ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಾಕ್ಷ್ಯಚಿತ್ರಕ್ಕೆ ಸಾರ್ವಕಾಲಿಕ ಮನ್ನಣೆ

Parashurama
Updated On : 8 Mar 2013, 10:38 am

ಕ.ಪ್ರ.ವಾರ್ತ್ಣೆ ಶಿವಮೊಗ್ಗ್ಣಮಾ.7
ವೈವಿಧ್ಯಮಯ ನಿರೂಪಣಾ ಕ್ರಮಗಳ ನೆಲೆಯಲ್ಲಿ ಬಿಂಬಗಳನ್ನು ಸಂಯೋಜಿಸುವ ಸೃಜನಶೀಲತೆಯು ಸಾಕ್ಷ್ಯಚಿತ್ರ ಮತ್ತು ಸಿನಿಮಾ ಮಾಧ್ಯಮಗಳ ಸಾಧ್ಯತೆಗಳ ವಿಸ್ತರಣೆಗೆ ಪೂರಕವಾಗುತ್ತದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಸಿನಿಮಾ “®ÚâmÛ{ ®Ûn%’ ಖ್ಯಾತಿಯ ಪಿ.ಎನ್. ರಾಮಚಂದ್ರ ಅಭಿಪ್ರಾಯಪಟ್ಟರು.
ಕುವೆಂಪು ವಿಶ್ವವಿದ್ಯಾನಿಲಯದ ಜ್ಞಾನ ಸಹ್ಯಾದ್ರಿಯಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗವು ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಾಕ್ಷ್ಯಚಿತ್ರ, ಸಿನಿಮಾ, ಕಥಾಭಿತ್ತಿ ಮತ್ತು ನಿರೂಪಣಾ ಕ್ರಮಗಳ ಕುರಿತು ಅವರು ಮಾತನಾಡಿದರು.
ಸಾರ್ವಕಾಲಿಕ ಮನ್ನಣೆ: ಮರುಸೃಷ್ಟಿಯ ತಂತ್ರಕೌಶಲ್ಯ, ಸಂದರ್ಶನ, ಧ್ವನಿಸಂಪನ್ಮೂಲ, ಹಳೆಯ ಚಿತ್ರಿಕೆಗಳು, ಕಾರ್ಟೂನ್, ಸಂಗೀತ, ಶೀರ್ಷಿಕೆ, ಉಪಶೀರ್ಷಿಕೆಗಳ ನೆಲೆಗಟ್ಟಿನಲ್ಲಿ ಸಾಕ್ಷ್ಯಚಿತ್ರಗಳನ್ನು ರೂಪಿಸಬಹುದು. ಸಾಕ್ಷ್ಯಚಿತ್ರವೊಂದು ವಾಸ್ತವಕ್ಕೆ ಕನ್ನಡಿ ಹಿಡಿಯಬಹುದು. ವಾಸ್ತವದ ಜೊತೆಗೆ ಕಲ್ಪಿತ ವಾಸ್ತವದ ವಿವರಗಳೊಂದಿಗೆ ಅಭಿವ್ಯಕ್ತಗೊಳ್ಳಬಹುದು. ಆ ಮೂಲಕ ಸಾಕ್ಷ್ಯಚಿತ್ರವು ತನ್ನೊಳಗೆ ವಿವಿಧ ನಿರೂಪಣಾ ಕ್ರಮಗಳನ್ನು ಆವಾಹಿಸಿಕೊಂಡು ಹೊಸದೊಂದು ಮಾದರಿಯಾಗಿ ಗಮನಸೆಳೆಯುತ್ತದೆ. ಅಂಥ ಸಾಕ್ಷ್ಯಚಿತ್ರಗಳೇ ಸಾರ್ವಕಾಲಿಕ ಮನ್ನಣೆ ಪಡೆಯುವ ಸಾಮರ್ಥ್ಯ ಪಡೆಯುತ್ತವೆ ಎಂದು ಅಭಿಪ್ರಾಯಪಟ್ಟರು.
ನಿರ್ದಿಷ್ಟ ಸಮಸ್ಯೆ, ಘಟನೆ, ಚರ್ಚಿತ ವಿವರಗಳನ್ನು ಕೇಂದ್ರೀಕರಿಸಿ ರೂಪಿತವಾಗುವ ಸಾಕ್ಷ್ಯಚಿತ್ರಗಳೊಳಗೇ ಒಂದು ಕಥನಕ್ರಮವಿರುತ್ತದೆ. ಆ ಕಥನಕ್ರಮದ ಚೌಕಟ್ಟಿನ ಮೂಲಕ ನಿರ್ದೇಶಕ ತನ್ನೊಳಗಿನ ಆಶಯಗಳನ್ನು ಸಂವಹಿಸಲು ಪ್ರಯತ್ನಿಸುತ್ತಾನೆ. ಅಂಥ ಕೌಶಲ್ಯಪೂರ್ಣ ಪ್ರಯತ್ನವು ಸಾಕ್ಷ್ಯಚಿತ್ರವೊಂದರ ಅರ್ಥಸಾಧ್ಯತೆಗಳನ್ನು ವಿಸ್ತರಿಸುತ್ತದೆ. ವಿವಿಧ ವೀಕ್ಷಕ ಸಮೂಹದಲ್ಲಿ ವಿವಿಧ ಬಗೆಯ ಅರ್ಥಗಳನ್ನು ಹೊಳೆಯಿಸುತ್ತದೆ ಎಂದು ಅವರು ತಿಳಿಸಿದರು.
ದೃಶ್ಯಕಾವ್ಯವಾಗಿ ಬಳಸಬಹುದು: ಖ್ಯಾತ ರಂಗನಿರ್ದೇಶಕ ಬಿ.ವಿ. ಕಾರಂತರ ಕುರಿತು ತಾವು ನಿರ್ದೇಶಿಸಿದ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿ ಅದರ ನಿರೂಪಣಾ ಕ್ರಮ ಮತ್ತು ಕಥನಧಾಟಿಯ ವಿವಿಧ ಆಯಾಮಗಳನ್ನು ಪರಿಚಯಿಸಿದ ಪಿ.ಎನ್. ರಾಮಚಂದ್ರ ಸಾಕ್ಷ್ಯಚಿತ್ರವೊಂದನ್ನು ಅಪ್ಪಟ ದೃಶ್ಯಕಥನ ಮಾಧ್ಯಮವನ್ನಾಗಿಯೂ ಬಳಸಿಕೊಳ್ಳಬಹುದು ಎಂದರು.
ಬಿ.ವಿ. ಕಾರಂತರ ಆತ್ಮಕಥನ ಆಧರಿಸಿ ಸಾಕ್ಷ್ಯಚಿತ್ರ ಕಟ್ಟಿಕೊಡುವ ತಮ್ಮೊಳಗಿನ ಆಲೋಚನೆಯು ಹಲವು ನಿರೂಪಣಾ ಕ್ರಮಗಳನ್ನು ಹೊಳೆಸಿಕೊಳ್ಳಲು ಸಹಾಯಕವಾಯಿತು ಎಂದು ತಿಳಿಸಿದರು. ಚಲನಚಿತ್ರಗಳಲ್ಲಿ ಕಥೆಯೇ ನಿರ್ಣಾಯಕ ಮಾಧ್ಯಮ ಸಂರಚನಾ ಸಂವಿಧಾನವಾಗಿರುತ್ತದೆ. ಸಾಕ್ಷ್ಯಚಿತ್ರಗಳಲ್ಲಿ ಘಟನೆ, ಮಾತು, ಬಣ್ಣ, ಶಬ್ದ, ನಿಸರ್ಗ ವೈಚಿತ್ರ್ಯ, ದೃಶ್ಯಾಭಿವ್ಯಕ್ತಿಯ ಸಾಧನಗಳು, ಜೀವಂತ ವಿಷಯ-ವಸ್ತುಗಳ ಸಮರ್ಪಕ ಸಂಯೋಜನೆಯೇ ನಿರ್ಣಾಯಕವಾಗಿರುತ್ತದೆ. ಈ ಬಗೆಯ ಸಂಯೋಜನೆಯು ಸಾಕ್ಷ್ಯಚಿತ್ರ ಮಾಧ್ಯಮ ಹೊಸ ನಿರೂಪಣಾ ಕ್ರಮಗಳನ್ನು ಅಳವಡಿಸಿಕೊಳ್ಳಲು ಪ್ರೇರಣೆಯನ್ನು ಒದಗಿಸುತ್ತದೆ ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಧ್ಯಕ್ಷ ಪ್ರೊ. ಡಿ.ಎಸ್. ಪೂರ್ಣಾನಂದ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments