ಅರಣ್ಯಭೂಮಿ ಸಾಗುವಳಿದಾರರ ಒಕ್ಕಲೆಬ್ಬಿಸುವುದಕ್ಕೆ ವಿರೋಧ
ಕ.ಪ್ರ.ವಾರ್ತೆ ಹೊಸನಗರ ಮಾ.16
ಬಗರಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿದಾರರ ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಮತ್ತು ಕೂಡಲೆ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ತಾಲೂಕು ಕೇಂದ್ರದಲ್ಲಿ ಅರಣ್ಯ ಭೂಮಿ ತೆರವು ವಿರೋಧಿ ಸಮಿತಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡ ರೈತ ಸಮೂಹ ತಲತಲಾಂತರದಿಂದ ಉಳುಮೆ ಮಾಡಿಕೊಂಡ ಜಮೀನಿನಿಂದ ರೈತರನ್ನು ಒಕ್ಕಲೆಬ್ಬಿಸದಂತೆ ಆಗ್ರಹಿಸಿದರು.
ರೈತರಿಗೆ ಮಾಹಿತಿ ನೀಡದೆ ಅರಣ್ಯ ಇಂಡೀಕರಣ ಮಾಡಲು ಹೊರಟಿರುವುದು ಸರಿಯಲ್ಲ. ಕನಿಷ್ಠ 5 ವರ್ಷ ಬೆಳೆ ಬೆಳೆದ ಭೂಮಿಯನ್ನು ಕಂದಾಯ ಭೂಮಿಯಾಗಿ ಪರಿವರ್ತಿಸುವುದು, ಎಲ್ಲಾ ಜಾತಿ ಜನಾಂಗದವರು ಸಾಗುವಳಿ ಮಾಡಿದ ಅರಣ್ಯ ಭೂಮಿಯನ್ನು ಪಾರಂಪರಿಕ ಅರಣ್ಯವಾಸಿಗಳೆಂದು ಗುರುತಿಸಿ ಹಕ್ಕುಪತ್ರ ನೀಡುವುದು, ಗ್ರಾಮವಾರು ನಿವೇಶನ ರಹಿತರಿಗೆ ನಿವೇಶನ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ರೈತರ ಆಕ್ರೋಶ: ತಾಲೂಕಿನಲ್ಲಿ 13 ಸಾವಿರಕ್ಕೂ ಹೆಚ್ಚು ಬಗರಹುಕುಂ ಅರ್ಜಿಗಳಿದ್ದರೂ ಕೇವಲ 350 ಹಕ್ಕುಪತ್ರಗಳನ್ನು ನೀಡಿ ಉಳಿದ ಅರ್ಜಿಗಳನ್ನು ತಿರಸ್ಕರಿಸುವುದು. 1978ಕ್ಕಿಂತ ಪೂರ್ವದಲ್ಲಿ ಅರಣ್ಯ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡಿರುವ ಹಕ್ಕುಪತ್ರ ನೀಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಮೀರಿ 2007ರ ಆದೇಶವನ್ನು ಮಾತ್ರ ಜಾರಿ ಮಾಡಲು ಹೊರಟಿರುವುದು, ಶರಾವತಿ ಜಲವಿದ್ಯುತ್ ಯೋಜನೆಯಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಹಂಚುವುದಕ್ಕಾಗಿ ಆದೇಶ ಮಾಡಿದ ಅರಣ್ಯ ಭೂಮಿಯನ್ನು ಈ ವರೆಗೆ ಕಂದಾಯ ಭೂಮಿಯನ್ನಾಗಿ ಪರಿವರ್ತಿತ ಮಾಡದಿರುವ ಬಗ್ಗೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯುತ್ ಉತ್ಪಾದನೆ ಭೂಮಿಕೊಟ್ಟ ರೈತರ ಕುಟುಂಬಗಳಿಗೆ ಉದ್ಯೋಗವಿಲ್ಲ, ಭೂಮಿಯಿಲ್ಲ, ಬೆಳಕು ಕೂಡ ಇಲ್ಲ. ಇದನ್ನು ಪರಿಗಣಿಸಿ ಮಲೆನಾಡ ರೈತರ ಹಿತರಕ್ಷಣೆಗೆ ಸರ್ಕಾರ ಧಾವಿಸಬೇಕು ಮತ್ತು ಅರಣ್ಯ ಹಕ್ಕು ಮಾನ್ಯತಾ ಕಾಯಿದೆಯಡಿ 75 ವರ್ಷಗಳ ದಾಖಲೆಯನ್ನು ಕೇಳಿರುವುದನ್ನು ಕೂಡಲೆ ಕೈಬಿಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ವಿವಿಧ ಪಕ್ಷಗಳ ಪ್ರಮುಖರು, ಸಂಘಟನೆಗಳ ಪ್ರತಿನಿಧಿಗಳು ತಾಲೂಕಿನ ಮೂಲೆ ಆಗಮಿಸಿದ್ದ ರೈತರು ಪಾಲ್ಗೊಂಡಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.