ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಾರ್ಡ್ ಪುನರ್‌ವಿಂಗಡಣೆಯಿಂದ ಫಲಿತಾಂಶ ವ್ಯತಿರಿಕ್ತ

Lingaraj Badiger
Updated On : 15 Mar 2013, 10:32 am

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ.14
ಯಾರ ಗಮನಕ್ಕೂ ಬಾರದೆ ಶಿವಮೊಗ್ಗ ನಗರಸಭೆ 12ನೇ ವಾರ್ಡ್ ಪುನರ್‌ವಿಂಗಡಣೆ ಮಾಡಿದ್ದರಿಂದ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದ್ದಾರೆ.
ಇದಕ್ಕೆ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರೇ ಕಾರಣ ಎಂದು ಅವರು ಹರಿಹಾಯ್ದಿದ್ದಾರೆ. ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 3ನೇ ವಾರ್ಡ್‌ಗೆ ಸೇರಿದ್ದ ಗುಂಡಪ್ಪ ಶೆಡ್ ಭಾಗವನ್ನು 12ನೇ  ವಾರ್ಡ್‌ಗೆ ಸೇರಿಸಲಾಗಿದೆ. ಇದರಿಂದ 12ನೇ ವಾರ್ಡ್‌ಗೆ ಹೆಚ್ಚುವರಿಯಾಗಿ 185 ಮತಗಳು ಸೇರ್ಪಡೆಯಾಗಿವೆ. ಗುಂಡಪ್ಪ ಶೆಡ್‌ನಲ್ಲಿ ಡಿಸಿಎಂ ಈಶ್ವರಪ್ಪ ಅವರ ಮನೆಯೂ ಇರುವುದರಿಂದ ಅವರ ಪ್ರಭಾವ ಸಹಜವಾಗಿರುತ್ತದೆ. ಹೀಗಾಗಿ ನಮ್ಮ ಅಭ್ಯರ್ಥಿ 12ನೇ ವಾರ್ಡ್‌ನಲ್ಲಿ 48 ಮತಗಳಿಂದ ಸೋಲನುಭವಿಸಬೇಕಾಯಿತು ಎಂದು ಪ್ರಸನ್ನಕುಮಾರ್ ಹೇಳಿದರು. ಇದೇ ರೀತಿ ಗಾಡಿಕೊಪ್ಪ ವಾರ್ಡ್‌ನಲ್ಲಿಯೂ ಬದಲಾವಣೆ ಮಾಡಲಾಗಿದೆ ಎಂದರು.
ಮೈತ್ರಿ: ಶಿವಮೊಗ್ಗ ಸೇರಿದಂತೆ ಜಿಲ್ಲೆಯ ಯಾವುದೇ ನಗರಸಭೆಯಲ್ಲಿ ಮೈತ್ರಿಯನ್ನು ಹೈಕಮಾಂಡ್ ಸೂಚನೆಯಂತೆ ಮಾಡಲಾಗುವುದು ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ.
ಬಿಜೆಪಿ ಹೊರತುಪಡಿಸಿ ಇತರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಮುಕ್ತವಾಗಿದೆ ಎಂದರು.
ಬಿಜೆಪಿಯು ತನಗೆ ಅನುಕೂಲವಾಗುವ ಮೀಸಲಾತಿ ನಿಗದಿಪಡಿಸಿ ಹಿಂಭಾಗಿಲಿನಿಂದ ಅಧಿಕಾರಕ್ಕೇರಲು ಪ್ರಯತ್ನಿಸಿದರೆ ಅದಕ್ಕೆ ತಕ್ಕ ಫಲ ಅನುಭವಿಸಬೇಕಾಗುತ್ತದೆ. ಅಧಿಕಾರಕ್ಕೇರುವ ಅವರ ಕುತಂತ್ರ ಜನರಿಗೆ ಗೊತ್ತಾಗುತ್ತದೆ ಎಂದರು.
ನಾವು ಪಕ್ಷದಿಂದ ನಮ್ಮ ಯಾವ ಅಭ್ಯರ್ಥಿಗಳೂ ಹಣ ನೀಡಲಿಲ್ಲ. ಗೆದ್ದವರೆಲ್ಲರೂ ಸ್ವಸಾಮರ್ಥ್ಯದಿಂದ ಗೆದ್ದಿದ್ದಾರೆ. ಬಿಜೆಪಿ ಅಬ್ಬರ, ಹಣದ ಹೊಳೆಯ ನಡುವೆ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಗಳಿಸಿದಷ್ಟೇ ಮತ ಪ್ರಮಾಣ ಉಳಿಸಿಕೊಂಡಿರುವುದೇ ನಮ್ಮ ಸಾಧನೆ ಎಂದರು.
ಮುಖಂಡರಾದ ಕಾಗೋಡು ತಿಮ್ಮಪ್ಪ ಅವರ ಶ್ರಮದಿಂದ ಸಾಗರದಲ್ಲಿ ಬಹುಮತ ಪಡೆಯಲು ಸಾಧ್ಯವಾಯಿತು. ಭದ್ರಾವತಿಯಲ್ಲಿ ಅತಿ ಹೆಚ್ಚು ಆಕಾಂಕ್ಷಿಗಳಿದ್ದುದು ನಾವು ಸೋಲುವುದಕ್ಕೆ ಕಾರಣ ಎಂದು ಅವರು ವಿಶ್ಲೇಷಿಸಿದರು.
ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿದವರ ವಿರುದ್ಧ ಕ್ರಮ ಕೈಗೊಳ್ಳಲು ಕೆಪಿಸಿಸಿಗೆ ಶಿಫಾರಸ್ಸು ಮಾಡಲಾಗಿದೆ. 1ನೇ ವಾರ್ಡ್‌ನಿಂದ ನಿಂತಿದ್ದ ಚೇತನ್ ಅವರ ವಿರುದ್ಧ ಕ್ರಮಕ್ಕೆ ಎನ್‌ಎಸ್‌ಯುಐಗೆ ಬರೆಯಲಾಗಿದೆ. ಉಳಿದವರು ಪಕ್ಷಕ್ಕೆ ರಾಜಿನಾಮೆ ಕೊಟ್ಟಿದ್ದಾರೆ ಎಂದರು.
ಸೇರ್ಪಡೆ: ಇದೇ ಸಂದರ್ಭದಲ್ಲಿ 35ನೇ ವಾರ್ಡ್‌ನಿಂದ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿರುವ ರೆಹಮಾನ್ ಖಾನ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದು ಅವರನ್ನು ಅಧ್ಯಕ್ಷರು ಹಾರ್ದಿಕವಾಗಿ ಸ್ವಾಗತಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಇಸ್ಮಾಯಿಲ್ ಖಾನ್, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ,  ಮುಖಂಡರಾದ ಸುಂದರೇಶ್, ಹಾಲಪ್ಪ, ಎಸ್.ಪಿ. ದಿನೇಶ್, ರುದ್ರೇಶ್, ನಗರಸಭೆಗೆ ಆಯ್ಕೆಯಾಗಿರುವ  ಮರಿಯಪ್ಪ, ವಿಜಯಲಕ್ಷ್ಮೀ ಪಾಟೀಲ್, ರಾಜಶೇಖರ್ ಎಸ್. ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement