ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾಸಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಿ

Lingaraj Badiger
Updated On : 14 Mar 2013, 10:39 am

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.13
ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದೆ. ಯಾವ ಕ್ಷಣದಲ್ಲಾದರೂ ಚುನಾವಣಾ ನೀತಿ ಸಂಹಿತೆ  ಜಾರಿಯಾಗಬಹುದು. ಆದ್ದರಿಂದ ಮಾರ್ಚ್ ಅಂತ್ಯದೊಳಗೆ ಜಿಲ್ಲೆಯ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
  ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ತಮ್ಮ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಕೂಡಲೇ ಚಾಲನೆ ನೀಡಿ, ಮುಂದಿನ 15 ದಿನದೊಳಗೆ  ಕಾಮಗಾರಿ ಮುಕ್ತಾಯ ಮಾಡಬೇಕು. ಇನ್ನೂ ತಡವಾದರೆ ನಾನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
    ಆಶ್ರಯ ಯೋಜನೆಯಡಿ ಶಿವಮೊಗ್ಗ ನಗರದ ಬಡವರಿಗೆ, ಕಾರ್ಮಿಕರಿಗೆ ನಿರ್ಮಿಸಲಾಗುತ್ತಿರುವ ಮನೆಗಳನ್ನು  ಏಪ್ರಿಲ್ ಅಂತ್ಯದೊಳಗೆ ಫಲಾನುಭವಿಗಳಿಗೆ ಹಸ್ತಾಂತರಿಸಲು ತೀರ್ಮಾನಿಸಲಾಗಿದೆ. ಆಶ್ರಯ ಸಮಿತಿಯಿಂದ ಮನೆ ಹಾಗೂ ನಿವೇಶನಗಳನ್ನು ನಿರ್ಮಿಸುವ ಯೋಜನೆಗೆ ನೂತನ ಜಿಲ್ಲಾಧಿಕಾರಿಗಳು ಜಿಲ್ಲೆಗೆ ಬಂದನಂತರ ವೇಗ ಸಿಕ್ಕಿದೆ. ಈಗಾಗಲೇ ಬಹುತೇಕ ಮನೆಗಳು ಪೂರ್ಣಗೊಂಡಿದೆ. ಒಟ್ಟು 892 ಮನೆಗಳನ್ನು ಏಪ್ರಿಲ್ ಅಂತ್ಯದೊಳಗೆ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ನಿವೇಶನ ಹಂಚಿಕೆ ಚರ್ಚೆ: ಸಿದ್ಲಿಪುರದಲ್ಲಿ 80 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ವಿವಿಧ ಕಾರ್ಖಾನೆಗಳಲ್ಲಿ ಕೆಲಸ  ಮಾಡುತ್ತಿರುವ ಕಾರ್ಮಿಕ ವರ್ಗದವರಿಗೆ ಸುಮಾರು 3 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ  ಚರ್ಚಿಸಲಾಯಿತು.
   ಈಗಾಗಲೇ ಕಾರ್ಮಿಕರು ನಿವೇಶನಕ್ಕಾಗಿ ತಮ್ಮ ಬ್ಯಾಂಕ್‌ನ ಖಾತೆಯಲ್ಲಿ ರು. 35 ಸಾವಿರ ಹಣ ಮೀಸಲಿರಿಸಿದ್ದಾರೆ. ಈ ಹಣವನ್ನು ಗೃಹ ನಿರ್ಮಾಣ ಸಹಕಾರ ಸಂಘ ರಚಿಸಿ, ಬಡಾವಣೆ ನಿರ್ಮಾಣ ಪ್ರಕ್ರಿಯೆ ಆರಂಭಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಪ್ರಕ್ರಿಯೆಯನ್ನು 15 ದಿನದೊಳಗಾಗಿ ಚಾಲನೆ ಪಡೆಯಲಿದೆ ಎಂದರು.
   ಗೋಪಿಶೆಟ್ಟಿಕೊಪ್ಪ 17 ಎಕರೆ, ಗೋವಿಂದಾಪುರ, ಸೋಗಾನೆಯಲ್ಲಿ 100 ಎಕರೆ ಜಮೀನನ್ನು ಬಡ ಜನರಿಗೆ ನಿವೇಶನ ನೀಡುವ ಸಲುವಾಗಿ ವಶಪಡಿಸಿಕೊಳ್ಳಲಾಗಿದೆ. ಇಲ್ಲಿ ಒಟ್ಟು 5 ಸಾವಿರ ನಿವೇಶನಗಳನ್ನು ಬಡವರಿಗೆ  ಹಂಚಿಕೆ ಮಾಡುವ ಸಂಬಂಧ ಬಡಾವಣೆಗಳ ನಿರ್ಮಾಣಕ್ಕೆ ವಸತಿ ಇಲಾಖೆಯಿಂದ ರು. 16.5 ಕೋಟಿ ಹಣ  ಮಂಜೂರು ಮಾಡುವುದಾಗಿ ಉಸ್ತುವಾರಿ ಕಾರ್ಯದರ್ಶಿ ತಿಳಿಸಿರುವುದರಿಂದ ಈ ಯೋಜನೆ ಶೀಘ್ರ ಕಾರ್ಯರೂಪಕ್ಕೆ ಬರಲಿದೆ ಎಂದು ತಿಳಿಸಿದರು.
   ಶಿವಮೊಗ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ವಿಶೇಷ ಸಭೆ ಹಮ್ಮಿಕೊಳ್ಳಲಾಗುವುದು ಎಂದು ಈಶ್ವರಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.
ಹಣಕಾಸಿನ ಭರವಸೆ: ವಿದ್ಯಾನಗರ ಚತುಷ್ಪುತ ರಸ್ತೆಗೆ ಸಂಬಂಧಿಸಿದಂತೆ ರು. 21 ಕೋಟಿಯ ಯೋಜನೆ ತಯಾರಿಸಲಾಗಿದೆ. ಭೂ ಸ್ವಾಧೀನ ಪರಿಹಾರ ಹಾಗೂ ಒಳ ಚರಂಡಿ ಇಲಾಖೆಗೆ ಸುಮಾರು ರು. 7 ಕೋಟಿ ರುಪಾಯಿಗಳಷ್ಟು ಠೇವಣಿ  ನೀಡಬೇಕಾಗಿದೆ ಎಂದು ವಿವರಿಸಿದ ಅಧಿಕಾರಿಗಳಿಗೆ ಕೂಡಲೇ ಹಣಕಾಸಿನ ವ್ಯವಸ್ಥೆ ಮಾಡುವುದಾಗಿ ಡಿಸಿಎಂ ಭರವಸೆ ನೀಡಿದರು.
    ಎನ್‌ಟಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದ್ದು ಕಾಮಗಾರಿಗೆ  ಟೆಂಡರ್ ಕರೆಯಲಾಗಿದೆ ಎಂದು ಮಾಹಿತಿ ನೀಡಲಾಯಿತು.  
    ಇದಕ್ಕೂ ಮುನ್ನ ಸಭೆಯಲ್ಲಿ ಶಿವಮೊಗ್ಗದ ಹೊನ್ನಾಳಿ ರಸ್ತೆಯ ರೇಲ್ವೆ ಸಂಪರ್ಕ ರಸ್ತೆಗೆ ಸಂಬಂಧಿಸಿದಂತೆ  ಕೊಳಚೆ ನಿರ್ಮೂಲನಾ ಮಂಡಳಿಯ ಸುಪರ್ದಿಯಲ್ಲಿರುವ ಭೂಮಿ ವಶಕ್ಕೆ ತೆಗೆದುಕೊಳ್ಳುವುದು, ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ, ನೆಹರೂ ಕ್ರೀಡಾಂಗಣದ ಸಿಂಥೆಟಿಕ್ ಟ್ರಾಕ್ ಕಾಮಗಾರಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ, ಸೋಗಾನೆ ಕಾರಾಗೃಹ ಹಾಗೂ ಸಿಬ್ಬಂದಿ ವಸತಿ ಗೃಹ ನಿರ್ಮಾಣ ಕಾಮಗಾರಿ ಸೇರಿದಂತೆ ವಿವಿಧ ಯೋಜನೆಗಳಿಗೆ ತ್ವರಿತ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಚರ್ಚೆ ನಡೆಯಿತು.  
ಅಧಿಕಾರಿಗಳಿಗೆ ಸೂಚನೆ: ಶಿವಮೊಗ್ಗ ನಗರದಲ್ಲಿ ಉದ್ದೇಶಿತ ಕಟ್ಟಡ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಸಮಗ್ರ ಕುಡಿಯುವ ನೀರಿನ  ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
    ಶಿವಪ್ಪನಾಯಕ ಮಾರುಕಟ್ಟೆ ಮಳಿಗೆಗಳ ಹಂಚಿಕೆ,  ಒಳಚರಂಡಿ ಯೋಜನೆಗಳು, ತ್ಯಾವರೆಕೊಪ್ಪ ಸಿಂಹಧಾಮಕ್ಕೆ ನೀರು ಸರಬರಾಜು ಯೋಜನೆ, ಜಿಲ್ಲಾಧಿಕಾರಿ  ಕಚೇರಿ ಮೂರನೇ ಮಹಡಿ ಸಭಾಂಗಣ ನಿರ್ಮಾಣ ಕಾಮಗಾರಿ, ಭದ್ರಾ ಆಧುನೀಕರಣ, ರಾಷ್ಟ್ರೀಯ ಹೆದ್ದಾರಿ  13 ನಾಲ್ಕು ಪಥ ರಸ್ತೆ ನಿರ್ಮಾಣ, ಎನ್.ಟಿ.ರಸ್ತೆ ಅಗಲೀಕರಣ ಯೋಜನೆಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ,  ಜಿಲ್ಲಾ  ಉಸ್ತುವಾರಿ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ, ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಜಿಲ್ಲಾ ಪೊಲೀಸ್  ವರಿಷ್ಠಾಧಿಕಾರಿ ಕೌಶಲೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement