ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಲೋಕಾನುಭವ ನೀಡದ ಶಿಕ್ಷಣ ಸಂಸ್ಥೆಗಳು: ವಿಷಾದ

Lingaraj Badiger
Updated On : 16 Mar 2013, 10:41 am

ಕನ್ನಡಪ್ರಭ ವಾರ್ತೆ, ಶಿವಮೊಗ್ಗ
ಇಂದಿನ ಶಿಕ್ಷಣ ಕೇವಲ ಪುಸ್ತಕದ ಬದನೆಕಾಯಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಲೋಕಾನುಭವ ಶಿಕ್ಷಣ ನೀಡದಿರುವುದು ವಿಪರ್ಯಾಸ ಎಂದು ಜನಪದ ಕಲಾವಿದ ಯುಗಧರ್ಮ ರಾಮಣ್ಣ ಅಭಿಪ್ರಾಯಪಟ್ಟರು.
ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಹ್ಯಾದ್ರಿ ಸಿರಿ- 2013 ಹಾಗೂ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಅವರು, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಪುಸ್ತಕದ ವಿಷಯಗಳನಷ್ಟೇ ಬೋಧಿಸುತ್ತವೆ. ಇದ್ದರಿಂದ ವಿದ್ಯಾರ್ಥಿಗಳಿಗೆ ನಮ್ಮ ಕಲೆ, ಸಾಹಿತ್ಯ, ಆಚಾರ, ವಿಚಾರಗಳು ಹಾಗೂ ಜನಪದ ಕಲೆಗಳ ಪರಿಚಯವೇ ಇರುವುದಿಲ್ಲ ಎಂದರು.
ಶಿಕ್ಷಣವನ್ನು ಇಂದು ಒಂದು ಕಲೆಯ ಮೂಲಕ ವಿದ್ಯಾರ್ಥಿಗಳ ಮನದಲ್ಲಿ ತುಂಬಬೇಕು. ಗ್ರಂಥಗಳನ್ನು ಉರುಲು ಹೊಡಿಯುವುದರಿಂದ ಸಿಗುವುದು ಅಂಕಗಳಷ್ಟೇ. ಲೋಕಾನುಭವ ಶಿಕ್ಷಣ ಅಲ್ಲ ಎಂದ ಅವರು, ಇಂದಿನ ಸಿನಿಮಾಗಳು ಕತ್ತಲೆಯ ಗೊಂಬೆಗಳಾಗಿದ್ದು, ಸಿನಿಮಾಗಳ ಕಥೆ ಬರೆಯುವವರು ಮನಸು ಅರಳುವಂತೆ ಬರೆಯುವುದಕ್ಕಿಂತ ಕೆರಳುವಂತೆ ಬರೆಯುತ್ತಿದ್ದಾರೆ ಎಂದರು.
ವಿಶ್ವವಿದ್ಯಾನಿಲಯಗಳು ವಿಫಲ: ಪ್ರಪಂಚದಲ್ಲಿ ಮಾತನಾಡುವ ಕಲೆ ಇರುವುದು ಮಾನವನಿಗೆ ಮಾತ್ರ. ಆದರೆ, ಇಂದು ಆತನ ವರ್ತನೆ ಪ್ರಾಣಿಗಳಿಗಿಂತ ಕೀಳಾಗಿದ್ದು, ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಅಗತ್ಯವಾದ ಲೋಕನಾಭವ ಶಿಕ್ಷಣ ನೀಡುವಲ್ಲಿ ವಿಶ್ವವಿದ್ಯಾನಿಲಯಗಳು ವಿಫಲವಾಗುತ್ತಿರುವುದು ಬೇಸರ ತಂದಿದೆ ಎಂದರು.
ಜಾನಪದ ಕಲೆಗೆ ಶತಮಾನಗಳ ಇತಿಹಾಸವಿದೆ. ಹಳ್ಳಿಯ ಸಂಪ್ರದಾಯಗಳು ಹಾಗೂ ಅಲ್ಲಿನ ಜನರ ವೈಚಾರಿಕ ನೆಲೆಗಟ್ಟುಗಳು ಜಾನಪದ ಸೊಗಡನ್ನು ಹೆಚ್ಚಿಸುತ್ತವೆ. ಮಾತು ಮಾಣಿಕ್ಯ ಎಂದು ಹಳ್ಳಿ ಜನ ತಿಳಿದ್ದಾರೆ. ನುಡಿದಂತೆ ನಡೆಯುವ ಕಲೆಯನ್ನು ಹಿಂದಿನಿಂದಲೂ ಅಲ್ಲಿನವರು ರೂಢಿಸಿಕೊಂಡು ಬಂದಿದ್ದಾರೆ ಎಂದರು.
15 ಕಲೆಗಳಷ್ಟೇ ಉಳಿದಿವೆ: ಹಳ್ಳಿಗಳಲ್ಲಿ ಜಾನಪದರು ಈ ಎಲ್ಲಾ ವಿಚಾರಗಳನ್ನು ಬದಿಗಿಟ್ಟು ಮೊದಲು ಮಾನವನಾಗುವಂತೆ ಇಡೀ ಜಗತ್ತಿಗೆ ತಮ್ಮ ತ್ರಿಪದಿಗಳ ಮೂಲಕ ಸಾರಿದ್ದಾರೆ. ಜಾನಪದದಲ್ಲಿ 158 ಕಲೆಗಳಿದ್ದು, ಪ್ರಸ್ತುತ ಅವುಗಳಲ್ಲಿ ಕಂಸಾಳೆ, ಗೀಗಿಪದ, ಕುಂಬಾರಿಕೆ ಸೇರಿದಂತೆ ಕೇವಲ 15 ಕಲೆಗಳಷ್ಟೇ ಉಳಿದಿವೆ. ಅವುಗಳನ್ನು ಉಳಿಸುವ ಪ್ರಯತ್ನ ಮಾಡದಿದ್ದರೆ ಅವು ಕೂಡ ನಾಶವಾಗುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು ಪ್ರಾಂಶುಪಾಲ ಡಾ.ಎಚ್. ಜಯದೇವಪ್ಪ, ನಿವೃತ್ತ  ಪ್ರಾಂಶುಪಾರಾದ ಡಾ. ಗಾಯಿತ್ರಿ ದೇವಿ ಸಜ್ಜನ್, ವಿದ್ಯಾರ್ಥಿ ಸಾಂಸ್ಕೃತಿಕ ಸಂಘದ ಸಂಚಾಲಕ ಪ್ರೊ. ಜಿ.ಎಸ್. ಚಂದ್ರಮೌಳಿ, ವಿದ್ಯಾರ್ಥಿ ಕ್ಷೇಮಾಧಿಕಾರಿ ಪ್ರೊ. ಎಂ. ಹಾಲಮ್ಮ, ಸಂಗೀತಾ ಕಲಾವಿದ ಚಂದ್ರಣ್ಣ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement