ಇಂದಿನಿಂದ ರಾಷ್ಟ್ರೀಯ ನೃತ್ಯೋತ್ಸವ
ಕ.ಪ್ರ ವಾರ್ತೆ, ಶಿವಮೊಗ್ಗ
ಬೆಂಗಳೂರಿನ ಕಲಾತೀರ ಸಂಸ್ಥೆ ಈ ಬಾರಿಯ ಶಿವಾರ್ಪಣ- ರಾಷ್ಟ್ರೀಯ ನೃತ್ಯೋತ್ಸವ ಹಾಗೂ ವಿಚಾರ ಸಂಕಿರಣವನ್ನು ಹೆಬ್ರಿಯ ಅರ್ಧನಾರೀಶ್ವರ ದೇವಾಲಯದ ಆವರಣದ ವೇದಿಕೆಯಲ್ಲಿ ಮಾ.16 ಮತ್ತು 17ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಒಡಿಸ್ಸಿ ನೃತ್ಯ ಕಲಾವಿದೆ ಪೃಥೆ ಹವಾಲ್ದಾರ್ ಅವರು ನೃತ್ಯ ಗುರು ಉದಯಕುಮಾರ್ ಶೆಟ್ಟಿ ಹಾಗೂ ಸೌಮ್ಯ ಉದಯ್ ಅವರೊಂದಿಗೆ ಒಡಿಸ್ಸಿ ನೃತ್ಯಪ್ರದರ್ಶನ ನೀಡಲಿದ್ದು, ಪ್ರಾತ್ಯಕ್ಷಿಕೆಯಲ್ಲಿ ಸಹ ಭಾಗವಹಿಸಲಿದ್ದಾರೆ.
ಉದ್ಘಾಟನೆ: ಕಾರ್ಯಕ್ರಮದ ಅಂಗವಾಗಿ ರೂಪಿಸಲಾದ ಸಾಂಸ್ಕೃತಿಕ ದಿಬ್ಬಣಕ್ಕೆ ಕಾರ್ಕಳದ ಮಾಜಿ ಶಾಸಕ ಸುನಿಲ್ಕುಮಾರ್ ಚಾಲನೆ ನೀಡಲಿದ್ದಾರೆ. ಶಿವಾರ್ಪಣ ರಾಷ್ಟ್ರೀಯ ನೃತ್ಯೋತ್ಸವವನ್ನು ಹೆಸರಾಂತ ಒಡಿಸ್ಸಿ ಕಲಾವಿದ, ಗುರು ರತಿಕಾಂತ್ ಮಹಾಪಾತ್ರ ಉದ್ಘಾಟಿಸಲಿದ್ದಾರೆ.
ನಂತರ ಸಂಗೀತಾ ಕಟ್ಟಿ ಕುಲಕರ್ಣಿ ಅವರಿಂದ ಹಿಂದೂಸ್ಥಾನಿ ಗಾಯನ, ಬೆಂಗಳೂರಿನ ಅಶ್ವತ್ಥ್ ಮತ್ತು ತಂಡದಿಂದ ಭರತನಾಟ್ಯ, ಒಡಿಶಾದ ಜಾನಪದ ನೃತ್ಯ ಗೋಟಿಪುವಾ ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತ ಗಾಯಕ ರಮೇಶ್ಚಂದ್ರ ಮತ್ತು ತಂಡದಿಂದ ಸುಗಮ ಸಂಗೀತ, ಟಾಕಪ್ಪ ಮತ್ತು ತಂಡದಿಂದ ಡೊಳ್ಳು ಕುಣಿತ, ಕುಮಾರಸ್ವಾಮಿ ಮತ್ತು ತಂಡದಿಂದ ಬೀಸು ಕಂಸಾಳೆ, ಮಂಗಳೂರಿನ ಸನಾತನ ನಾಟ್ಯಾಲಯದಿಂದ ಭರತ ನಾಟ್ಯ ಹಾಗೂ ಉದಯಕುಮಾರ್ ಶೆಟ್ಟಿ, ಸೌಮ್ಯ ಉದಯ್ಕುಮಾರ್ ಹಾಗೂ ಪೃಥೆ ಹವಾಲ್ದಾರ್ ತಂಡದಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ.
ವಿಚಾರ ಸಂಕಿರಣ: ಮಾ.17ರಂದು ಬೆಳಿಗ್ಗೆ 11ಕ್ಕೆ ಜಾನಪದ ಹಾಗೂ ಶಾಸ್ತ್ರೀಯ ಕಲೆ ಒಂದು ಒಳನೋಟ ಕುರಿತ ವಿಚಾರ ಸಂಕಿರಣ ನಡೆಯಲಿದೆ. ಸಂಗೀತ ವಿದ್ವಾಂಸ ಆರ್.ಕೆ. ಪದ್ಮನಾಭ ಚಾಲನೆಗೊಳಿಸಲಿದ್ದಾರೆ.
ನಂತರ ನೃತ್ಯ ಪರಂಪರೆ ಕುರಿತ ಪ್ರಾತ್ಯಕ್ಷಿಕೆಯಲ್ಲಿ ಾಜಸ್ಥಾನದ ಕಲ್ಬೇಲಾ ಜಾನಪದ ನೃತ್ಯ, ಒಡಿಶಾದ ಗೋತಿಪುರ ಸಂಪ್ರದಾಯ, ಒಡಿಸ್ಸಿ ನೃತ್ಯ ಕುರಿತು ಪುಣೆಯ ಪದ್ಮನಾಭ ಬಾಪು, ಉದಯಕುಮಾರ್ ಶೆಟ್ಟಿ, ರತಿಕಾಂತ್ ಮಹಾಪಾತ್ರ ಹಾಗೂ ತಮಿಳುನಾಡಿನ ಜಾನಪದ ವೈವಿಧ್ಯ ಕುರಿತು ಚನ್ನೈನ ಶಿವಾಜಿರಾವ್ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ.
ಜಾನಪದ ನೃತ್ಯ: ಸಂಜೆಯ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮದಲ್ಲಿ, ರಾಜಾಸ್ಥಾನದ ಕಲ್ಬೆಲಾ ಜಾನಪದ ನೃತ್ಯ, ಶಂಕರ ಶಾನುಭಾಗ್ ತಂಡದಿಂದ ಸುಗಮ ಸಂಗೀತ, ತಂಜಾವೂರ್ನ ಶಿವಾಜಿರಾವ್ ತಂಡದಿಂದ ಜಾನಪದ ನೃತ್ಯ, ಕಲಾತೀರ ತಂಡದಿಂದ ಸಮಕಾಲೀನ ನೃತ್ಯ ವೈವಿಧ್ಯ, ಉಡುಪಿಯ ನೃತ್ಯ ನಿಕೇತನ ತಂಡದಿಂದ ಭರತನಾಟ್ಯ ಹಾಗೂ ಮೈಸೂರಿ ಎಸ್. ಸಂಗೀತಾ ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ, ಭಾರತೀಯ ಸಾಂಸ್ಕೃತಿಕ ಸಂಬಂಧ ಪ್ರತಿಷ್ಠಾನ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಗಳ ಸಹಭಾಗಿತ್ವ ಮತ್ತು ಹೆಬ್ರಿಯ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೆಂಗಳೂರಿನ ಕಲಾತೀರ ಆಯೋಜಿಸಿದೆ.