ಮಾರಿಯಮ್ಮ ದೇವಾಲಯದಲ್ಲಿ ಕಳ್ಳತನ
ಕಪ್ರಭ ವಾರ್ತೆ, ಭದ್ರಾವತಿ
ಸಂಕ್ಲೀಪುರ ಗ್ರಾಮದಲ್ಲಿ ಮಾರಿಯಮ್ಮ ದೇವಸ್ಥಾನದ ಬೀಗ ಮುರಿದು ಕಳ್ಳರು ಸುಮಾರು 2600 ರು.ಗಳ ಮೌಲ್ಯದ ಬಂಗಾರದ ಒಡವೆಗಳನ್ನು ಕದ್ದಿದ್ದಾರೆಂದು ದೇವಾಲಯ ಸಮಿತಿ ಭದ್ರಾವತಿ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದೆ. ಪ್ರಕರಣವನ್ನು ದಾಖಲಿಸಿಕೊಂಡು ಪೋಲಿಸರು ತನಿಖೆ ಕೈಗೊಂಡಿದ್ದಾರೆ.
ಮನೆಗಳ್ಳತನಕ್ಕೆ ಯತ್ನ
ಕಳ್ಳನೋರ್ವ ಮನೆಗಳ್ಳತನ ಮಾಡಲು ವಿಫಲ ಯತ್ನ ನಡೆಸಿ ತಪ್ಪಿಸಿಕೊಳ್ಳಲು ಚಾನಲ್ಗೆ ಹಾರಿ ಗಾಯಗೊಂಡು ಆಸ್ಪತ್ರೆ ಸೇರಿ ಪೋಲಿಸರ ಅತಿಥಿಯಾದ ಪ್ರಕರಣ ಕಾಗದನಗರ ಠಾಣೆ ವ್ಯಾಪ್ತಿಯ ಹಿರಿಯೂರಿನಲ್ಲಿ ನಡೆದಿದೆ. ಹೊಸದುರ್ಗ ತಾಲ್ಲೂಕಿನ ಮೂಡದಕೆರೆ ಪಕ್ಕದಲ್ಲಿರುವ ಮಸ್ನಳ್ಳಿಯ ಸೋಮಶೇಖರ ಆಲಿಯಾಸ್ಕೃಷ್ಣಮೂರ್ತಿ ಹಿರಿಯೂರು ಗ್ರಾಮದ ಎಚ್.ಕೆ.ನಾಗರಾಜ್ ಎಂಬುವರು ಬೆಳಗ್ಗೆ 4 ಗಂಟೆಗೆ ತಮ್ಮ ಪತ್ನಿಯನ್ನು ರೈಲುನಿಲ್ದಾಣದಿಂದ ಕರೆತರಲು ಬೀಗಹಾಕಿಕೊಂಡು ಹೋಗಿರುವಾಗ ಮನೆಯ ಬೀಗಮುರಿದು ಕಬ್ಬಿಣದ ಕಪಾಟು ಮುರಿಯುವ ಯತ್ನದಲ್ಲಿದ್ದಾಗ ಪತ್ನಿಯೊಂದಿಗೆ ಹಿಂದಿರುಗಿದ ನಾಗರಾಜ್ ಈತನನ್ನು ನೋಡಿ ಕಳ್ಳ ಎಂದು ಕೂಗಿಕೊಂಡಾಗ ತಪ್ಪಿಸಿಕೊಂಡು ಓಡುವ ಯತ್ನದಲ್ಲಿ ಚಾನಲ್ಗೆ ಹಾರಿ ಗಾಯಗೊಂಡ ಸೋಮಶೇಖರ್ ಆಸ್ಪತ್ರೆ ಸೇರಿ ನಂತರ ಕಾಗದನಗರ ಪೋಲಿಸರಿಗೆ ಸಿಕ್ಕಿಬಿದ್ದನೆಂದು ಮೂಲಗಳು ತಿಳಿಸಿವೆ. ನಾಗರಾಜ್ ಅವರು ನೀಡಿದ ದೂರಿನ ಮೇಲೆ ಪೋಲಿಸರು ಸೋಮಶೇಖರನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಕ್ರಮ ಮದ್ಯ ಮಾರಾಟ
ಪಟ್ಟಣದ ವೈಶಾಲಿ ಮಿಲಿಟರಿ ಹೊಟೇಲ್ನಲ್ಲಿ ಅಕ್ರಮವಾಗಿ ಮದ್ಯವನ್ನು ದಾಸ್ತಾನು ಮಾಡಿದ್ದ ಆರೋಪದ ಮೇಲೆ ಮಧು ಮತ್ತು ಹಿರಿಯಣ್ಣ ಎಂಬೀರ್ವರನ್ನು ನ್ಯೂಟೌನ್ಪೋಲಿಸರು ದಾಳಿಯ ಸಮಯದಲ್ಲಿ 4050 ರು.ಗಳ ಮೌಲ್ಯದ ಮದ್ಯ ದೊರೆತ ಆರೋಪದ ಮೇಲೆ ದಸ್ತಗಿರಿ ಮಾಡಿ ಮದ್ಯವನ್ನು ವಶಪಡಿಸಿಕೊಂಡು ಅಕ್ರಮ ಮದ್ಯ ಸಾಗಾಣಿಕೆ ಮತ್ತು ಮಾರಾಟದ ಪ್ರಕರಣವನ್ನು ದಾಖಲಿಸಿದ್ದಾರೆ.
ಬಾಲಕ ಕಾಣೆ
ಸಾಗರ: ತಾಲೂಕಿನ ತ್ಯಾಗತರ್ ಗ್ರಾಮದ ಮಂಜುನಾಥ ಎನ್. ಹಾಗೂ ಲಲಿತಮ್ಮ ಅವರ ಮಗ ಪ್ರಸನ್ನ (12)ಎಂಬಾತ ಫೆ. 27ರಂದು ಕಾಣೆಯಾಗಿದ್ದಾನೆ.
ತ್ಯಾಗತರ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಪ್ರಸನ್ನ ಮಧ್ಯಾಹ್ನ ಶಾಲೆಗೆ ಹೋಗಿ ಬರುವುದಾಗಿ ಹೇಳಿ ಹೋದವನು ಮನೆಗೆ ಮರಳಿ ಬಂದಿಲ್ಲ. ಹುಡುಗ ನಾಲ್ಕೂವರೆ ಅಡಿ ಎತ್ತರವಿದ್ದು, ತೆಳ್ಳನೆ ಮೈಕಟ್ಟು, ಎಣ್ಣೆಗೆಂಪು ಬಣ್ಣ ಹಾಗೂ ತಲೆಯಲ್ಲಿ ಕಂದು ಬಣ್ಣದ ಕೂದಲು ಇರುತ್ತದೆ.
ಹುಡುಗ ಹೋಗುವಾಗ ನೀಲಿ ಬಣ್ಣದ ಟೀಶರ್ಟ್ ಹಾಗೂ ನೇರಳೆ ಬಣ್ಣದ ಜೀನ್ ಪ್ಯಾಂಟ್ ಧರಿಸಿದ್ದಾನೆ. ಹುಡುಗ ಕಾಣೆಯಾಗಿರುವ ಸಂಬಂಧ ತಂದೆ ಮಂಜುನಾಥ್ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ಚಹರೆಯುಳ್ಳ ಹುಡುಗ ಕಂಡುಬಂದರೆ ಸಮೀಪದ ಠಾಣೆ ಅಥವಾ ಎನ್. ಮಂಜುನಾಥ್ ಮೊ. 8105400380 ತಿಳಿಸಲು ಕೋರಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.