ವಿಧಾನಸಭಾ ಚುನಾವಣೆಗೆ ಇಂದೇ ಪ್ರಿಪರೇಟರಿ
ಕಪ್ರ ವಾರ್ತೆ, ಶಿವಮೊಗ್ಗ ಮಾ.5
ಗುರುವಾರ ನಡೆಯುವ ಸ್ಥಳೀಯ ಸಂಸ್ಥೆಯ ಜಿಲ್ಲೆಯ ಪಾಲಿಗಂತೂ ಮಹತ್ವದ್ದು. ಮುಂದಿನ ಚುನಾವಣೆಯಲ್ಲಿ ಹೇಗೆ ಗೆಲ್ಲುತ್ತಾರೋ ನೋಡೋಣ ಎಂದು ಯಡಿಯೂರಪ್ಪನವರ ಗುಡುಗನ್ನು ಆಲಿಸಿರುವ ಈಶ್ವರಪ್ಪನವರಿಗೆ, ಕಾಂಗ್ರೆಸ್ ಕದ ತಟ್ಟುತ್ತಿರುವ ಬೇಳೂರು ಗೋಪಾಲಕೃಷ್ಣರಿಗೆ, ಬಂಗಾರಪ್ಪ ಪುತ್ರರ ನಡುವೆ ತಿಣುಕಾಡುತ್ತಿರುವ ಹಾಲಪ್ಪನವರಿಗೆ, ಭದ್ರಾವತಿಯಲ್ಲಿ ಅಪ್ಪಾಜಿಯವರ ಪೈಪೋಟಿ ತಡೆಯಲು ಹೆಣಗುತ್ತಿರುವ ಸಂಗಮೇಶ್ ಅವರಿಗಂತೂ ಈ ಚುನಾವಣೆ ಪ್ರತಿಷ್ಠೆಯದ್ದೇ.
ಇನ್ನು ಕೆಲವೇ ತಿಂಗಳ ಅಂತರದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ದಿಕ್ಸೂಚಿಯಂತೆ ನಡೆಯುತ್ತಿರುವ ಈ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಜಿಲ್ಲೆಯ ಹಾಲಿ ಮಾಜಿ ಶಾಸಕರು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ತಮ್ಮ ಪಾಲಿಗೆ ಸೇನಾಧಿಪತಿಗಳನ್ನು ಸೃಷ್ಟಿಸಿಕೊಳ್ಳಲು ಸ್ಥಳೀಯ ಸಂಸ್ಥೆ ಚುನಾವಣೆ ಒಂದು ಅವಕಾಶ. ಹೀಗಾಗಿ ತಮ್ಮ ಬೆಂಬಲಿಗರನ್ನು ಈ ಚುನಾವಣೆಯಲ್ಲಿ ಗೆಲ್ಲಿಸಲು ನೇರವಾಗಿ ತಂತ್ರಗಳನ್ನು ಹೂಡಿದ್ದಾರೆ.
ಅಷ್ಟೇ ಅಲ್ಲದೇ, ಈ ಚುನಾವಣೆಯಲ್ಲಿ ಯಾವ ಭಾಗದಲ್ಲಿ ಮತ ಹೆಚ್ಚಾಯಿತು, ಎಲ್ಲಿ ಕಡಿಮೆಯಾಯಿತು, ಎಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕು, ಎಲ್ಲಿ ತಮ್ಮ ಪ್ರಭಾವ ಕಾಪಾಡಿಕೊಳ್ಳಬೇಕೆಂದು ತಿಳಿದುಕೊಳ್ಳಲೂ ಇದೊಂದು ಅವಕಾಶ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಚಿಸಿರುವ ಅಭ್ಯರ್ಥಿಗಳು ಈ ಚುನಾವಣೆಯನ್ನು ಪ್ರಿಪರೇಟರಿ ಪರೀಕ್ಷೆ ರೀತಿ ಸ್ವೀಕರಿಸಿರುವುದಂತೂ ಸತ್ಯ.
ಶಿವಮೊಗ್ಗ: ಕಳೆದ ಐದು ವರ್ಷಗಳಲ್ಲಿ ಒಮ್ಮೆಯೂ ಕಾಣದ ನಗರದ ಸಂದಿಗೊಂದಿಗಳಿಗೆ ಡಿಸಿಎಂ ಈಶ್ವರಪ್ಪ ಇದೀಗ ಸುತ್ತಾಡಿ ಬಂದಿದ್ದಾರೆ. ಹೀಗೆ ಓಡಾಡಲು ಅವಕಾಶ ಮಾಡಿಕೊಟ್ಟಿದ್ದು ನಗರಸಭೆ ಚುನಾವಣೆ. ಪದೇ ಪದೇ ಸೋಲಿನ ಎಚ್ಚರಿಕೆ ನೀಡುತ್ತಿರುವ ಯಡಿಯೂರಪ್ಪನವರ ಹೇಳಿಕೆಯಿಂದ ಕಂಗಾಲಾಗಿರುವ ಕೆ.ಎಸ್. ಈಶ್ವರಪ್ಪ ಮೈಚಳಿ ಬಿಟ್ಟು ಒಂದು ವಾರಕಾಲ ನಗರದ ತುಂಬೆಲ್ಲಾ ಕೈಮುಗಿದು ಓಡಾಟ ನಡೆಸಿದರು. ಕಾಂಗ್ರೆಸ್ನಲ್ಲಿ ಅಭ್ಯರ್ಥಿಗಳು ಅಂತಿಮವಾಗದ ಕಾರಣ ಆ ಪಕ್ಷ ಸಪ್ಪೆಯಾಗಿದೆ. ಜೆಡಿಎಸ್ ಶ್ರೀಕಾಂತ್, ಕೆಜೆಪಿಯ ರುದ್ರೇಗೌಡರು ತಾವೇನು ಕಡಿಮೆ ಎಂಬಂತೆ ವಾರ್ಡ್ಗಳನ್ನು ಸುತ್ತಿಬಂದಿದ್ದಾರೆ.
ಸಾಗರ, ಸೊರಬ: ಸಾಗರದಲ್ಲಿ ಸದ್ಯಕ್ಕೆ ಕಾಗೋಡು ಅಲೆ. ಇಲ್ಲಿನ ನಗರಸಭೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಅತಿಯಾದ ಆತ್ಮವಿಶ್ವಾಸದಲ್ಲಿ ಕಾಗೋಡು ಬೀಗುತ್ತಿದ್ದಾರೆ. ಈ ಚುನಾವಣೆಯಲ್ಲಿ ಹಾಲಿ ಶಾಸಕ ಬೇಳೂರು ಗೋಪಾಲಕೃಷ್ಣರ ಪ್ರಭಾವ, ಪ್ರಯತ್ನ ಅಷ್ಟಾಗಿ ಕಂಡುಬಂದಿಲ್ಲ. ಬಿಜೆಪಿಯ ನೊಗವನ್ನು ಯು.ಎಚ್. ರಾಮಪ್ಪ ಹೊತ್ತಿದ್ದಾರೆ. ಸೊರಬದಲ್ಲಿ ತಮ್ಮ ಬಲ ಇನ್ನೂ ಸಾಕಷ್ಟಿದೆ ಎಂದು ತೋರಿಸಿಕೊಳ್ಳಲು ಹರತಾಳು ಹಾಲಪ್ಪನವರಿಗೆ ಇದೊಂದು ಅವಕಾಶ. ಹಾಗೆಯೇ ಮಧು ಬಂಗಾರಪ್ಪ ಮತ್ತು ಕುಮಾರ್ ಬಂಗಾರಪ್ಪನವರು ತಮ್ಮ ಶಕ್ತಿ ಪ್ರದರ್ಶನಕ್ಕೆ ಈ ಚುನಾವಣೆ ಒಂದು ವೇದಿಕೆಯಾಗಿ ಪರಿಣಮಿಸಿದೆ.
ಹಣ, ಕಾರು ವಶ
ಶಿವಮೊಗ್ಗ: ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನಲೆಯಲ್ಲಿ ಮತದಾರರಿಗೆ ಹಣ ಹಂಚಲು ಮುಂದಾಗಿದ್ದ ಕೆಜೆಪಿ ಮುಖಂಡರೊಬ್ಬರ ಕಾರನ್ನು ದೊಡ್ಡಪೇಟೆ ಠಾಣೆ ಪೊಲೀಸರು ವಶಪಡಿಸಿಕೊಂಡ ಪ್ರಸಂಗ ನಡೆಯಿತು.
ವಿನೋಬನಗರ ಸಮೀಪದ 6ನೇ ವಾರ್ಡ್ನ ಅಭ್ಯರ್ಥಿ ಪರವಾಗಿ ನಾಗೇಶ್ ಎಂಬವರು ಇನೋವ ಕಾರಿನಲ್ಲಿ ಹಣ ಹಂಚುತ್ತಿದ್ದಾರೆ ಎಂಬ ದೂರು ಕೇಳಿ ಬಂದಿತ್ತು. ದೂರಿನ ಹಿನ್ನಲೆಯಲ್ಲಿ ದಾಳಿ ನಡೆಸಿದ ದೊಡ್ಡಪೇಟೆ ಪೊಲೀಸರು ಕಾರನ್ನು ವಶಪಡಿಸಿಕೊಂಡರು. ಅಲ್ಲದೆ ಕಾರಿನಲ್ಲಿದ್ದ 33 ಸಾವಿರ ರೂಪಾಯಿ ಹಣ ಹಾಗೂ ಕರಪತ್ರಗಳನ್ನು ವಶಪಡಿಸಿಕೊಂಡರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಆದರೆ ಈ ಆರೋಪವನ್ನು ತಳ್ಳಿ ಹಾಕಿದ ಕೆಜೆಪಿ ಬೆಂಬಲಿಗರು, ವಿನೋಬನಗರ ಠಾಣೆಯ ಮುಂದೆ ಜಮಾಯಿಸಿ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ ಇದೆಲ್ಲ ಬಿಜೆಪಿಯವರ ಕುತಂತ್ರ ಎಂದು ಆರೋಪಿಸಿದ ಸಂಗತಿಯೂ ನಡೆಯಿತು.
15 ಸಾವಿರ ಮೌಲ್ಯದ ಮದ್ಯ ವಶ
ಶಿವಮೊಗ್ಗ: ಚುನಾವಣಾ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲೆಂದು ಸಂಗ್ರಹಿಸಿಟ್ಟಿದ್ದ 15 ಸಾವಿರ ರುಪಾಯಿ
ಮೌಲ್ಯದ ಮದ್ಯ, ಬಿಯರ್ನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಮಲವಗೊಪ್ಪದಲ್ಲಿರುವ ಇಂದಿರಾ ನಗರದ ಅರ್ಚನಾ ಕ್ಲಿನಿಕ್ ಕ್ರಾಸ್ನಲ್ಲಿರುವ ಅಣ್ಣಪ್ಪ ಅವರ ವಾಸದ ಮನೆ ರಾಘವೇಂದ್ರ ನಿಲಯದಲ್ಲಿ ಅಕ್ರವಾಗಿ 37.980 ಲೀಟರ್ ಮದ್ಯ ಹಾಗೂ 7.920 ಲೀಟರ್ ಬಿಯರನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯಲಾಗಿದೆ. ಇಲಾಖೆಯ ವಲಯ ಅಬಕಾರಿ ಉಪ ನಿರೀಕ್ಷಕ ವೇಣುಗೋಪಾಲ್ ಪ್ರಕರಣ ದಾಖಲಿಸಿಕೊಂಡು ಅಣ್ಣಪ್ಪ ಅವರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಉಪ ನಿರೀಕ್ಷಕ ನಾರಾಯಣಸಾ ಪವಾರ್, ಲೋಕೇಶಪ್ಪ ಮತ್ತು ಸಿಬ್ಬಂದಿ ಸುಧಾಮಣಿ, ಮಡಿವಾಳಪ್ಪ, ಚರಣರಾಜ್, ಮಧುಸೂದನ್, ರವೀಂದರ್ ಮತ್ತು ಕುಮಾರ್ ಭಾಗವಹಿಸಿದ್ದರು.
ತೀರ್ಥಹಳ್ಳಿ...
ತೀರ್ಥಹಳ್ಳಿ ಪಪಂನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಶತಾಯಗತಾಯ ಗೆಲ್ಲಿಸಲು ಬಿಜೆಪಿಯ ಆರಗ ಜ್ಞಾನೇಂದ್ರ ಪಣತೊಟ್ಟಿದ್ದಾರೆ. ಹಾಲಿ ಶಾಸಕ ಕಿಮ್ಮನೆ ರತ್ನಾಕರ್ ಕೂಡ ಸುಮ್ಮನೆ ಕುಳಿತಿಲ್ಲ. ಇವರಿಬ್ಬರಿಗೂ ಪೈಪೋಟಿ ನೀಡುವಂತೆ ಕೆಜೆಪಿ ಹಾಗೂ ಜೆಡಿಎಸ್ ಮುಖಂಡರು ಪೈಪೋಟಿ ನಡೆಸಿದ್ದಾರೆ.
ಭದ್ರಾವತಿ...
ಹಾಲಿ ಶಾಸಕ ಸಂಗಮೇಶ್ ತಮ್ಮ ಪ್ರತಿಸ್ಪರ್ಧಿ ಅಪ್ಪಾಜಿಗೌಡರ ಪ್ರಭಾವ ಕುಗ್ಗಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಅದೇ ರೀತಿ ಅಪ್ಪಾಜಿಗೌಡ ಕೂಡ ಈ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಗೆಲುವಿನ ಓಟ ಈಗಿನಿಂದಲೇ ಆರಂಭಿಸಲು ರಣತಂತ್ರ ರೂಪಿಸಿದ್ದಾರೆ. ಈ ಮಧ್ಯೆ ಇವರಿಬ್ಬರಿಗೂ ಕೆಜೆಪಿ ಅಲ್ಲಲ್ಲಿ ಸಣ್ಣ ಟಾಂಗ್ ನೀಡುತ್ತಿದೆ.
ಶಿಕಾರಿಪುರ
ಬಿ.ಎಸ್. ಯಡಿಯೂರಪ್ಪ ಇಲ್ಲಿ ಅದ್ವಿತೀಯ ನಾಯಕ. ಇಲ್ಲಿ ಸವಾಲಿರುವುದು ಬಿಜೆಪಿಗಷ್ಟೇ. ಯಡಿಯೂರಪ್ಪನವರ ಹೊರತಾಗಿ ಪಪಂನಲ್ಲಿ ತಾನೆಷ್ಟು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇನೆಂಬುದು ಬಿಜೆಪಿ ನಾಯಕರಿಗಿರುವ ಅಳಕು, ಮರ್ಯಾದೆ ಪ್ರಶ್ನೆ ಕೂಡ. ಶಿರಾಳಕೊಪ್ಪವನ್ನೂ ತಮ್ಮ ಬಿಗಿ ಮುಷ್ಟಿಯಲ್ಲಿ ಬಿಎಸ್ವೈ ಇಟ್ಟುಕೊಂಡಿರುವ ಕಾರಣ ಬಿಜೆಪಿ ಪ್ರಯತ್ನ ನಡೆಸಿದೆ.