ಬಲದೇವಕೃಷ್ಣ ಪಕ್ಷದ ಸದಸ್ಯರೇ ಅಲ್ಲ
ಶಿವಮೊಗ್ಗ: ಹಿರಿಯ ಐಎಎಸ್ ಅಧಿಕಾರಿ ಬಲದೇವಕೃಷ್ಣ ಅವರು ಕೊಟ್ಟಿರುವ ರಾಜಿನಾಮೆ ಇನ್ನೂ ಅಂಗೀಕಾರವಾಗಿಲ್ಲ. ಆದರೂ ಅವರು ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮ್ಮ ಜೇಬಿನಲ್ಲಿದೆ ಎಂದು ಓಡಾಡುತ್ತಿದ್ದಾರೆ.
ಈ ಬಗ್ಗೆ ಕಾರ್ಯಕರ್ತರು ಗೊಂದಲಕ್ಕೀಡಾಗಬಾರದು. ಅವರು ಇನ್ನೂ ಕಾಂಗ್ರೆಸ್ ಸದಸ್ಯರೇ ಅಲ್ಲ ಎಂದು ಕೆಪಿಸಿಸಿ ಉಪಾಧ್ಯಕ್ಷ ಕರಿಯಣ್ಣ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು, ಪಕ್ಷದ ಅಭ್ಯರ್ಥಿಗಳ ಆಯ್ಕೆ ಈಗ ತಾನೇ ನಡೆಯುತ್ತಿದೆ. ಆದರೆ ಬಲದೇವಕೃಷ್ಣ ಅವರು ಪ್ರತಿ ಭಾನುವಾರ ಶಿವಮೊಗ್ಗಕ್ಕೆ ಆಗಮಿಸಿ ತಾವೇ ಕಾಂಗ್ರೆಸ್ ಅಭ್ಯರ್ಥಿ ಎಂದು ಹೇಳುತ್ತಾ ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ.
ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯರೇ ಅಲ್ಲ. ಟಿಕೆಟ್ಗೆ ಅರ್ಜಿಯನ್ನೂ ಹಾಕಿಲ್ಲ. ಆದರೂ ಟಿಕೆಟ್ ಸಿಕ್ಕಿತು ಎಂದು ಬೊಗಳೆ ಬಿಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಕ್ಷದ ನಿಷ್ಠಾವಂತರಿಗೆ, ಭ್ರಷ್ಟಾಚಾರ ರಹಿತ ವ್ಯಕ್ತಿಗಳಿಗೆ ಮಾತ್ರ ಕಾಂಗ್ರೆಸ್ ಆದ್ಯತೆ ನೀಡುತ್ತದೆ. ಲೋಕಾಯುಕ್ತ ಕೇಸ್ ಎದುರಿಸುತ್ತಿರುವವರಿಗೆ ಟಿಕೆಟ್ ನೀಡುವುದಿಲ್ಲ ಎಂದರು. ಬಲದೇವಕೃಷ್ಣ ಅವರಿಗೆ ಟಿಕೆಟ್ ನೀಡುವುದಕ್ಕೆ ತಮ್ಮ ಪ್ರಭಲ ವಿರೋಧವಿದೆ.
ಅಲ್ಲದೇ ಬ್ಲಾಕ್ ಘಟಕವೂ ವಿರೋಧಿಸುತ್ತದೆ. ಟಿಕೆಟ್ಗಾಗಿ ಕ್ಷೇತ್ರದಿಂದ 10 ಮಂದಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಅವರಲ್ಲಿಯೇ ಪ್ರಾಮಾಣಿಕರು, ನಿಷ್ಠಾವಂತರನ್ನು ಆಯ್ಕೆ ಮಾಡಬೇಕು ಎಂದು ಒತ್ತಾಯಿಸಿದರು.
ಯುವಕರಿಗೆ ಟಿಕೆಟ್: ರಾಹುಲ್ ಗಾಂಧಿ ಅವರು ಸತತ ಎರಡು ಚುನಾವಣೆಯಲ್ಲಿ ಸೋತವರಿಗೆ, ಹೆಚ್ಚು ಅಂತರದಿಂದ ಸೋತವರಿಗೆ ಟಿಕೆಟ್ ನೀಡುವುದಿಲ್ಲ ಎಂದು ತೆಗೆದುಕೊಂಡ ನಿರ್ಣಯ ಕರ್ನಾಟಕಕ್ಕೆ ಅನ್ವಯವಾಗುವುದಿಲ್ಲವೇ ಎಂದು ಕರಿಯಣ್ಣ ಅವರನ್ನು ಕೇಳಿದಾಗ, ಅದು ಗುಜರಾತ್ ರಾಜ್ಯಕ್ಕೆ ಮಾತ್ರ ಅನ್ವಯವಾಗುವಂತೆ ತೆಗೆದುಕೊಂಡ ನಿರ್ಣಯ. ರಾಜ್ಯಕ್ಕೆ ಅನ್ವಯವಾಗುವುದಿಲ್ಲ ಎಂದರು.
ಗ್ರಾಮಾಂತರ ಕ್ಷೇತ್ರದಿಂದ ಯಾರಿಗೇ ಟಿಕೆಟ್ ನೀಡಿದರೂ ಅವರ ಪರವಾಗಿ ಕೆಲಸ ಮಾಡುತ್ತೇವೆ ಎಂದರು. ಗೋಷ್ಠಿಯಲ್ಲಿ ಬ್ಲಾಕ್ ಕೆಪಿಸಿಸಿ ಸದಸ್ಯ ಪರಮೇಶ್ವರಪ್ಪ, ಅಧ್ಯಕ್ಷ ಮಲ್ಲಯ್ಯ, ಷಣ್ಮುಖಪ್ಪಗೌಡ, ದಿವಾಕರ್, ಕೃಷ್ಣಪ್ಪ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.