ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ಗೆ ವಂಚನೆ
ಕಪ್ರ ವಾರ್ತೆ, ಶಿವಮೊಗ್ಗ, ಮಾ.13
ನಕಲಿ ದಾಖಲೆ ಸೃಷ್ಟಿಸಿ ಅದರ ಆಧಾರದ ಮೇಲೆ ಬ್ಯಾಂಕ್‌ನಲ್ಲಿ ಜಮೀನು ಖರೀದಿ ಹಾಗೂ ಬೆಳೆ ಸಾಲ ಪಡೆದು ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮೂವರು ವಿರುದ್ಧ ನಗರದ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭದ್ರಾವತಿ ತಾಲೂಕು ನಾಗಸಮುದ್ರದ ಚಂದ್ರಶೇಖರ್, ಸಂತೋಷ್ ಕುಮಾರ್ ಹಾಗೂ ಮಲ್ಲಪ್ಪ ಎಂಬುವರ ವಿರುದ್ಧ ಬ್ಯಾಂಕ್ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಮೂವರು ಆರೋಪಿಗಳು ಶಿವಮೊಗ್ಗ ನಗರದ ಕಾರ್ಪೋರೇಷನ್‌ಬ್ಯಾಂಕ್‌ಗೆ ಸುಳ್ಳು ದಾಖಲೆಗಳನ್ನು ನೀಡಿ 6 ಲಕ್ಷ ಜಮೀನು ಖರೀದಿ ಸಾಲ ಪಡೆದುಕೊಂಡಿದ್ದಾರೆ. ನಂತರ ಇದೇ ದಾಖಲೆಗಳ ಆಧಾರದ ಮೇಲೆ ಮತ್ತೆ 4,29,000 ಪಡೆದುಕೊಂಡಿದ್ದಾರೆ. ಸಾಲ ಪಡೆದ ನಂತರ ಸಮರ್ಪಕವಾಗಿ ಮರು ಪಾವತಿ ಮಾಡಿಲ್ಲ. ಆರೋಪಿಗಳು ನೀಡಿದ್ದ ದಾಖಲೆಗಳ ಪರಿಶೀಲನೆ ವೇಳೆ ತಮ್ಮ ಬಳಿ ಇರುವ ಜಮೀನು ದಾಖಲೆ ನಕಲಿ ಎಂಬುವುದು ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬ್ಯಾಂಕ್‌ಗೆ ನಕಲಿ ದಾಖಲೆ ನೀಡಿ ವಂಚನೆ, ನಂಬಿಕೆ ದ್ರೋಹ ಹಾಗೂ ಪಡೆದ ಸಾಲ ಮರು ಪಾವತಿ ಮಾಡದೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ ಮೂವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ನಕಲಿ ಬಂಗಾರ ಜಾಲದಿಂದ ವಂಚನೆ
ಶಿವಮೊಗ್ಗ: ನಕಲಿ ಬಂಗಾರ ನೀಡಿ ನಾಗರಿಕರನ್ನು ವಂಚಿಸುವ ವಂಚಕರ ಜಾಲಕ್ಕೆ ಸಿಲುಕಿದ ಮಂಡ್ಯ ಜಿಲ್ಲೆ ಮದ್ದೂರಿನ ಕೃಷ್ಣ ಎಂಬುವರು ಲಕ್ಷಾಂತರ ರುಪಾಯಿ ಕಳೆದುಕೊಂಡ ಘಟನೆ ನಡೆದಿದೆ. ಈ ಸಂಬಂಧ ಕುಂಸಿ ಠಾಣೆಯಲ್ಲಿ ಮೂವರು ವಂಚಕರ ವಿರುದ್ಧ ಪ್ರಕರಣ ದಾಖಲಾಗಿದೆ..
ಎನ್.ಎಂ. ಕೃಷ್ಣ ಅವರು ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದ್ದ ವೇಳೆ ಶಿವಮೊಗ್ಗದವನೆಂದು ಹೇಳಿಕೊಂಡ ಹನುಮಂತಪ್ಪ ಎಂಬ ಅಪರಿಚಿತ ವ್ಯಕ್ತಿ ಪರಿಚಯ ಮಾಡಿಕೊಂಡಿದ್ದಾನೆ. ಇದೇ ಸಂದರ್ಭದಲ್ಲಿ ಆ ವ್ಯಕ್ತಿ ಕೃಷ್ಣರವರ ಮೊಬೈಲ್ ನಂಬರ್ ಪಡೆದುಕೊಂಡಿದ್ದ.
ಕೆಲ ದಿನಗಳ ನಂತರ ಕೃಷ್ಣರ ಮೊಬೈಲ್‌ಗೆ ಕರೆ ಮಾಡಿದ ಹನುಮಂತಪ್ಪ ತಮ್ಮ ಸ್ನೇಹಿತರೊಬ್ಬರಿಗೆ ನಿಧಿ ಸಿಕ್ಕಿದೆ.
ಅವರು ಕಡು ಬಡವರಾಗಿದ್ದು ಗುಪ್ತವಾಗಿ ಮಾರಾಟ ಮಾಡಲು ನಿರ್ಧರಿಸಿದ್ದಾರೆ. ಇದನ್ನು ಖರೀದಿಸುವಂತೆ ಸಲಹೆ ನೀಡಿದ್ದಾನೆ. ಬೇಕಿದ್ದರೆ ಶಿವಮೊಗ್ಗಕ್ಕೆ ಬಂದು ಪರಿಶೀಲನೆ ನಡೆಸಿ ಎಂದು ತಿಳಿಸಿದ್ದಾನೆ.
ವಂಚಕನ ಮಾತು ನಂಬಿದ ಕೃಷ್ಣ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ವಂಚಕರು ಅವರನ್ನು ನವುಲೆಯ ಬಳಿ ಕರೆದೊಯ್ದು ಎರಡು ಅಸಲಿ ಬಂಗಾರದ ತುಂಡುಗಳನ್ನು ನೀಡಿದ್ದಾರೆ. ಇದನ್ನು ಪಡೆದ ಕೃಷ್ಣ ತಮ್ಮ ಊರಿಗೆ ತೆರಳಿ ಪರಿಶೀಲಿಸಿದ್ದು ಅಸಲಿಯೆಂಬುವುದು ಗೊತ್ತಾಗಿದೆ. ನಂತರ ಅವರು 2.75 ಲಕ್ಷದೊಂದಿಗೆ ಬಂಗಾರ ಖರೀದಿಸಲು ಮತ್ತೆ ಶಿವಮೊಗ್ಗಕ್ಕೆ ಆಗಮಿಸಿದ್ದಾರೆ.
ಕೃಷ್ಣರನ್ನು ತಾಲೂಕಿನ ಆಯನೂರು ಗ್ರಾಮಕ್ಕೆ ಕರೆದೊಯ್ದ ವಂಚಕರು, ನಕಲಿ ಬಂಗಾರ ನೀಡಿ ಅವರ ಬಳಿಯಿದ್ದ 2.75 ಲಕ್ಷ ಪಡೆದು ತೆರಳಿದ್ದಾರೆ. ಇದೇ ಸಂದರ್ಭದಲ್ಲಿ ಕೃಷ್ಣ ಸ್ವೀಕರಿಸಿದ ಬಂಗಾರದ ತುಂಡು ಪರಿಶೀಲನೆ ವೇಳೆ ನಕಲಿ ಎಂಬುವುದು ಗೊತ್ತಾಗಿದೆ.
ಇದೀಗ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.