ಪ್ರಾಚೀನ ಶಿಲಾಶಾಸನ ಪತ್ತೆ
ಕ.ಪ್ರ. ವಾರ್ತೆ, ಸಾಗರ, ಮಾ.17
ತಾಲೂಕಿನ ಅರಳಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಕಾಡಿನಲ್ಲಿ ಅಪರೂಪದ ಶಿಲಾಶಾಸನ ಪತ್ತೆಯಾಗಿದೆ.
ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನದಿಂದ ಅನತಿ ದೂರದಲ್ಲಿ ಈ ಶಾಸನ ದೊರೆತಿದ್ದು ಸುಮಾರು 8 ಅಡಿ ಉದ್ದ 2.5 ಅಡಿ ಅಗಲವಿದೆ. ಈ ಶಾಸನ ದೊರೆತ ಸ್ಥಳದ ಸುತ್ತ ಪ್ರಾಚೀನ ಅರಮನೆ, ಕಂದಕ ಹಾಗೂ ಹಲವು ಪ್ರಾಚಿನ ಅವಶೇಷಗಳ ಕುರುಹು ದೊರೆತಿದ್ದು ಸ್ಥಳೀಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.
ಈ ಶಾಸನದ ಕೆಲ ಭಾಗ ಭೂಮಿಯಲ್ಲಿ ಹೂತಿದೆ. ಮೇಲ್ಭಾಗದಲ್ಲಿ ವಿವಿಧ ಚಿತ್ರಗಳನ್ನು ಕೆತ್ತಲಾಗಿದ್ದು, ಐದು ಅಂತಸ್ತಿನ ಚಿತ್ರಗಳಿವೆ. ಶಾಸನದಲ್ಲಿ ಶಾಲಿವಾಹನ ಶಕೆ 1477 ವೈಶಾಖ ಶುದ್ಧ ಮಂಗಳವಾರ 13 ಯು ಆನಂದನಾಮ ಸಂವತ್ಸರ ಎಂದು ಕೆತ್ತಲಾಗಿದೆ.
ವಿಜಯನಗರದ ಸಾಮಂತ ರಾಜರಾದ ಸಾಳ್ವ ಸಂತತಿಯವರು ಈ ಸ್ಥಳದಲ್ಲಿ ಆಡಳಿತ ನಡೆಸಿದ ಬಗ್ಗೆ ಪ್ರತೀತಿ ಇದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ವೆಂಕಟಗಿರಿ ಐತೂಮನೆ.
ಶಾಸನ ಐತಿಹಾಸಿಕವಾಗಿ ಹಲವು ಅಂಶಗಳನ್ನು ಒಳಗೊಂಡಿರುವ ಲಕ್ಷಣವಿದ್ದು ಶಾಸನ ತಜ್ಞರು ಪರಿಶೀಲಿಸಿದರೆ ಸಾಕಷ್ಟು ಅಂಶಗಳು ಬೆಳಕಿಗೆ ಬರಲಿದೆ.
--