ಪ್ರೊಸಸ್ ಸರ್ವರ್ ಸಮರ್ಥ ಕಾರ್ಯ ನಿರ್ವಹಿಸಲಿ
ಶಿವಮೊಗ್ಗ: ನ್ಯಾಯಾಂಗ ವ್ಯವಸ್ಥೆ ಚುರುಕುಗೊಳ್ಳಲು ಬೆಲೀಫ್ ಮತ್ತು ಪ್ರೊಸಸ್ ಸರ್ವರ್ಗಳು ಸಮರ್ಥವಾಗಿ ಕಾರ್ಯನಿರ್ವಹಿಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಹೇಳಿದರು.
ರಾಜ್ಯ ನ್ಯಾಯಾಂಗ ಇಲಾಖೆ ಟಿಲೀಫ್ ಮತ್ತು ಪ್ರೊಸಸ್ ಸರ್ವರ್ಗಳ ಕೇಂದ್ರ ಸಂಘ ಕೆಇಬಿ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಂಘದ ರಾಜ್ಯಮಟ್ಟದ 6ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪ್ರೊಸಸ್ ಸರ್ವರ್ಗಳು ರಾಜಕಾರಣಿಗಳು, ಶ್ರೀಮಂತರು, ಬಡವರು ಎಂದು ಪರಿಗಣಿಸಿ ವ್ಯವಹಾರ ಮಾಡಬಾರದು. ಮಕ್ಕಳು, ವಯೋವೃದ್ಧರು, ಮಹಿಳೆಯರು ಹೀಗೆ ಎಲ್ಲಾ ವರ್ಗದ ಜನರೊಂದಿಗೂ ಸೌಜನ್ಯದಿಂದ ವರ್ತಿಸಬೇಕು. ಆ ಮೂಲಕ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪ್ರತಿಯೊಬ್ಬರಲ್ಲೂ ಒಳ್ಳೆಯ ಮನೋಭಾವನೆ ಮೂಡುತ್ತದೆ ಎಂದರು.
ಪ್ರೊಸಸ್ ಸರ್ವರ್ಗಳಿಗೆ ಉತ್ತಮ ಕಾನೂನು, ಪ್ರಾದೇಶಿಕ ಭಾಷೆಗಳ ಅಗತ್ಯವಿದ್ದು, ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕಿದೆ. ವಸ್ತುನಿಷ್ಟವಾಗಿ, ಕಾನೂನುಬದ್ಧವಾಗಿ ತಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು. ನ್ಯಾಯಾಲಯದಿಂದ ಜಾರಿಯಾದ ನೋಟಿಸ್ಗಳನ್ನು ಸಂಬಂಧಪಟ್ಟವರಿಗೆ ನಿಗಧಿತ ಅವಧಿಯೊಳಗೆ ತಲುಪಿಸುವ ಹೊಣೆಗಾರಿಕೆ ಪ್ರೊಸಸ್ ಸರ್ವರ್ಗಳು ಮೇಲಿದೆ.
ಇವರು ಶೀಘ್ರವಾಗಿ ಹಾಗೂ ಸಮಯದ ಮಿತಿಯೊಳಗೆ ಕಾರ್ಯನಿರ್ವಹಿಸದಿದ್ದರೆ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆಯಾಗುವ ಸಂಭವ ಇದೆ ಎಂದರು.
ಪ್ರೊಸಸ್ ಸರ್ವರ್ಗಳು ಸೂಚಿತ ವ್ಯಕ್ತಿ, ಕಂಪನಿ, ಹಾಗೂ ಸಂಘ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದ ಬಳಿಕ ನ್ಯಾಯಾಲಯಕ್ಕೆ ನೀಡುವ ವರದಿ ನ್ಯಾಯದಾನ ಪ್ರಕ್ರಿಯೆ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದ್ದು, ಪ್ರೊಸಸ್ ಸರ್ವರ್ಗಳು ಸಿವಿಲ್ ನ್ಯಾಯಾಲಯದಿಂದ ಹೊರಡಿಸಿದ ನೋಟಿಸ್ಗಳನ್ನು ಸೂಚಿತ ಅವಧಿಯೊಳಗೆ ತಲಪಿಸಬೇಕು ಎಂದರು. ನ್ಯಾಯಾಧೀಶ ಶೆಟ್ಟರ್, ನ್ಯಾಯಾಂಗ ಇಲಾಖೆಯ ಬೆಲೀಫ್, ಪ್ರೊಸೆಸ್ ಸರ್ವರ್ಗಳ ಸಂಘದ ರಾಜ್ಯಾಧ್ಯಕ್ಷ ಎನ್. ಶಿವಣ್ಣ, ಜಿಲ್ಲಾಧ್ಯಕ್ಷ ಕೆ. ಮುರಳೀಧರ್ ಇದ್ದರು.