ಚುನಾವಣೆಯಲ್ಲಿ ಹರಿದ ಹಣ, ಹೆಂಡದ ಹೊಳೆ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.7
ಮತದಾನದ ಹಿಂದಿನ ದಿನ ಮಲೆನಾಡಿನಲ್ಲಿ ಹಿಂದೆಂದೂ ಕಾಣದಷ್ಟು ಆಮಿಷಗಳ ಹೊಳೆಯೇ ಹರಿಯಿತು. ಅವರು, ಇವರು ಅಂತಿಲ್ಲ. ಎಲ್ಲ ಅಭ್ಯರ್ಥಿಗಳು ತಮ್ಮ ಶಕ್ತಿಸಾಮರ್ಥ್ಯ ಮೀರಿ ಕತ್ತಲ ರಾತ್ರಿಯ ಕರಾಮತ್ತು ನಡೆಸಿದರು.
ಇಷ್ಟು ದಿನಗಳ ಕಾಲ ಪಕ್ಷೇತರ ಅಭ್ಯರ್ಥಿಗಳು, ರಾಜ್ಯಮಟ್ಟದ ಪಕ್ಷಗಳು ಮತದಾರರಿಗೆ ಕೊಡುಗೆಗಳ ಉದಾರತೆ ತೋರಿದ್ದವು. ಆದರೆ ಗುರುವಾರ ಸಂಜೆಯಿಂದಲೇ ರಾಷ್ಟ್ರೀಯ ಪಕ್ಷವೊಂದರ ಮುಖಂಡರು, ಕಾರ್ಯಕರ್ತರು ಕಣಕ್ಕಿಳಿದು ಇವರೆಲ್ಲರೂ ನಾಚುವಂತೆ ಮತದಾರರಿಗೆ ಹಣ ಹಂಚುವ, ಮದ್ಯ ಸರಬರಾಜು ಮಾಡುವ ಕೆಲಸದಲ್ಲಿ ನಿರತರಾದರು. ಬೇರೆ ಪಕ್ಷಗಳ ಮುಖಂಡರು, ಕಾರ್ಯಕರ್ತರು ಆಕ್ಷೇಪಿಸಿದರೆ ಅವರನ್ನೇ ಠಾಣೆಗೆ ಕರೆದೊಯ್ದ ಪ್ರಸಂಗವೂ ನಡೆಯಿತು.
ಗುರುವಾರ ಇಡೀ ರಾತ್ರಿ ಪ್ರಮುಖವಾಗಿ ಸ್ಲಂಗಳು, ಹಿಂದುಳಿದ ಜನಾಂಗದವರು ವಾಸಿಸುವ ಪ್ರದೇಶಗಳು, ಅಲ್ಪಸಂಖ್ಯಾತರನ್ನೇ ಗುರಿಯಾಗಿಟ್ಟುಕೊಂಡು ರಾಷ್ಟ್ರೀಯ ಪಕ್ಷವೊಂದರ ಕಾರ್ಯಕರ್ತರು ಹಣ ಹಂಚಿದರು. ಇಡೀ ರಾತ್ರಿ ಒಂದೆರಡು ವಾರ್ಡ್ ಬಿಟ್ಟು ಬೇರೆ ಯಾವ ವಾರ್ಡ್ನಲ್ಲಿಯೂ ಸಹ ಪೊಲೀಸರು ಇರಲಿಲ್ಲ. ಅಧಿಕಾರದಲ್ಲಿದ್ದ ರಾಷ್ಟ್ರೀಯ ಪಕ್ಷಕ್ಕೆ ಈ ಅಂಶ ನೆರವಿಗೆ ಬಂದಿತ್ತು.
ಹಣ ಮಾತ್ರವಲ್ಲ: ಮತದಾರರಿಗೆ ಸಿಕ್ಕಿದ್ದು ಹಣ ಮಾತ್ರ ಅಲ್ಲ. ಜತೆಗೆ ಸೀರೆ-ರವಿಕೆಗಳೂ ಸಿಕ್ಕವು. ಅಲ್ಲಲ್ಲಿ ಮದ್ಯದ ಸಮಾರಾಧನೆಯೂ ನಡೆಯಿತು. ಅಬ್ಕಾರಿ ಮತ್ತು ಲಾಟರಿ ನಿಷೇಧ ದಳ ಇಡೀ ಚುನಾವಣೆಯಲ್ಲಿ ನಿಷ್ಕ್ರಿಯತೆ ತೋರಿತು.
ಜತೆಗೆ ಇನ್ನಷ್ಟು ವಿಶೇಷ ಆಮಿಷಗಳೂ ಇದ್ದವು. ಕೆಲವು ಅಭ್ಯರ್ಥಿಗಳು ನಿರ್ದಿಷ್ಟ ಅಂಗಡಿಯಲ್ಲಿ ಮೊಬೈಲ್ ರಿಚಾರ್ಜ್ ವ್ಯವಸ್ಥೆ ಮಾಡಿದ್ದವು. ಮತದಾರರಿಗೆ ಹೋಟೆಲ್ಗಳಲ್ಲಿ ಟೋಕನ್ ವ್ಯವಸ್ಥೆಯನ್ನೂ ಮಾಡಿದ್ದವು. ಇನ್ನೂ ಕೆಲವೆಡೆ ಬೈಕ್ಗಳಿಗೆ ಉಚಿತ ಪೆಟ್ರೋಲ್ ವ್ಯವಸ್ಥೆಯೂ ಇತ್ತು.
ಮನೆಗೇ ಬಂತು ಆಟೋ: ಮತದಾರನ್ನು ಮತಗಟ್ಟೆಗೆ ಕರೆತರಲು ವಾಹನ ವ್ಯವಸ್ಥೆ ಮಾಡುವುದು ನೀತಿ ಸಂಹಿತೆ ಉಲ್ಲಂಘನೆ. ಆದರೆ ಬಹುತೇಕ ಅಭ್ಯರ್ಥಿಗಳು ಇದನ್ನು ಉಲ್ಲಂಘಿಸಿದ್ದಾರೆ. ಬಸ್ ನಿಲ್ದಾಣ ಸುತ್ತಮುತ್ತಲಿನ ಒಂದು ವಾರ್ಡ್ನಲ್ಲಿ ಮನೆಮನೆಗೆ ಆಟೋಗಳು ಬಂದಿದ್ದವು. ವಾಪಸ್ ಅವರನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯೂ ಇತ್ತು. ಇಷ್ಟೆಲ್ಲಾ ಚುನಾವಣಾ ಅಕ್ರಮಗಳು ಪೊಲೀಸ್ ಇಲಾಖೆ ಸಿಬ್ಬಂದಿಯ ಕಣ್ಣೆದುರಿನಲ್ಲಿಯೇ ನಡೆದವು. ಆದರೆ ಕ್ರಮ ಮಾತ್ರ ಆಗಲಿಲ್ಲ. ಮಲೆನಾಡಿನಲ್ಲಿ ಇಂತಹ ಅವ್ಯವಸ್ಥೆಯ ಚುನಾವಣೆಯನ್ನು ನಾನು ನೋಡಲೇ ಇಲ್ಲ ಎಂದು ಬಸವನಗುಡಿಯ ಮತದಾರರೊಬ್ಬರು ಗೊಣಗುತ್ತಿದ್ದುದು ಎಲ್ಲದಕ್ಕೂ ಕನ್ನಡಿ ಹಿಡಿದಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.