ನಿವೇಶನ ಹಂಚಿಕೆಗೆ ಹೆಚ್ಚುವರಿ ಭೂಮಿ ವಶ
ಕ.ಪ್ರ.ವಾರ್ತೆ, ಶಿವಮೊಗ್ಗ, ಮಾ.18: ನಗರದ ಬಡ ಜನರಿಗೆ ನಿವೇಶನ ಹಂಚಿಕೆ ಮಾಡುವ ಪ್ರಸ್ತುತ ಯೋಜಿತ ಕಾರ್ಯಕ್ರಮದ ಹೊರತಾಗಿ ಇನ್ನೂ ಹೆಚ್ಚುವರಿ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುವುದಾಗಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸೋಮವಾರ ಸ್ವಾಮಿ ವಿವೇಕಾನಂದ ಬಡಾವಣೆಯ ಇ-ಬ್ಲಾಕ್ನ ವಾಣಿಜ್ಯ ನಿವೇಶನದ ಆವರಣದಲ್ಲಿ ಆಯೋಜಿಸಲಾಗಿದ್ದ ವಾಣಿಜ್ಯ ಸಂಕೀರ್ಣದ 2ನೇ ಅಂತಸ್ತಿನ ಕಟ್ಟಡ ಹಾಗೂ ಸಮುದಾಯ ಭವನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಿವೇಶನ ಹಂಚಿಕೆ: ಈಗಾಗಲೇ ನಗರದ ಎಲ್ಲಾ ಬಡವರಿಗೆ ಹಾಗೂ ಕಾರ್ಮಿಕರಿಗೆ ಸುಮಾರು 10 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಯೋಜನೆ ಪ್ರಗತಿಯಲ್ಲಿದೆ. ಇದಲ್ಲದೆ, ಇನ್ನೂ ಹೆಚ್ಚುವರಿಯಾಗಿ ನಿವೇಶನಗಳನ್ನು ಹಂಚಿಕೆ ಮಾಡಲು ನಗರದ ಹೊರಭಾಗದಲ್ಲಿ ಭೂಮಿ ವಶಪಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಆಶ್ರಯ ಯೋಜನೆಯಡಿ 150 ಎಕರೆ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ಭೂಮಿ ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ 80 ಎಕರೆ ಭೂಮಿಯಲ್ಲಿ ನಗರದ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಹಕಾರ ಸಂಘದ ಮೂಲಕ ನಿವೇಶನ ನೀಡಲಾಗುವುದು. ಅಲ್ಲದೆ, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೆರವಿನಲ್ಲಿ ಅವರಿಗೆ ಮನೆಗಳನ್ನೂ ನಿರ್ಮಿಸಿಕೊಡುವ ಯೋಜನೆ ಪ್ರಗತಿಯಲ್ಲಿದೆ ಎಂದು ಹೇಳಿದರು.
ಕಲ್ಯಾಣ ಮಂಟಪಗಳು ಲಭ್ಯವಿಲ್ಲದೆ ಮದುವೆ ಸಮಾರಂಭ ಹಮ್ಮಿಕೊಳ್ಳುವ ಸಾರ್ವಜನಿಕರಿಗೆ ಆಗುತ್ತಿದ್ದ ಸಮಸ್ಯೆ ತಪ್ಪಿಸುವ ದೃಷ್ಟಿಯಿಂದ ಪ್ರಸ್ತುತ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ಸಮುದಾಯ ಭವನ ನಿರ್ಮಿಸಲಾಗುತ್ತಿದ್ದು, ಇದೊಂದು ಉತ್ತಮ ಬೆಳವಣಿಗೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ದತ್ತಾತ್ರಿ, ಸದಸ್ಯ ಎಂ.ಎಚ್. ಶ್ರೀಶ್, ವ್ಯೆಂಕ್ಯಾನಾಯ್ಕ, ಗಾಯತ್ರಿ, ಎಪಿಎಂಸಿ ಅಧ್ಯಕ್ಷ ಮಹೇಂದ್ರನಾಥ್, ಆಯುಕ್ತ ಬಿ.ಎನ್. ಗಿರೀಶ್ ಮೊದಲಾದವರು ಉಪಸ್ಥಿತರಿದ್ದರು.