ಬಿಜೆಪಿ ಈಗ ಶುದ್ಧವಾಗಿದೆ: ಈಶ್ವರಪ್ಪ
ಶಿವಮೊಗ್ಗ: ಬಿಜೆಪಿ ಈಗ ಶುದ್ಧವಾಗಿದೆ. ಭ್ರಷ್ಟರು, ದುಷ್ಟರು ಪಕ್ಷ ಬಿಟ್ಟು ಹೋಗಿದ್ದಾರೆ. ಇದೀಗ ಪಕ್ಷ ಸ್ವಚ್ಛ, ನಿಷ್ಠಾವಂತ ಕಾರ್ಯಕರ್ತರಿಂದ ಕೂಡಿದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ಪರೋಕ್ಷವಾಗಿ ಬಿ.ಎಸ್. ಯಡಿಯೂರಪ್ಪ ಪಡೆ ವಿರುದ್ಧ ದಾಳಿ ಮಾಡಿದ್ದಾರೆ.
ಸೋಮವಾರ ಜಿಲ್ಲಾ ಬಿಜೆಪಿ ಚುನಾವಣಾ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ನಂತರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಭ್ರಷ್ಟಚಾರ ಮಾಡಿದವರು, ಜೈಲಿಗೆ ಹೋದವರು, ಸಿಬಿಐ ತನಿಖೆಗೆ ಒಳಪಟ್ಟವರು ಪಕ್ಷದಲ್ಲಿ ಯಾರು ಇಲ್ಲ. ಇಲ್ಲಿ ನಿಷ್ಠಾವಂತರಿಗೆ ಮಾತ್ರ ಅವಕಾಶ ಎಂದರು.
ಜನರೇ ಪಾಠ ಕಲಿಸುತ್ತಾರೆ: ಪಕ್ಷದಿಂದ ಹೊರಹೋಗಿರುವ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಪಕ್ಷಕ್ಕೆ ವಾಪಸ್ ಕರೆತರುವ ಪ್ರಶ್ನೆಯೇ ಇಲ್ಲ ಎಂದ ಅವರು, ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಪಕ್ಷಕ್ಕಾಗಿ ದುಡಿಯುವ ಹೊಸ ಕಾರ್ಯಕರ್ತರನ್ನು ಆಯ್ಕೆಮಾಡಿ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲಾಗುವುದು. ಪಕ್ಷಕ್ಕೆ ದ್ರೋಹ ಮಾಡಿ ಹೋದವರಿಗೆ ಜನರೇ ಪಾಠ ಕಲಿಸುತ್ತಾರೆ ಎಂದರು.
ಕಲುಷಿತ ನೀರು ಹೊರಹೋಗಿದೆ: ಸೊರಬ ಶಾಸಕ ಹರತಾಳು ಹಾಲಪ್ಪ ಪಕ್ಷ ಬಿಟ್ಟು ಹೋದರು. ಅವರೊಂದಿಗೆ ಮತಷ್ಟು ಜನ ಪಕ್ಷ ತೊರೆದರು. ಆಗಲೂ ನಾವು ತಲೆಕೆಡಿಸಿಕೊಂಡಿಲ್ಲ. ಗೋಪಾಲಕೃಷ್ಣ ಹೋದರು, ಈಗಲೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದರು.
ಪಕ್ಷದಲ್ಲಿದ್ದ ಕಲುಷಿತ ನೀರು ಹೊರಹೋಗಿದೆ, ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ. ಮತ್ತೆ ಹೊಸ ನೀರು ಹರಿಯಲೇ ಬೇಕು.
ಪಕ್ಷಕ್ಕಾಗಿ ದುಡಿಯುವ ನಿಜವಾದ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಕೊರತೆಯಿಲ್ಲ ಎಂದ ಅವರು, ನಾನೇ ಶ್ರೇಷ್ಠ, ನಾನೇ ಪಕ್ಷ ಕಟ್ಟಿ ಬೆಳೆಸಿದ್ದು, ನನ್ನಿಂದಲೇ ಎಲ್ಲಾ ನಡೆಯಿತು ಎಂದು ಹೇಳುತ್ತಿದ್ದವರ ಹಣೆ ಬರಹ ನಗರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಗೊತ್ತಾಗಿದೆ ಎಂದು ಕೆಜೆಪಿ ಪಕ್ಷದ ಸಂಸ್ಥಾಪಕ ಬಿ.ಎಸ್. ಯಡಿಯೂರಪ್ಪ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಕುಟುಕಿದರು.
ಸರ್ವಾಧಿಕಾರಿ: ಬಿಜೆಪಿಯನ್ನು ಛಿದ್ರ ಮಾಡಿ ಸರ್ವಾಧಿಕಾರಿಯಂತೆ ನಡೆದುಕೊಳ್ಳುವ ವ್ಯಕ್ತಿಗೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತನ್ನ ಶಕ್ತಿ ಎಷ್ಟೆಂಬುದು ಅರಿವಾಗಿದೆ.
ಅವರ ಸ್ವಕ್ಷೇತ್ರ ಶಿರಾಳಕೊಪ್ಪದಲ್ಲಿಯೇ ಮತದಾರರ ಅವರಿಗೆ ಪಾಠ ಕಲಿಸಿದ್ದಾನೆ ಎಂದ ಅವರು, ಭ್ರಷ್ಟರಿಗೆ, ಜಾತಿವಾದಿಗಳಿಗೆ ಮುಂದಿನ ಚುನಾವಣೆಯಲ್ಲಿ ಅವಕಾಶ ನೀಡದಂತೆ ಕ್ರಮಕೈಗೊಳ್ಳಿ ಎಂದು ಕಾರ್ಯಕರ್ತರಿಗೆ ತಿಳಿಸಿದರು. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕೆಜೆಪಿಗೆ ಮತ ನೀಡಿದ ಮತದಾರ, ಏತಕ್ಕಾಗಿ ಕೆಜೆಪಿಗೆ ಮತ ಹಾಕಿದೆನಪ್ಪ ಎಂದು ಪರಿತಪಿಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಮತದಾರರು ಈ ರೀತಿಯ ತಪ್ಪು ಮಾಡಬಾರದು ಎಂದರು.
ಹೋರಾಟಗಾರ, ಉತ್ತಮ ರಾಜಕಾರಣಿ ಶಾಂತವೇರಿ ಗೋಪಾಲಗೌಡರಂತಹ ಶ್ರೇಷ್ಠ ವ್ಯಕ್ತಿಗಳು ಸೇವೆ ಸಲ್ಲಿಸಿದ ತೀರ್ಥಹಳ್ಳಿಯಲ್ಲಿ ಮತದಾರರಿಗೆ ಕುಕ್ಕರ್ ಕೊಟ್ಟು ಚುನಾವಣೆಯಲ್ಲಿ ಗೆಲ್ಲುತ್ತಾರೆ.
ಇಂತಹ ರಾಜಕೀಯ ಮಾಡುವುದರಿಂದ ಗೋಪಾಲಗೌಡರ ಆತ್ಮಕ್ಕೆ ಶಾಂತಿ ದೊರೆಯುತ್ತದೆಯೇ ಎಂದು ಪ್ರಶ್ನಿಸಿದರು.
ಪಕ್ಷದ ಚುನಾವಣಾ ಕಾರ್ಯಾಲಯ ಕಟ್ಟಡ ನಿರ್ಮಾಣಕ್ಕೆ ದೇಣಿಗೆ ನೀಡಿದ ಎಲ್ಲರನ್ನೂ ಡಿಸಿಎಂ ಈಶ್ವರಪ್ಪ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಎಪಿಎಂಸಿ ಅಧ್ಯಕ್ಷ ಮಹೇಂದ್ರನಾಥ್, ಸೂಡಾ ಅಧ್ಯಕ್ಷ ಎಸ್. ದತ್ತಾತ್ರಿ, ಎಂಪಿಎಂ ಅಧ್ಯಕ್ಷ ಆರಗ ಜ್ಞಾನೇಂದ್ರ, ನಗರಾಧ್ಯಕ್ಷ ನಟರಾಜ್, ಜ್ಞಾನೇಶ್ವರ್ ಇದ್ದರು.