ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅರಣ್ಯ ಬೆಂಕಿ ಪ್ರಕರಣ ಸಂಖ್ಯೆ ಹೆಚ್ಚಳ

Lingaraj Badiger
Updated On : 14 Mar 2013, 10:46 am

ಕನ್ನಡ ಪ್ರಭ ವಾರ್ತೆ, ಸೊರಬ, ಮಾ.13
ದಿನದಿಂದ ದಿನಕ್ಕೆ ತಾಪಮಾನ ಏರುತ್ತಿರುವುದರಿಂದ ಸೆಕೆ ತಡೆಯಲಾರದಂತಹ ಸಂಕಟ ಒಂದೆಡೆಯಾದರೆ ಇತ್ತ ತಣ್ಣನೆ ಗಾಳಿ, ನೆರಳು ನೀಡುವ ಗಿಡ, ಮರಗಳು ಬೆಂಕಿ ಅನಾಹುತಗಳಿಂದ ಧರೆಗುರಳಲಾರಂಭಿಸಿವೆ.
ಮಾರ್ಚ್ ತಿಂಗಳ ಮೊದಲವಾರದಲ್ಲಾಗಲೇ 25- 30 ಬೆಂಕಿ ಪ್ರಕರಣಗಳು ಘಟಿಸಿದ್ದು, ದಿನದಿಂದ ದಿನಕ್ಕೆ ಬೆಂಕಿ ಅನಾಹುತಗಳು ಅಧಿಕವಾಗುತ್ತಿವೆಯೇ ಹೊರತು ನಿಯಂತ್ರಣಕ್ಕೆ ತರಲಾಗುತ್ತಿಲ್ಲ.
ತಾಲೂಕಿನ ಹಳೇ ಸೊರಬ, ತಂಡಿಗೆ, ಶಿಂಡ್ಲಿ, ಚಂದ್ರಗುತ್ತಿ, ಉಳವಿ, ಜಡೆ, ಆನವಟ್ಟಿ ಭಾಗದಲ್ಲಿ ಅನೇಕ ಕಡೆ ಕಾಡಿಗೆ ಬೆಂಕಿ ಬಿದ್ದು, ಅಪೂರ್ವ, ಅಪರೂಪದ ಜೀವ ಸಂಕುಲಗಳಿಗೆ ಕುತ್ತುಂಟಾಗಿದೆ. ಕೆಲೆವೆಡೆ ಸಕಾಲದಲ್ಲಿ ಅರಣ್ಯ ಇಲಾಖೆ, ಗ್ರಾಮಸ್ಥರು ಕಾಳಜಿ ವಹಿಸಿದ್ದರಿಂದ ಹೆಚ್ಚಿನ ಲುಕ್ಸಾನು ಆಗಿಲ್ಲ, ಕೆಲವೆಡೆ ರಾತ್ರಿ ವೇಳೆ ಬೆಂಕಿ ತಗುಲುವುದರಿಂದ ಬೆಳಗಾಗುವ ತನಕ ಯಾರ ಗಮನಕ್ಕೂ ಬರದೆ ಅಪಾರ ಪ್ರಮಾಣದ ಮರ ಮಟ್ಟು, ಔಷಧೀಯ ಗಿಡಗಳು ನಾಶಗೊಳ್ಳುತ್ತಿವೆ.
ಉದ್ದೇಶ ಪೂರ್ವಕ ಬೆಂಕಿ: ಪ್ರತಿ ವರ್ಷ ಇದೇ ತಿಂಗಳಿಂದ ಘಟಿಸುವ ಬೆಂಕಿ ಅನಾಹುತಗಳು ಸ್ವಾಭಾವಿಕವಾಗಿ ಆಗುತ್ತಿಲ್ಲ, ಬದಲಿಗೆ ಬಗರ್ ಹುಕುಂಗೆ ಪೂರ್ವಭಾವಿ ಸಿದ್ಧತೆಗಾಗಿ ಈ ರೀತಿ ಉದ್ದೇಶಪಟ್ಟು ಬೆಂಕಿ ಹಚ್ಚಿದರೆ, ಇನ್ನು ಕೆಲವೆಡೆ ತಮ್ಮ ಜಮೀನಿಗೆ ಬೆಂಕಿ ಹಚ್ಚಿ ಮೈಮರೆತ ಪರಿಣಾಮ ಸಮೀಪದ ಕಾಡಿಗೆ ಬೆಂಕಿ ತಗುಲಿದೆ. ಇನ್ನು ಕೆಲವೆಡೆ ಒಣಗಿದ ಗರಿಗರಿ ಹುಲ್ಲಿಗೆ ಬಂಕಿ ಹಚ್ಚಿ ಚೆಂದ ನೋಡುವ ಕಿಡಿಗೇಡಿಗಳ ಸಂಖ್ಯೆಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ ಎಂಬುದು ಬೇಸರದ ಸಂಗತಿಯಾಗಿದೆ.
ನಿಯಂತ್ರಣ ಜಟಿಲ: ಇತ್ತ ಅರಣ್ಯ ಇಲಾಖೆ ಮೊದಲೇ ಬೆಂಕಿ ಅನಾಹುತ ತಪ್ಪಿಸುವ ಉದ್ದೇಶದಿಂದ ರಸ್ತೆ ಅಂಚಿನ ಕಾಡನ್ನು ಸ್ವಚ್ಛಗೊಳಿಸಿಟ್ಟುಕೊಂಡಿದ್ದರೂ ಸಹ, ಉದ್ದೇಶಪಟ್ಟು ಹಾಕುವ ಬೆಂಕಿ ನಿಯಂತ್ರಣ ತೀರ ಜಟಿಲವೆನಿಸಿದೆ.
ಕೆಲವೆಡೆ ಬೆಂಕಿ ಬಿದ್ದಾಗ ಗ್ರಾಮಸ್ಥರುಗಳು ಇಲಾಖೆಯೊಂದಿಗೆ ಕೈ ಜೋಡಿಸದ ಕಾರಣ ಇಲಾಖೆ ಸಿಬ್ಬಂದಿ ಸಾಕಷ್ಟು ಶ್ರಮವಹಿಸಬೇಕಾದ ಅನಿವಾರ್ಯತೆಯೂ ಇದೆ. ಎಲ್ಲಿ ಅರಣ್ಯ ಸಮಿತಿಗಳಿವೆಯೋ ಅಂತಲ್ಲಿ ಬೆಂಕಿ ಅನಾಹುತ ತುಸು ಕಡಿಮೆ ಕಂಡುಬಂದಿದ್ದು, ಗ್ರಾಮಸ್ಥರೆ ತಮ್ಮ ಅರಣ್ಯವನ್ನು ರಕ್ಷಿಸಿಕೊಳ್ಳುತ್ತಿರುವ ಉದಾಹರಣೆಯೂ ಇದೆ.
ಒಮ್ಮೆಲೆ ನಾಲ್ಕಾರು ಕಡೆ ಬೆಂಕಿ ಬೀಳುತ್ತಿರುವುದರಿಂದ ಇರುವ ಒಂದು ಅಗ್ನಿಶಾಮಕ ಯಂತ್ರದಿಂದ ಹತೋಟಿ ತರುವುದು ಕನಸಿನ ಮಾತಾಗಿದೆ. ಈ ಹತ್ತು ಹಲವು ಕೃತಕ ವೈಪರೀತ್ಯಗಳ ನಡುವೆ ಅಂತರ್ಜಲ ಮಟ್ಟಕುಸಿದಿರುವುದು ಜನ ಸಾಮಾನ್ಯರು ಕುಡಿಯುವ ನೀರಿಗಾಗಿ ಪರದಾಡಬೇಕಾದಂತಹ ಎಲ್ಲ ಲಕ್ಷಣಗಳು ಈಗಲೇ ಗೋಚರಿಸುತ್ತಿರುವುದರಿಂದ ಆತಂಕಕ್ಕೊಳಗಾಗುವಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement