿದ್ದರೂ ಕಾರ್ಯಾದೇಶ ನೀಡುತ್ತಿಲ್ಲ. ಇನ್ನೆರಡು ತಿಂಗಳಲ್ಲಿ ಮತ್ತೆ ಮಳೆಗಾಲ ಪ್ರಾರಂಭಗೊಳ್ಳಲಿದ್ದು, ಕಾಮಗಾರಿ ನಡೆಸುವುದು ಯಾವಾಗ ಎಂದು ಪ್ರಶ್ನಿಸಿದರು.
ಆರೋಪ: ಒಟ್ಟು 62 ಕಾಮಗಾರಿ ಗುರುತಿಸಿ ಕ್ರಿಯಾಯೋಜನೆ ಮಾಡಲಾಗಿದೆ. ಅಲ್ಲದೆ ಡಿಸಿಎಂ ಈಶ್ವರಪ್ಪ, ಜಿಪಂ ಸದಸ್ಯೆ ಶುಭಾ ಕೃಷ್ಣಮೂರ್ತಿ ಅನಾಹುತ ಕಂಡ ಪ್ರದೇಶಕ್ಕೆ ಭೇಟಿ ನೀಡಿ ತ್ವರಿತ ಕಾಮಗಾರಿಗೆ ಒತ್ತು ನೀಡುವಂತೆ ಸೂಚಿಸಿದ್ದರು. ಆದರೆ ಇಒ ರವಿಕುಮಾರ್ ಕಾರ್ಯಾದೇಶ ನೀಡಲು ಹಿಂದೇಟು ಹಾಕುತ್ತಿರುವುದರಿಂದ ರೈತರು ತೀವ್ರ ಅಸಮದಾನಗೊಂಡಿದ್ದಾರೆ ಎಂದರು.
ನೆರೆಹಾವಳಿಯಲ್ಲಿ ಹಾನಿಗೀಡಾದ 42 ಕೆರೆದಂಡೆಗಳನ್ನು ಗುರುತಿಸಲಾಗಿದ್ದು, ತುರ್ತು ಕಾಮಗಾರಿ ಮಾಡಬೇಕಿದೆ.ಇಲ್ಲದೆ ಹೋದರೆ ಮುಂದಿನ ಮಳೆಗಾಲದಲ್ಲಿ ಇನ್ನಷ್ಟು ಹಾನಿಯಾಗುತ್ತದೆ ಮಾತ್ರವಲ್ಲ. ನೀರು ಮತ್ತೆ ಕೃಷಿ ಜಮೀನಿಗೆ ನುಗ್ಗುತ್ತದೆ. ಇನ್ನಾದರೂ ಇಒ ಕೂಡಲೇ ಕಾರ್ಯಾದೇಶ ನೀಡಲಿ. ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಸಿದ್ದಾರೆ.