ನಗರಸಭೆಗೆ ಹೊಸ ಲೆಕ್ಕಾಚಾರ
- ಹೊನ್ನಾಳಿ ಚಂದ್ರಶೇಖರ್
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಮಾ.15
ಶಿವಮೊಗ್ಗ ನಗರಸಭೆ ಈಗ ಹಲವು ಲೆಕ್ಕಾಚಾರಗಳ ಕಣವಾಗಿದೆ. ಯಾವ ಪಕ್ಷಕ್ಕೂ ಬಹುಮತ ಸಿಗದ ಕಾರಣ ಯಾರ್ಯಾರು ಜತೆಗೂಡಿ ಅಧಿಕಾರಕ್ಕೆ ಬರಬಹುದೆಂಬ ಕುತೂಹಲ ಮೂಡಿದೆ.
ಸರಳ ಬಹುಮತಕ್ಕೆ 21 ಸದಸ್ಯರ ಬೆಂಬಲ ಬೇಕು. ಯಾವ ಪಕ್ಷವೂ ಈ ಮ್ಯಾಜಿಕ್ ಸಂಖ್ಯೆಯ ಹತ್ತಿರಕ್ಕೂ ಬಂದಿಲ್ಲ.
ಕಾದುನೋಡುವ ತಂತ್ರ: ಒಂದೆಡೆ ಕಾಂಗ್ರೆಸ್ ಯಾವುದೇ ಬಿಜೆಪಿಯೇತರ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದರೆ, ಕೆಜೆಪಿಯೂ ಬಿಜೆಪಿಯೇತರ ಪಕ್ಷದೊಂದಿಗೆ ಹೊಂದಾಣಿಕೆಗೆ ಸಿದ್ಧವಿದೆ. ಇನ್ನೊಂದೆಡೆ ಜೆಡಿಎಸ್ ಕಾದುನೋಡುವ ತಂತ್ರ ಅನುಸರಿಸುತ್ತಿದೆ. 35 ಸದಸ್ಯ ಬಲದ ನಗರಸಭೆಯಲ್ಲಿ ಕಾಂಗ್ರೆಸ್ 12 ಸದಸ್ಯರೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ 8, ಕೆಜೆಪಿ 7, ಜೆಡಿಎಸ್ 5 ಸ್ಥಾನ ಹೊಂದಿದ್ದರೆ ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದಾರೆ. ಎಸ್ಡಿಪಿಐ ಒಬ್ಬರ ಸದಸ್ಯಬಲ ಹೊಂದಿದೆ.
ಇದನ್ನು ಹೊರತುಪಡಿಸಿ ಬಿಜೆಪಿಯು ಸಂಸದ, ಶಾಸಕರ 6 ಸದಸ್ಯರ ಮತವನ್ನೂ ಚಲಾಯಿಸಬಹುದು. ಹಾಗಾಗಿ ತಾಂತ್ರಿಕವಾಗಿ ಬಿಜೆಪಿ ಜತೆಗೆ 14 ಸದಸ್ಯರ ಬಲವಿದ್ದಂತೆ. ಅಧಿಕಾರಕ್ಕೆ ಬರಲು 7 ಸದಸ್ಯರ ಬೆಂಬಲ ಬಿಜೆಪಿಗೆ ಬೇಕು. ಆದರೂ ಬಿಜೆಪಿ ಶತಾಯಗತಾಯ ಅಧಿಕಾರಕ್ಕೆ ಬರುವ ಪ್ರಯತ್ನ ನಡೆಸುತ್ತಿದ್ದು, ಅದಕ್ಕಾಗಿ ತಂತ್ರ ರೂಪಿಸುತ್ತಿದೆ.
ಬಿಜೆಪಿಗೆ ಕಾಂಗ್ರೆಸ್ ಅಥವಾ ಕೆಜೆಪಿ ಬೆಂಬಲ ದೊರೆಯುವುದು ಅಸಾಧ್ಯ. ಎರಡೂ ಪಕ್ಷಗಳು ಬಿಜೆಪಿಗೆ ತಮ್ಮ ಬೆಂಬಲ ಅಸಾಧ್ಯ ಎಂದು ಸ್ಪಷ್ಟಪಡಿಸಿವೆ. ಆದ್ದರಿಂದ ಬಹುಮತಕ್ಕೆ ಕೊರತೆ ಬೀಳುವ 7 ಸದಸ್ಯರ ಬೆಂಬಲ ಪಡೆಯಲು ಬಿಜೆಪಿ ಜೆಡಿಎಸ್ನತ್ತ ನೋಡುತ್ತಿದೆ. ಈ ಪಕ್ಷದ ಪ್ರಮುಖರನ್ನು ಸಂಪರ್ಕಿಸುತ್ತಿದೆ. ಆದರೆ ಜೆಡಿಎಸ್ ಇನ್ನೂ ಯಾವ ತೀರ್ಮಾನವನ್ನೂ ತೆಗೆದುಕೊಂಡಿಲ್ಲ.
ಬಿಜೆಪಿ ಗೊಂದಲ: ಸದ್ಯ ಬಿಜೆಪಿಯ ಸಂಸದರು, ಶಾಸಕರೂ ನಗರಸಭೆ ಸದಸ್ಯತ್ವ ಹೊಂದಿದ್ದಾರೆ. ಅವರಲ್ಲಿ ಕೆಜೆಪಿಯೊಂದಿಗೆ ಪರೋಕ್ಷವಾಗಿ ಗುರುತಿಸಿಕೊಂಡಿರುವ ಸಂಸದ ಬಿ.ವೈ. ರಾಘವೇಂದ್ರ ಬಿಜೆಪಿ ಬೆಂಬಲಿಸುವುದು ಮೇಲ್ನೋಟಕ್ಕೆ ಅಸಾಧ್ಯ. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಈ ಸ್ಥಾನದಲ್ಲಿದ್ದಂತೆ ನಗರಸಭೆಗೆ ಕರೆತರುವುದು ನೈತಿಕ ಪ್ರಶ್ನೆಗೆ ಎಡೆಮಾಡಿಕೊಡಬಹುದು. ಶಾಸಕರಾದ ಕೆ.ಎಸ್. ಈಶ್ವರಪ್ಪ, ಕೆ.ಜಿ. ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ವಿಧಾನಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಅವರ ಬೆಂಬಲ ಸದ್ಯಕ್ಕೆ ಗ್ಯಾರೆಂಟಿ.
ಆದರೆ ಇನ್ನೆರಡು ತಿಂಗಳಲ್ಲಿ ಈಶ್ವರಪ್ಪ ಹಾಗೂ ಕುಮಾರಸ್ವಾಮಿ ಅವರು ಚುನಾವಣೆ ಎದುರಿಸಲಿದ್ದು, ಇವರು ನಗರಸಭೆಗೆ ಪದನಿಮಿತ್ತ ಸದಸ್ಯರಾಗಿ ಇರುತ್ತಾರೆಯೇ, ಇಲ್ಲವೇ ಎಂಬುದು ಭವಿಷ್ಯಕ್ಕೆ ಬಿಟ್ಟ ವಿಷಯ.
ಜೆಡಿಎಸ್ ಗೊಂದಲ: ಬಿಜೆಪಿ ಅಧಿಕಾರಕ್ಕೆ ಬರಲು ಜೆಡಿಎಸ್ನ ಐವರು ಸದಸ್ಯರ ಬೆಂಬಲ ಮಾತ್ರ ಸಿಕ್ಕರೆ ಸಾಲದು, ಇಬ್ಬರು ಪಕ್ಷೇತರ ಹಾಗೂ ಎಸ್ಡಿಪಿಐ ಸದಸ್ಯರ ಬೆಂಬಲವೂ ಬೇಕು. ಆಗ ಮಾತ್ರ ಮ್ಯಾಜಿಕ್ ಸಂಖ್ಯೆ ತಲುಪಲು ಸಾಧ್ಯ.
ಆದರೆ ಜೆಡಿಎಸ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಾಜ್ಯದಲ್ಲಿ ಒಮ್ಮೆ ಬಿಜೆಪಿ ಜತೆ ಸಮ್ಮಿಶ್ರ ಸರ್ಕಾರ ರಚಿಸಿ ನಂತರ ಕೈಸುಟ್ಟುಕೊಂಡಿರುವ ಪಕ್ಷ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ.
ಪಕ್ಷೇತರರು ಮಾತ್ರ ಒಮ್ಮೊಮ್ಮೆ ಒಂದೊಂದು ಪಾಳೆಯದಲ್ಲಿ ಕಾಣಿಸಿಕೊಳ್ಳುತ್ತಾ, ಎಲ್ಲಿ ಉಳಿದರೆ ಹೆಚ್ಚು ಲಾಭ ಎಂಬ ಚಿಂತನೆಯಲ್ಲಿದ್ದಾರೆ. ಅವರನ್ನು ಹಿಡಿದಿಟ್ಟುಕೊಳ್ಳುವುದು ಯಾವ ಪಕ್ಷಕ್ಕೂ ತಲೆನೋವಿನ ಕೆಲಸವಾಗಲಿದೆ. ಆದರೆ, ಅವರೇ ನಿರ್ಣಾಯಕ ಎಂಬುದು ನಿರ್ವಿವಾದ.
ಬಿಜೆಪಿ ಮುಖಂಡರೊಬ್ಬರು, ಕೆಜೆಪಿಯನ್ನು ಅಧಿಕಾರದಿಂದ ದೂರವಿಡಬೇಕು ಎಂಬುದು ನಮ್ಮ ಗುರಿ. ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ ಎನ್ನುತ್ತಾರೆ. ಜೆಡಿಎಸ್ಗೆ ಕಾಂಗ್ರೆಸ್ ಅಧಿಕಾರ ನಡೆಸುವುದು ಇಷ್ಟವಿಲ್ಲ. ಶತ್ರುವಿನ ಶತ್ರು ಮಿತ್ರ ಎನ್ನುವಂತೆ ಬಿಜೆಪಿ-ಜೆಡಿಎಸ್ ಒಂದಾಗುವುದೇ ಎಂಬ ಕುತೂಹಲ ಮೂಡಿದೆ.
ಮತ್ತೊಂದು ಅಡ್ಡದಾರಿ
ಬಿಜೆಪಿ ಅಧಿಕಾರಕ್ಕೆ ಬರಲೇಬೇಕೆಂದರೆ ಇನ್ನೊಂದು ದಾರಿ ಇದೆ. ಸದ್ಯ ಇಡೀ ನಗರಸಭೆಯಲ್ಲಿ ಎಸ್ಟಿ ಮಹಿಳೆ ಮೀಸಲಾತಿಯಿಂದ ಆಯ್ಕೆಯಾದ ಏಕೈಕ ಅಭ್ಯರ್ಥಿ ಇರುವುದು ಬಿಜೆಪಿ ಪಕ್ಷದಲ್ಲಿ ಮಾತ್ರ. ಹಾಗಾಗಿ ಅಧ್ಯಕ್ಷ ಸ್ಥಾನದ ಮೀಸಲಾತಿ ಇದೇ ವರ್ಗಕ್ಕೆ ನಿಗದಿಯಾದರೆ ಬಿಜೆಪಿಗೆ ಅಧಿಕಾರ ಸಿಗುವುದು ಖಂಡಿತ. ಆದರೆ, ಬಿಜೆಪಿ ಸರ್ಕಾರ ತೀರ್ಮಾನ ಕೈಗೊಳ್ಳಲು ಧೈರ್ಯ ತೋರಬೇಕಾಗುತ್ತದೆ.