ಬೆಕ್ಕೋಡಿ ಸೇತುವೆಗೆ ರು. 70 ಕೋಟಿ ಮಂಜೂರು
ಕ.ಪ್ರ.ವಾರ್ತೆ ಹೊಸನಗರ ಮಾ.14
ಸಂತ್ರಸ್ತರ ಹಲವು ದಶಕಗಳ ಬೇಡಿಕೆಯಾಗಿದ್ದ ಬೆಕ್ಕೂಡಿ ಸೇತುವೆಗೆ ಕೊನೆಗೂ ರಾಜ್ಯ ಸರ್ಕಾರ 70 ಕೋಟಿ ಮಂಜೂರು ಮಾಡಿದೆ ಎಂದು ಎಂಪಿಎಂ ಅಧ್ಯಕ್ಷ, ಮಾಜಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಪಟ್ಟಣದ ಸುದ್ದಿಮನೆಯಲ್ಲಿ ಮಾತನಾಡಿ, ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಸರ್ಕಾರ ಈ ತೀರ್ಮಾನ ಕೈಗೊಂಡಿದ್ದು, ನಮ್ಮ ದೀರ್ಘ ಕಾಲದ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು. ಕಳೆದ ವರ್ಷದ ಬಜೆಟ್‌ನಲ್ಲಿ 25 ಕೋಟಿ ಸರ್ಕಾರ ನೀಡಿತ್ತಾದರು ಅಧಿಕಾರಿಗಳ ತಪ್ಪಿನಿಂದ ಅದು ಕೃಷಿ ಬಜೆಟ್‌ನಲ್ಲಿ ಸೇರಿ ಹೋಗಿತ್ತು. ಪ್ರಸ್ತುತ ಬಜೆಟ್‌ನಲ್ಲಿ 1 ಕೋಟಿ ತೆಗೆದಿರಿಸಲಾಗಿತ್ತು. ಆದರೆ ಇದರಿಂದ ಉಪಯೋಗವಾಗುತ್ತಿರಲಿಲ್ಲ. 70 ಕೋಟಿ ನೀಡಿರುವುದರಿಂದ ಸೇತುವೆ ನಿರ್ಮಾಣ ಕೆಲಸ ಸರಾಗವಾದಂತಾಗಿದೆ ಎಂದು ತಿಳಿಸಿದರು.
ಹಲವು ದಶಕಗಳ ಬೇಡಿಕೆ: ಬೆಕ್ಕೋಡಿ ಬೇಡಿಕೆ ಇಂದು ನಿನ್ನೆಯದಲ್ಲ. ಈ ಬಗ್ಗೆ ಸರ್ಕಾರದೊಂದಿಗೆ ನಿರಂತರ ಹೋರಾಟ ಮಾಡಲಾಗುತ್ತಿತ್ತು. ಮುಖ್ಯಮಂತ್ರಿ ಮತ್ತು ಡಿಸಿಎಂ ಈಶ್ವರಪ್ಪರನ್ನು ಇತ್ತೀಚೆಗೆ ಭೇಟಿ ಮಾಡಿ ಸೇತುವೆಯ ಅಗತ್ಯತೆಗಳ ಬಗ್ಗೆ ವಿವರಿಸಿ ಮನವೊಲಿಸಲಾಯಿತು. ಬಿಜೆಪಿ ಸರ್ಕಾರ ಈ ಭಾಗಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗಿದ್ದು ಎಂಜನಿಯರಿಂಗ್ ವಿಭಾಗದವರು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದರು.
ಬಿಜೆಪಿ ವ್ಯಕ್ತಿ ಆಧಾರಿತ ಪಕ್ಷವಲ್ಲ ಹಾಗಾಗಿ ಯಾರು ಪಕ್ಷ ತೊರೆದರು ಪಕ್ಷಕ್ಕೆ ನಷ್ಟವಿಲ್ಲ. ಆದರೆ ಬೇಳೂರು ಗೋಪಾಲಕೃಷ್ಣರ ಮುಂದಿನ ಉತ್ತಮ ರಾಜಕೀಯ ಜೀವನಕ್ಕಾಗಿ ಬಿಜೆಪಿಯಲ್ಲಿರುವುದು ಒಳ್ಳೆಯದು ಎಂದು ತಿಳಿ ಹೇಳಿದರು. ತಾಲೂಕು ಬಿಜೆಪಿ ಅಧ್ಯಕ್ಷ ಕೆ.ವಿ. ಕೃಷ್ಣಮೂರ್ತಿ, ಜಿಪಂ ಸದಸ್ಯೆ ಶುಭಾಕೃಷ್ಣಮೂರ್ತಿ, ಪಕ್ಷದ ಕಾರ್ಯದರ್ಶಿ ಎ.ವಿ. ಮಲ್ಲಿಕಾರ್ಜುನ್, ವಿವೇಕಕಾಮತ್, ಕೃಷ್ಣಪ್ಪ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.