ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಎಂಎನ್‌ಸಿ ಕಂಪನಿಗಳಿಂದ ಕೃಷಿಗೆ ನಷ್ಟ

Lingaraj Badiger
Updated On : 15 Mar 2013, 10:32 am

ಕಪ್ರ ವಾರ್ತೆ, ಶಿವಮೊಗ್ಗ, ಮಾ.14
ದೇಶದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಂದ ಕೃಷಿ ಕ್ಷೇತ್ರಕ್ಕೆ ಅಪಾರ ನಷ್ಟಸಂಭವಿಸಲಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ. ಗಂಗಾಧರ್ ಆತಂಕ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಶತ್ ಹಾಗೂ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಕಾಗೋಡು ಹೋರಾಟ ಒಂದು ಚಿಂತನೆ ದತ್ತಿ ಅಂಗವಾಗಿ ಭೂಮಿ ಈ ಹೊತ್ತಿನ ಆತಂಕ ಚಿಂತನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದೇಶಿ ನೇರ ಬಂಡವಾಳ ಹೂಡಿಕೆಯಿಂದ ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿದ್ದು, ರೈತರ ಫಲವತ್ತಾದ ಭೂಮಿಗಳನ್ನು ಕಂಪನಿಗಳ ಸ್ಥಾಪನೆ ಬಳಸಿಕೊಳ್ಳಲಾಗಿದೆ. ಅಲ್ಲದೇ, ಕೈಗಾರಿಕರಣದ ಹೆಸರಿಲ್ಲಿ ರೈತರನ್ನು ಜಾಗತೀಕರಣದ ಕೂಪಕ್ಕೆ ದೂಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಎಂಎನ್‌ಸಿ ಹಿಡಿತ: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಆದರೆ, ಈ ಪರಂಪರೆ ಇಂದು ಕಡಿಮೆಯಾಗುತ್ತಿರುವುದು ಆತಂಕ ತಂದಿದೆ. ಅಲ್ಲದೇ, ಕೃಷಿ ಇಂದು ಉದ್ಯಮವಾಗಿದೆ. ಈ ಸನ್ನಿವೇಶ ನಿರ್ಮಾಣವಾಗಲು ಮುಖ್ಯ ಕಾರಣ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಕೆಟ್ಟ ದೃಷ್ಟಿ ಬೀರುತ್ತಿರುವುದು ಎಂದರು.
ಜಾಗತಿಕ ವಿಶ್ವ ವಾಣಿಜ್ಯ ಒಪ್ಪಂದದಲ್ಲಿ ವಿದೇಶಿ ಬಂಡವಾಳವನ್ನು ಭಾರತದ ಕೃಷಿ ರಂಗದ ಮೇಲೆ ಹೊಡಿಕೆ ಮಾಡಲಾಗುತ್ತಿದೆ. ವಿದೇಶಿಗರು ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಕೃಷಿ ರಂಗದ ಮೇಲೆ ತಮ್ಮ ಹಿಡಿತ ಸಾಧಿಸುತ್ತಿವೆ. ಅಲ್ಲಿನ ಸಂಸ್ಕೃತಿಯನ್ನು ಭಾರತದಲ್ಲಿ ತರಲು ಸಜ್ಜಾಗುತ್ತಿವೆ ಎಂದರು.
ಪ್ರಯೋಜನವಿಲ್ಲ: ಐಟಿ ಕಂಪನಿಗಳು ದೇಶದಲ್ಲಿ ಬರುತ್ತಿರುವುದು ಸಂತಸ ತಂದಿದೆ. ಆದರೆ, ಇದು ಕೇವಲ ನಿಗದಿತ ಪ್ರಮಾಣದಲ್ಲಿನ ಜನರಿಗೆ ಮಾತ್ರ ಉದ್ಯೋಗ ಸೃಷ್ಟಿಸುತ್ತದೆ. ಉಳಿದಂತಹ ರೈತಾಪಿ, ಮಧ್ಯಮ ವರ್ಗದವರಿಗೆ ಸೇರಿದಂತೆ ಬೇರೆ ಯಾವುದೇ ವರ್ಗದವರಿಗೆ ಪ್ರಯೋಜನವಿಲ್ಲ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಕಡಿದಾಳು ಶಾಮಣ್ಣ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ್, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ.ಬಿ. ಸುವರ್ಣ, ಕಾಲೇಜಿನ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ. ಎಚ್.ಎಸ್. ಮೋಹನ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement