ಪಕ್ಷ ದೊಡ್ಡದು ಎಂಬುದನ್ನು ತೋರಿಸಿ
ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಮಾ.4
ಈ ಹಿಂದೆ ದೇಶದಲ್ಲಿ ತುರ್ತುಸ್ಥಿತಿ ಇದ್ದಾಗ ರಾಷ್ಟ್ರನಾಯಕರೊಂದಿಗೆ ಜೈಲಿಗೆ ಹೋಗಿ, ದೇವದುರ್ಲಭ ಪಕ್ಷವೆಂದಿದ್ದ ಯಡಿಯೂರಪ್ಪನವರನ್ನು ಬಿಜೆಪಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿತು, ಆದರೆ ಇದೀಗ ಮತ್ತೊಂದು ಜನ್ಮದಲ್ಲೂ ಬಿಜೆಪಿಗೆ ಬರುವದಿಲ್ಲವೆಂದಿರುವ ಯಡಿಯೂಪ್ಪನವರಿಗೆ ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದನ್ನು ಈ ಚುನಾವಣೆಯಲ್ಲಿ ಇಲ್ಲಿಯ ಜನತೆ ತೋರಿಸಿಕೊಡಬೇಕು ಎಂದು ರಾಜ್ಯ ಉಪಮುಖ್ಯಮಂತ್ರಿ ಈಶ್ವರಪ್ಪ ಹೇಳಿದರು.
ಶಿರಾಳಕೊಪ್ಪ ಪಟ್ಟಣದಲ್ಲಿ ಸ್ಥಳಿಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಆಶ್ರಯದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಜೆಡಿಎಸ್ ಅನ್ನು ಅಪ್ಪ-ಮಕ್ಕಳ ಪಕ್ಷವೆಂದು ಜರಿದಿದ್ದರು. ಆದರೆ ಮುಖ್ಯಮಂತ್ರಿ ಆದಮೇಲೆ ಸಂಸತ ಚುನಾವಣೆಗೆ ತಮ್ಮ ಮಗನನ್ನು ಅಭ್ಯರ್ಥಿ ಎಂದು ಚುನಾವಣೆಗೆ ನಿಲ್ಲಿಸಿದರು. ಆದರೆ, ನಾವೆಲ್ಲರೂ ಪಕ್ಷದ ಆದೇಶವೆಂದು ಅವರ ಮಗ ರಾಘವೇಂದ್ರನನ್ನು ಗೆಲ್ಲಿಸಿದೆವು. ಪಕ್ಷ ದೊಡ್ಡದ್ದು ಎಂಬುದನ್ನು ತೋರಿಸಿಕೊಟ್ಟ ನಾವು ಮತ್ತೊಮ್ಮೆ ಪಕ್ಷಕಟ್ಟಿ ಪ್ರಾಮಾಣಿಕ ಪಕ್ಷ ಎಂಬುದನ್ನು ತೋರ್ಪಡಿಸೋಣ ಎಂದರು.