ಸುರಕ್ಷತಾ ದಿನಾಚರಣೆಗೆ ಅಗ್ನಿಶಮನ ಉಪನ್ಯಾಸ
ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.8
ಜಿಲ್ಲೆಯ ಹೊಸನಗರ ತಾಲೂಕು ಮಾಣಿ ಅಣೆಕಟ್ಟು ವಿದ್ಯುದಾಗರದಲ್ಲಿ 42ನೇ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಅಂಗವಾಗಿ ಅಗ್ನಿಶಮನ ಉಪನ್ಯಾಸ ಮತ್ತು ಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಹಾಗೂ ಕಾರ್ಮಿಕರ ವೃಂದದವರಿಗೆ ಅನುಕೂಲವಾಗುವಂತೆ ಬೆಂಕಿ ಮುಂಜಾಗೃತಾ ಕ್ರಮಗಳ ಬಗ್ಗೆ ಅಗ್ನಿಶಮನ ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆಯನ್ನು ಮಾಡಿ ತೋರಿಸಲಾಯಿತು. ಈ ಸಮಯದಲ್ಲಿ ಎಲ್ಪಿಜಿ ಗ್ಯಾಸ್ನ ಸರಿಯಾದ ಬಳಕೆ ಬಗ್ಗೆ ತಿಳಿಸಿ ಕೊಡಲಾಯಿತು. ವಿವಿಧ ರೀತಿಯ ಅಗ್ನಿಶಮನ ಉಪಕರಣಗಳನ್ನು ಬಳಸುವ ರೀತಿ ನೀತಿಗಳ ಬಗ್ಗೆ ತಿಳಿಸಿಕೊಡಲಾಯಿತು.
ವರಾಹಿ ವಿದ್ಯುತ್ ಯೋಜನೆ ಮುಖ್ಯ ಅಭಿಯಂತರ ಎನ್. ರಾಮಯ್ಯ ಅಧ್ಯಕ್ಷತೆ ವಹಿಸಿದ್ದರು. ಸುರಕ್ಷತಾ ಅಧಿಕಾರಿ ಕೆ. ಕಮಲಾಕ್ಷ, ಕಾರ್ಯಪಾಲಕ ಅಭಿಯಂತರ (ವಿದ್ಯುತ್) ದಿನೇಶ್ ಕುಮಾರ್ ಈ ಸಂದರ್ಭದಲ್ಲಿ ಹಾಜರಿದ್ದರು.
ಅರ್ಥಪೂರ್ಣವಾಗಿ ಆಚರಿಸಿ: ಎನ್. ರಾಮಯ್ಯ ಮಾತನಾಡಿ, ಇಂತಹ ಸುರಕ್ಷತಾ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಪ್ರತಿ ವರ್ಷವೂ ಆಚರಿಸಬೇಕು. ಹಲವಾರು ಸುರಕ್ಷತಾ ಕ್ರಮಗಳ ಬಗ್ಗೆ ಕಾರ್ಮಿಕರಿಗೆ, ಅಧಿಕಾರಿಗಳಿಗೆ ತಿಳಿಸಿಕೊಡಬೇಕು. ಈ ದಿಸೆಯಲ್ಲಿ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಬಹಳ ಉಪಯುಕ್ತವಾದ ಮಾಹಿತಿಯನ್ನು ನೀಡಿರುತ್ತಾರೆ. ಇವರನ್ನು ಹಲವಾರು ಸಂಘ- ಸಂಸ್ಥೆಗಳು ಬಳಸಿಕೊಳ್ಳಬೇಕು ಎಂದರು.
ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಕೆ. ಶಿವಕುಮಾರ್ ಅವರು ಕೊನೆಯದಾಗಿ ಅಗ್ನಿಶಮನ ನಂದಕಗಳನ್ನು ಸರಿಯಾಗಿ ಬಳಸುವ ರೀತಿಯನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು. ಅಗ್ನಿಶಾಮಕ ವಾಹನವನ್ನು ಬಳಸಿ ವಿವಿಧ ಉಪಕರಣಗಳಿಂದ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.