'ಈಶ್ವರಪ್ಪರಿಂದ ಹೊಸ ಯೋಜನೆ ಇಲ್ಲ'
ಶಿವಮೊಗ್ಗ: ನಾನು ಅಧಿಕಾರದಿಂದ ಇಳಿದ ಮೇಲೆ ಯಾವುದಾದರೂ ಒಂದು ಹೊಸ ಯೋಜನೆಯನ್ನು ಜಿಲ್ಲೆಗೆ ತಂದಿದ್ದೇನೆ ಎಂದು ಈಶ್ವರಪ್ಪ ಹೇಳಲಿ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸವಾಲೆಸೆದಿದ್ದಾರೆ.
ನಾನು ಅಧಿಕಾರದಲ್ಲಿದ್ದಾಗ ಮಾಡಿದ ಯೋಜನೆಗಳನ್ನೇ ತಾವು ಮಾಡಿದ್ದೆಂದು ಹೇಳುತ್ತಿದ್ದಾರೆಯೇ ಹೊರತು ಕಳೆದ ಒಂದೂವರೆ ವರ್ಷದಲ್ಲಿ ಹೊಸ ಯೋಜನೆಗಳೇನೂ ಇಲ್ಲ ಎಂದು ಅವರು ಟೀಕಿಸಿದರು. ಸೋಮವಾರ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 1 ಲಕ್ಷ ಕೋಟಿ ಬಜೆಟ್ನ್ನು ಮಂಡಿಸಿದ್ದಾರೆ. ಆದರೆ, ಅದರಲ್ಲಿ ಅರ್ಧದಷ್ಟು ಹಣವನ್ನೂ ಸಹ ರಾಜ್ಯದ ಅಭಿವೃದ್ಧಿಗೆ ಖರ್ಚು ಮಾಡಿಲ್ಲ ಎಂದರು.
ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಹಗರಣಗಳೂ ಸಹ ಸದ್ಯವೇ ಬೆಳಕಿಗೆ ಬರಲಿವೆ ಎಂದು ಹೇಳಿದ ಅವರು, ನನ್ನ ಅವಧಿಯ ಯೋಜನೆಗಳನ್ನೇ ತಾವು ಮಾಡಿದ್ದೆಂದು ಹೇಳುವ ಇವರಿಬ್ಬರಿಗೂ ನನ್ನನ್ನು ಟೀಕಿಸುವ ನೈತಿಕ ಹಕ್ಕು ಇಲ್ಲ. ನಗರದ ಅಭಿವೃದ್ಧಿಗೆ ಈಶ್ವರಪ್ಪ ಏನು ಮಾಡಿದ್ದಾರೆಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಶಿವಮೊಗ್ಗ ನಗರದ ಬಡವರಿಗೆ ನಿವೇಶನ ಕೊಡಿಸಲು ಅವರಿಗೆ ಆಗಿಲ್ಲ. ಬರೀ ಪೊಳ್ಳು ಭರವಸೆ, ಆಶ್ವಾಸನೆ ನೀಡುತ್ತಾ ಜನರಿಗೆ ಮೋಸ ಮಾಡಿದ್ದಾರೆ ಎಂದರು. ಶಿವಮೊಗ್ಗ ನಗರಸಭೆಯಲ್ಲಿ ಕೆಜೆಪಿ ಅಧಿಕಾರಕ್ಕೆ ಬರುವುದು ಖಚಿತ. ಬಿಜೆಪಿಗೆ ಮುಖಭಂಗವಾಗಲಿದೆ ಎಂದರು.