ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಾಲಾ ಪ್ರವೇಶಾತಿ ನೀತಿಗೆ ವಿರೋಧ

Mainashree
Updated On : 3 Mar 2013, 12:18 pm

ಕನ್ನಡಪ್ರಭವಾರ್ತೆ, ದಾವಣಗೆರೆ, ಮಾ.2
ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆ ಇರುವ ವಾರ್ಡ್‌ನ ನಿವಾಸಿಗಳ ಮಕ್ಕಳಿಗೆ ಮಾತ್ರ ಶಾಲಾ ಪ್ರವೇಶಾತಿ ನೀಡಲು ಮುಂದಾದ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಇಲಾಖೆ ಕ್ರಮವನ್ನು ಖಂಡಿಸಿ ಶಿಕ್ಷಣ ಹಕ್ಕು ಕಾಯ್ದೆ ಹೋರಾಟ ಸಮಿತಿ ನೇತೃತ್ವದಲ್ಲಿ ನಗರದ ಡಿಡಿಪಿಐ ಕಚೇರಿಗೆ ಶನಿವಾರ ಪಾಲಕರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ನಗರದ ಜಯದೇವ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯುದ್ದಕ್ಕೂ ಶಿಕ್ಷಣ ಹಕ್ಕು ಕಾಯ್ದೆ ಪರಿಣಾಮಕಾರಿ ಅನುಷ್ಟಾನಕ್ಕೆ ಮೀನ- ಮೇಷ ಎಣಿಸುತ್ತಿರುವ ಶಿಕ್ಷಣ ಇಲಾಖೆ ಅಧಿಕಾರಿ ವರ್ಗ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಟ ಸಮಿತಿ ನೇತೃತ್ವದಲ್ಲಿ ಘೋಷಣೆ ಕೂಗುತ್ತಾ ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿದರು.
ಖಂಡನೀಯ: ಇದೇ ವೇಳೆ ಮಾತನಾಡಿದ ಸಮಿತಿ ಮುಖಂಡ ಬಿ.ಎಂ. ಸತೀಶ, ಬಡ ಪಾಲಕರ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿದೆ. ಆದರೆ, ಅದೇ ಸರ್ಕಾರಿ ಅಧಿಕಾರಿಗಳು ಕಾಯ್ದೆ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿರುವುದು ಖಂಡನೀಯ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ, ರಾಜ್ಯ ಸರ್ಕಾರಗಳು ಆರ್ಥಿಕ, ಸಾಮಾಜಿಕ ಬಡ ಕುಟುಂಬಗಳ ಮಕ್ಕಳಿಗೆ ಶಿಕ್ಷಣ ಹಕ್ಕು ಕಾಯ್ದೆ ರೂಪಿಸಿವೆ ಎಂದರು.
ಅಧಿಕಾರಿಗಳು ವಿಫಲ: ಆದರೆ, ಖಾಸಗಿ ಶಾಲೆಗಳಲ್ಲಿ ಉಚಿತ ಪ್ರವೇಶ ನೀಡುವ ಉತ್ತಮ ಯೋಜನೆಯನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ತಮಗೆ ತೋಚಿದಂತೆ ಅನುಷ್ಠಾನಗೊಳಿಸುತ್ತಿದ್ದಾರೆ. ಸರ್ಕಾರದ ಸುತ್ತೋಲೆ, ಕಾಯ್ದೆ ಮಾರ್ಗಸೂಚಿ ಓದಿ, ಅರ್ಥೈಸಿಕೊಳ್ಳುವಲ್ಲಿ ಶಿಕ್ಷಣ ಅಧಿಕಾರಿಗಳು ವಿಫಲವಾಗಿದ್ದು, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲಕರವಾಗಿದೆ. ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಯೊಬ್ಬರು ಕಾಯ್ದೆ ಬಗ್ಗೆ, ನ್ಯಾಯ ಕೇಳಲು ಹೋದ ಬಡ ಪಾಲಕರನ್ನು ಅನುಚಿತವಾಗಿ ನಡೆಸಿಕೊಂಡಿದ್ದು ಖಂಡನೀಯ ಎಂದು ಅವರು ಆಕ್ಷೇಪಿಸಿದರು.
ಸಾಮಾಜಿಕ ನ್ಯಾಯ ಒದಗಿಸಿ: ಶಾಲೆಗಳಿಗೆ ಒಂದು ಕಿ.ಮೀ. ವ್ಯಾಪ್ತಿಯ ಸುತ್ತಮುತ್ತಲ ವ್ಯಾಪ್ತಿಯ ಮಕ್ಕಳಿಗೆ ಪ್ರವೇಶಾವಕಾಶ ಕಲ್ಪಿಸಲು ಸುತ್ತೋಲೆಯಲ್ಲಿದೆ. ಆದರೆ, ಅಧಿಕಾರಿಗಳು ಶಾಲೆಗಳಿರುವ ವಾರ್ಡ್ ಮಕ್ಕಳಿಗೆ ಮಾತ್ರ ಪ್ರವೇಶಾವಕಾಶ ನೀಡುತ್ತಿದ್ದಾರೆ. ಕೆಲ ವಾರ್ಡ್‌ಗಳಲ್ಲಿ ಶಾಲೆಗಳೇ ಅಲ್ಲ. ಅಂತಹ ಭಾಗದ ಮಕ್ಕಳಿಗೆ ಸಾಮಾಜಿಕ ನ್ಯಾಯ, ಶಿಕ್ಷಣ ಒದಗಿಸಬೇಕಾದ ಅಧಿಕಾರಿಗಳ ಜವಾಬ್ಧಾರಿಯ ಹೊರಲು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಿತಿ ಮುಖಂಡ ಕೆ.ಟಿ. ಗೋಪಾಲಗೌಡ ಮಾತನಾಡಿ, ಪಾರದರ್ಶಕವಾಗಿ ಮಕ್ಕಳಿಗೆ ಪ್ರವೇಶ ಕಲ್ಪಿಸಿಕೊಡಬೇಕೆಂಬ ಮಾತಿಗೆ ವ್ಯತಿರಿಕ್ತವಾಗಿ ಶಿಕ್ಷಣಾಧಿಕಾರಿ, ಖಾಸಗಿ ಶಿಕ್ಷಣ ಸಂಸ್ಥೆ ನಡೆದುಕೊಂಡಿವೆ. ಈ ಹಿನ್ನೆಲೆಯಲ್ಲಿ ಈವರೆಗಿನ ಎಲ್ಲಾ ದಾಖಲಾತಿಯನ್ನು ರದ್ದುಪಡಿಸಿ, ಹೊಸದಾಗಿ ಮಕ್ಕಳಿಗೆ ಪ್ರವೇಶಾವಕಾಶ ನೀಡಬೇಕು. ಶಾಲೆಯ ಒಂದು ಕಿ.ಮೀ. ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೂ ಅನ್ವಯವಾಗದಂತೆ ಪ್ರವೇಶಾವಕಾಶ ಕಲ್ಪಿಸಬೇಕು. ಆರ್‌ಟಿಇ ಕಾಯ್ದೆ ಪ್ರಕಾರ ಬಡ ಮಕ್ಕಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಮುಖಂಡರಾದ ಎಚ್.ಸಿ. ಗುಡ್ಡಪ್ಪ, ಕಂಚಿಕೆರೆ ನಾಗರಾಜ, ವೀಣಾ ಮಂಜುನಾಥ, ಗೋಣಿವಾಡ ಮಂಜುನಾಥ, ಕಡತಿ ಅಂಜಿನಪ್ಪ, ಆರ್. ಸಲ್ಮಾಬಾನು, ಆವರಗೆರೆ ಈಶ್ವರ, ಎಸ್.ಕೆ. ಆದಿಲ್ ಖಾನ್, ವಸಂತಕುಮಾರ, ಕೆ. ಕುಬೇಂದ್ರ, ಆಶಾ, ಡಿ.ಎಂ. ಪ್ರಭು ಮತ್ತಿತರರು ಇದ್ದರು.
ಡಿಡಿಪಿಐ ಕಚೇರಿಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾಕಾರರು ನಂತರ ಕಚೇರಿ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ಮುಖಾಂತರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement