ಕೆಟ್ಟ ಹವ್ಯಾಸಗಳಿಗೆ ಬಲಿಯಾಗಬೇಡಿ: ವಿವೇಕ್
ಕನ್ನಡಪ್ರಭ ವಾರ್ತೆ, ಸಾಗರ, ಮಾ.15 ಯುವಜನರು ಕೆಟ್ಟ ಹವ್ಯಾಸಗಳಿಗೆ ಬಲಿಯಾಗಿ ಭವಿಷ್ಯವನ್ನು ಹಾಳುಮಾಡಿಕೊಳ್ಳಬಾರದು ಎಂದು ಡಾ. ವಿವೇಕ್ ಹೇಳಿದರು.
ಇಂದಿರಾಗಾಂಧಿ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಯುವ ರೆಡ್ ಕ್ರಾಸ್ ಘಟಕ ಏರ್ಪಡಿಸಿದ್ದ ಆರೋಗ್ಯ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ, ಯುವಜನರು ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರಬಾರದು ಎಂದರು.
ಶುಚಿರುಚಿಯಾದ ಆಹಾರ ಸೇವನೆ, ಧ್ಯಾನ, ಯೋಗ ಇತರೆ ಚಟುವಟಿಕೆಗಳತ್ತಲೂ ಯುವಜನರು ಆಸಕ್ತಿ ಬೆಳೆಸಿಕೊಳ್ಳಬೇಕು. ಸಾಮಾನ್ಯ ಕಾಯಿಲೆ ಬಂದಾಗ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯುವ ಮೂಲಕ ಆರೋಗ್ಯಪೂರ್ಣ ಜೀವನ ನಡೆಸಬೇಕು ಎಂದು ಸಲಹೆ ಮಾಡಿದರು.
ಹದಿಹರೆಯದ ಸಮಸ್ಯೆಗಳು ವಿಷಯ ಕುರಿತು ಮಾತನಾಡಿದ ಡಾ. ರಶ್ಮಿ ಎಸ್. ಫ್ರಾನ್ಸಿಸ್, ಯುವಜನರು ಹದಿಹರೆಯದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕಾಗುತ್ತದೆ. ಬಾಹ್ಯಾಕರ್ಷಣೆಯಿಂದ ಅನೇಕ ಸಂದರ್ಭದಲ್ಲಿ ಯುವಜನರು ತಪ್ಪುಹೆಜ್ಜೆ ಇರಿಸಿ ತಮ್ಮ ಜೀವನವನ್ನೆ ಹಾಳು ಮಾಡಿಕೊಳ್ಳುವ ಸಂದರ್ಭಗಳಿರುತ್ತವೆ. ಎನ್‌ಎಸ್‌ಎಸ್, ಎನ್‌ಸಿಸಿ ಹಾಗೂ ರೆಡ್ ಕ್ರಾಸ್‌ನಂತಹ ಸಂಘಟನೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಜೀವನ ವಿಧಾನದ ಕುರಿತು ಹೆಚ್ಚು ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರಾಚಾರ್ಯ ಡಾ. ಅಶೋಕ ಡಿ. ರೇವಣಕರ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.