ಎರಡು ಗುಂಪುಗಳ ಮಧ್ಯೆ ಘರ್ಷಣೆ: ಹಲವರಿಗೆ ಗಾಯ
ಸೊರಬ: ಪಪಂ ಅಭ್ಯರ್ಥಿಗಳ ಆಯ್ಕೆ ಘೋಷಣೆ ಆಗುವುದಕ್ಕಿಂತ ಮೊದಲೆ ಎರಡನೆ ವಾರ್ಡಿನಲ್ಲಿ ಉಭಯ ಪಕ್ಷಗಳವರ ಮಾತಿನ ಚಕಮಕಿ ತುಸು ಹಿಂಸಾರೂಪಕ್ಕೆ ತಿರುಗಿದ್ದು, ಪೆಟ್ಟಾದವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.
ಸೋತವರ ಮನೆ ಎದುರಿಗೆ ಗೆದ್ದ ಅಭ್ಯರ್ಥಿಯ ಕಡೆಯವರು ಪಟಾಕಿ ಸಿಡಿಸಲು ಮುಂದಾದಾಗ ಈ ಘಟನೆ ನಡೆದಿದ್ದು, ಮಾತಿನ ಚಕಮಕಿ ನಡೆದಿದೆ. ಮಾತು ಮುಂದುವರೆದು ಗುದ್ದಾಟಕ್ಕೆ ತಿರುಗಿದೆ. ಏಟು ತಿಂದವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಲಾಗಿದೆ.
ಸೋತು, ಪೆಟ್ಟು ತಿಂದವರ ಪರವಾಗಿ ಇಲ್ಲಿನ ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಪ್ರತಿಭಟನೆಗೆ ಇಳಿದಿದ್ದು, ಗೂಂಡಾ ವರ್ತನೆಗೆ ಕಡಿವಾಣ ಹಾಕಬೇಕು, ಅಭ್ಯರ್ಥಿ ಆಯ್ಕೆ ಕುರಿತು ಅಧಿಕೃತ ಘೋಷಣೆ ಆಗುವುದಕ್ಕಿಂತ ಮುನ್ನವೆ ಈ ರೀತಿ ಹರ್ಷಾಚರಣೆ ನಡೆಸಿದ್ದು ತಪ್ಪು, ಹರ್ಷಾಚರಣೆ ನೆಪದಲ್ಲಿ ಉದ್ದೇಶಪೂರಿತ ದುಂಡಾವರ್ತನೆಯನ್ನು ಖಂಡಿಸುತ್ತೇವೆ, ಕೂಡಲೆ ಈ ಬಗ್ಗೆ ತನಿಖೆ ನಡೆಯಲಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಲಿ ಎಂದು ಆಗ್ರಹಿಸಿ, ಸಮಿತಿಯ ಅಧ್ಯಕ್ಷ ಜೆ.ಎಸ್. ಚಿದಾನಂದಗೌಡ ನೇತೃತ್ವದಲ್ಲಿ ಮೆರವಣಿಗೆ ನಡೆಸಿದರು.
ಆಸ್ಪತ್ರೆ ಎದುರು ಜನ ಜಮಾಯಿಸಿದ್ದು, ಮಾಜಿ ಶಾಸಕ ಎಚ್. ಹಾಲಪ್ಪ ಆಗಮಿಸಿ, ಪೆಟ್ಟು ತಿಂದವರ ಯೋಗ ಕ್ಷೇಮ ವಿಚಾರಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.