ಹೊಸನಗರ: ಜೆಡಿಎಸ್ ಸಂಭ್ರಮ
ಕ.ಪ್ರ.ವಾರ್ತೆ, ಹೊಸನಗರ, ಮಾ.11
6 ಸ್ಥಾನಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯಭೇರಿ ಭಾರಿಸುವ ಮೂಲಕ ಪಪಂ ಅಧಿಕಾರ ಗದ್ದುಗೆಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
5 ಸ್ಥಾನಗಳನ್ನು ಬಾಚಿಕೊಂಡಿರುವ ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ಸಾಧನೆ ಮಾಡಿದೆ. ಹಿಂದಿನ ಅವಧಿಯಲ್ಲಿ 2 ಸ್ಥಾನ ಪಡೆದು ಮೀಸಲಾತಿಯಿಂದಾಗಿ ಅಧಿಕಾರ ಹಿಡಿದಿದ್ದ ಬಿಜೆಪಿ ಶೂನ್ಯಸಾಧನೆಯೊಂದಿಗೆ ತೀವ್ರ ಮುಖಭಂಗ ಅನುಭವಿಸಿದೆ. ಇನ್ನು ಕೆಜೆಪಿ ಮತ್ತು ಬಿಎಸ್ಆರ್ ಕಾಂಗ್ರೆಸ್ ಖಾತೆ ತೆರೆಯುವಲ್ಲಿ ವಿಫಲವಾಗಿವೆ.
ಅಭಿವೃದ್ಧಿಗೆ ಮನ್ನಣೆ: ಫಲಿತಾಂಶ ಹೊರಬೀಳುತ್ತಿದ್ದಂತೆ ಸಂಭ್ರಮಿಸಿದ ಜೆಡಿಎಸ್ ಕಾರ್ಯಕರ್ತರು ಪಕ್ಷದ ಪರ ಘೋಷಣೆ ಕೂಗುತ್ತ ಸಂಭ್ರಮಾಚರಿಸಿದರು. ಪ್ರಮುಖರಾದ ಕೆ.ಎಂ. ಕೃಷ್ಣಮೂರ್ತಿ, ಎಂ.ವಿ. ಜಯರಾಂ, ಮಾಜಿ ಅಧ್ಯಕ್ಷ ಅರುಣಕುಮಾರ್ ಅವಧಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳಿಗೆ ಮತದಾರರು ಮನ್ನಣೆ ನೀಡಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೂ ಅರುಣಕುಮಾರ್ ಸೋಲು ನಿರಾಶೆ ತಂದಿದೆ ಎಂದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಶ್ರೀಧರಉಡುಪ, ಹಂಜಾ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಅರುಣಕುಮಾರ್ ರಾಜಿನಾಮೆ: ಅಭಿವೃದ್ಧಿ ಪರ ಮತ್ತು ಪಾರದರ್ಶಕ ಆಡಳಿತ ನೀಡಿದ್ದರೂ ಮತದಾರರು ಸೋಲಿಸಿದ್ದು ಬೇಸರ ತಂದಿದೆ. ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ ಅನೇಕ ಬಾರಿ ಹೇಳಿದ್ದು ಪಕ್ಷದ ಮುಖಂಡರ ಒತ್ತಾಯದ ಮೇಲೆ ಸ್ಪರ್ಧಿಸಿದ್ದೆ. ಪಕ್ಷ ಅಧಿಕಾರಕ್ಕೆ ಬಂದಿರುವುದಕ್ಕೆ ಸಂತಸವಿದೆ. ಪ್ರಸ್ತುತ ಚುನಾವಣಾ ರಾಜಕೀಯ ಬೇಸರ ತರಿಸಿದ್ದು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಪಪಂ ಮಾಜಿ ಅಧ್ಯಕ್ಷ ಅರುಣಕುಮಾರ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಸಮಾಧಾನ ತಂದಿದೆ: ಕೂದಲೆಳೆಯಲ್ಲಿ ಅಧಿಕಾರ ತಪ್ಪಿದೆ. ಆದರೆ ಕಳೆದಬಾರಿಗಿಂತ 4 ಹೆಚ್ಚುವರಿ ಸ್ಥಾನ ಗಳಿಸಿರುವುದಕ್ಕೆ ಕಾಂಗ್ರೆಸ್ ಪ್ರಮುಖರು ಸಂತಸ ವ್ಯಕ್ತಪಡಿಸಿದ್ದಾರೆ. ಕಾರ್ಯಕರ್ತರ ಶ್ರಮದಿಂದಾಗಿ ಉತ್ತಮ ಸಾಧನೆ ಸಾಧ್ಯವಾಗಿದ್ದು ಮತದಾರರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಗೆಲುವಿನ ಸಂಭ್ರಮದಲ್ಲಿ ಶ್ರೀನಿವಾಸಕಾಮತ್, ಅಬ್ಬಿ ಮಲ್ಲೇಶಪ್ಪ, ರತ್ನಾಕರಶೆಟ್ಟಿ, ಚಂದ್ರಶೇಖರಶೇಟಟ್ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.