ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತದಾನ ಮಾಡಲು ಮರೆಯದಿರಿ

Lingaraj Badiger
Updated On : 6 Mar 2013, 10:49 am

ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.5  ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆಯ ಚಿಕ್ಕ ಕಾರ್ಯಕ್ರಮಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿವೆ.
   ಜಿಲ್ಲಾಡಳಿತವು ಸಿಬ್ಬಂದಿ ನಿಯೋಜನೆ, ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಸಜ್ಜುಗೊಳಿಸುವುದು, ಬಂದೋಬಸ್ತ್ ಇತ್ಯಾದಿ ಕೆಲಸಗಳು ಈಗಾಗಲೈ ಮುಗಿದಿವೆ. ಸ್ಪರ್ಧಿಗಳು ಮತದಾರರ ಮನವೊಲಿಸಲು ತಮ್ಮ ಕೈಲಾಗುವ ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದ್ದಾರೆ.
     ಆದರೆ, ಮತದಾರ ಮತದಾನದ ಹಕ್ಕು ಚಲಾಯಿಸುವ ಮುನ್ನ ಮತದಾರನಿಗೆ ನೀಡಿರುವ ಹಕ್ಕಿನ ಸಂಪೂರ್ಣ ವಿವರ ತಿಳಿದುಕೊಳ್ಳುವ ಅಗತ್ಯವಿದೆ. ಹಕ್ಕು ಚ್ಯುತಿಯಾದಾಗ ಕೈಗೊಳ್ಳಬಹುದಾದ ಹಲವು ಕ್ರಮಗಳಿಗೆ ಕಾನೂನಿನಲ್ಲಿ ಅವಕಾಶಗಳಿವೆ. ಮತದಾನವನ್ನು ನಿರಾಕರಿಸುವ ಅವಕಾಶವೂಕಾನೂನಿನಲ್ಲಿದೆ.
  ಆದರೆ ಮತಗಟ್ಟೆಗೆ ಬರುವುದನ್ನು ಮರೆಯಬೇಡಿ. ನಿಮ್ಮ ಹಕ್ಕು ಚಲಾಯಿಸಿ.
ಮತದಾನ ಹೀಗೆ: ಮತದಾನ ಮಾಡಲು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವುದು ಕಡ್ಡಾಯ. ಮತಗಟ್ಟೆಯನ್ನು ಪ್ರವೇಶಿಸಿದ ನಂತರ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪ್ಯಾನ್ ಕಾರ್ಡ್ ಸೇರಿದಂತೆ ನಿಮ್ಮ ಫೋಟೋ ಇರುವ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ತೋರಿಸಬೇಕು. ನಂತರ ಮತದಾನ ಮಡಬಹುದು.
   ಇದೇ ಮೊದಲ ಬಾರಿ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನ ಮಾಡಲು ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತಿದೆ.
ಮತದಾನ ಸ್ಥಳದಲ್ಲಿ ನಿಂತು ಚುನಾವಣಾಧಿಕಾರಿ ಸೂಚನೆಗೆ ಕಾದು, ನಂತರ ಮತದಾನ ಮಾಡಿ.
   ನೀವು ಯಾರಿಗೆ ಮತ ನೀಡಬೇಕೆಂದಿದ್ದೀರೋ ಅವರ ಹೆಸರು, ಚಿಹ್ನೆಯ ಮುಂದೆ ಇರುವ ನೀಲಿ ಬಣ್ಣದ ಬಟನ್ ಒಮ್ಮೆ ಮಾತ್ರ ಒತ್ತಿ. ಈ ಹೆಸರಿನ ಎದುರಿಗಿರುವ ಕೆಂಪು ದೀಪ ಹತ್ತಿ ಆರುತ್ತದೆ. ಜತೆಗೆ ಬೀಪ್ ಶಬ್ದ ಬಂದರೆ ನಿಮ್ಮ ಮತ ಚಲಾವಣೆ ಆಗಿದೆ ಎಂದರ್ಥ.
   ರಹಸ್ಯ ಮತದಾನ ಮುಖ್ಯ ಉದ್ದೇಶ. ನೀವು ಅಂಗವಿಕಲರಾಗಿದ್ದರೆ, ವಯೋವೃದ್ಧರಾಗಿದ್ದರೆ ಮತದಾನಕ್ಕೆ 18 ವರ್ಷದೊಳಗಿನವರ ನೆರವು ಪಡೆಯಬಹುದು.
ಮತದಾನಕ್ಕೆ ಸವಾಲು: ನೀವು ಮತದಾನ ಮಾಡುವ ಮುನ್ನವೇ ಮತಗಟ್ಟೆಯಲ್ಲಿರುವ ಯಾವುದಾದರೂ ಅಭ್ಯರ್ಥಿಯ ಏಜೆಂಟರು ನಿಮಗೂ, ಮತಪಟ್ಟಿಯಲ್ಲಿರುವ ಹೆಸರಿಗೂ ತಾಳೆಯಾಗುತ್ತಿಲ್ಲ ಎಂದು ಆಕ್ಷೇಪವೆತ್ತಬಹುದು.
   ಆಗ ಮತಗಟ್ಟೆ ಅಧಿಕಾರಿ ಇದನ್ನು ಸಾಬೀತುಪಡಿಸುವಂತೆ ಏಜೆಂಟ್‌ಗೆ ಸೂಚಿಸಬಹುದು. ಜತೆಗೆ, ನಿಮ್ಮ ಗುರುತಿಗೆ ದಾಖಲೆ ನೀಡಲು ತಿಳಿಸಬಹುದು.
 ಏಜೆಂಟ್ ನಿಮ್ಮ ಗುರುತನ್ನು ಸಾಬೀತು ಮಾಡದಿದ್ದರೆ ನೀವು ಮತದಾನ ಮಾಡಲಾಗದು. ಮತಗಟ್ಟೆ ಅಧಿಕಾರಿಯೇ ನಿಮ್ಮನ್ನು ಪೊಲೀಸರ ವಶಕ್ಕೆ ಕೊಡಬಹುದು.
ಮತ ಚಲಾವಣೆಯಾಗಿದ್ದರೆ: ನೀವು ಮತಗಟ್ಟೆಗೆ ಬರುವ ಮುನ್ನವೇ ನಿಮ್ಮ ಮತವನ್ನು ಮತ್ಯಾರೋ ಚಲಾವಣೆ ಮಾಡಿದ ಘಟನೆಯೂ ಸಾಮಾನ್ಯ. ಆಗ ಸುಮ್ಮನೆ ಮತಗಟ್ಟೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುವ ಅಗತ್ಯವಿಲ್ಲ.
   ನೀವು ಟೆಂಡರ್ಡ್ ಮತ ಹಾಕುವುದಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಇವಿಎಂ ಬಳಸುತ್ತಿದ್ದರೂ ಆ ಸಂದರ್ಭದಲ್ಲಿ ನಿಮಗೆ ಪ್ರತ್ಯೇಕ ಮತಪತ್ರ ನೀಡಲಾಗುತ್ತದೆ.
 ನೀವು ಟೆಂಡರ್ಡ್ ಮತದಾರ ಪಟ್ಟಿಯಲ್ಲಿ ಸಹಿ ಮಾಡಿ, ಈ ಮತಪತ್ರವನ್ನು ಪಡೆದು ಮತ ಚಲಾಯಿಸಬಹುದು. ಇದನ್ನು ಪ್ರತ್ಯೇಕವಾಗಿ ಇರಿಸಲಾಗುತ್ತದೆ.

ಹೀಗೆ ತಿರಸ್ಕರಿಸಿ...
ಚುನಾವಣಾ ಕಣದಲ್ಲಿರುವ ಯಾವ ಅಭ್ಯರ್ಥಿಗೂ ಮತ ನೀಡಲು ನಿಮಗೆ ಇಚ್ಛೆ ಎಂದು ನೀವು ಭಾವಿಸಿದರೆ ಮತದಾನ ಮಾಡುವುದನ್ನು ತಿರಸ್ಕರಿಸಬಹುದು.
   ನೀವು ಮತಗಟ್ಟೆ ಪ್ರವೇಶಿಸಿ, ಮತದಾರರ ರಿಜಿಸ್ಟರ್‌ಗೆ ಸಹಿ ಮಾಡಿದ ನಂತರ ನೀವು ಮತ ಚಲಾಯಿಸುವುದಿಲ್ಲ ಎಂದು ಮತಗಟ್ಟೆ ಅಧಿಕಾರಿಗೆ ಹೇಳಬಹುದು. ಆಗ ಅವರು ಮತದಾರರ ರಿಜಿಸ್ಟರ್‌ನಲ್ಲಿ ನೀವು ಮತದಾನ ತಿರಸ್ಕರಿಸುವುದಾಗಿ ಷರಾ ಬರೆದು ಅದಕ್ಕೆ ನಿಮ್ಮ ಸಹಿ ಪಡೆಯುತ್ತಾರೆ.

-ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement