ಸಕಾಲಿಕ ಚಟುವಟಿಕೆಗಳತ್ತ ಹೆಣ್ಣು ಗಮನ ಹರಿಸಲಿ
ಕ.ಪ್ರ ವಾರ್ತೆ, ಸೊರಬ, ಮಾ.18
ನಾಲ್ಕು ಗೋಡೆಯ ಮಧ್ಯೆ ಕುಳಿತು ಕಾಲಹರಣ ಮಾಡುವ ಬದಲು, ಪ್ರಪಂಚದ ಸಕಾಲಿಕ ಚಟುವಟಿಕೆಗಳತ್ತ ಮುಖ ಮಾಡಿದರೆ, ಬಹುಶಃ ಹೆಣ್ಣು ದೇಶದ ಉನ್ನತಿಗೆ ಬಹುದೊಡ್ಡ ಕೊಡುಗೆಯಾಗುತ್ತಾಳೆ ಎಂದು ಉಳವಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ತಿಳಿಸಿದರು.
ತಾಲೂಕು ಉಳವಿ ಗ್ರಾಮದ ಅಂಗನವಾಡಿ ಕೇಂದ್ರದ ಎದುರು ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಹಾಗೂ ಸ್ತ್ರೀಶಕ್ತಿ ಸಂಘಗಳ ವತಿಯಿಂದ ನಡೆದ ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೃಷ್ಟಿಕೋನ ವಿಕೃತ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಪಂ ಸದಸ್ಯ ಹುನವಳ್ಳಿ ಗಂಗಾಧರಪ್ಪ ಮಾತನಾಡಿ, ಹೆಣ್ಣಿನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎನ್ನುವಲ್ಲಿ ಗಂಡು ಆಕೆಯನ್ನು ನೋಡುವ ದೃಷ್ಟಿಕೋನ ವಿಕೃತವಾಗಿರುತ್ತದೆ. ಇಂತಹ ಕೃತ್ಯಕ್ಕೆ ಕಾರಣ ಏನೆಂಬುದರ ಬಗ್ಗೆ ಚಿಂತನೆ ನಡೆಸಬೇಕು. ಈ ನಿಟ್ಟಿನಲ್ಲಿ ಉಡುಗೆ ತೊಡುಗೆಗಳ ಕುರಿತು ತುಸು ಎಚ್ಚರವಹಿಸಬೇಕು ಎಂದರು.
ಮಹಿಳೆ ದೌರ್ಜನ್ಯ ತಡೆಗಟ್ಟುವಿಕೆ, ಮಹಿಳೆಯ ಸರ್ವತೋಮುಖ ಬೆಳವಣಿಗೆಗೆ ಸಮಾಜ ಅನುಸರಿಸ ಬೇಕಾದ ನೀತಿ, ಸಂಕಷ್ಟಗಳಿಗೆ ಕಾನೂನಿಗಿಂತ ಸಾಂತ್ವನ ಹೇಗೆ ಬಲ ನೀಡುತ್ತದೆ ಎಂಬುದರ ಕುರಿತು ಸಾಂತ್ವನ ಕೇಂದ್ರದ ವಕೀಲ ಪ್ರಶಾಂತ ಹೆಚ್.ಎಂ. ವಿಶೇಷ ಉಪನ್ಯಾಸ ನೀಡಿದರು.
ದಿನಾಚರಣೆ ಅಂಗವಾಗಿ ತಾಲೂಕು ಅಬ್ಕಾರಿ ಪಿಎಸ್‌ಐ ಮಮತಾ ಅವರನ್ನು ಸಮ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಪ್ರಾಮಾಣಿಕ ಪ್ರಯತ್ನದ ಯಶಸ್ಸಿಗೆ ಸ್ವಂತ ನಿರ್ಧಾರವಿರಬೇಕು ಎಂದರು.
ಸಿಡಿಪಿಒ ಜೋಯಪ್ಪ, ಎಪಿಎಂಸಿ ಅಧ್ಯಕ್ಷ ಗಜಾನನರಾವ್, ತಾಪಂ ಸದಸ್ಯ ಬರಗಿ ನಿಂಗಪ್ಪ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸಾವಿತ್ರಮ್ಮ, ಕಪ್ಪಗಳಲೆ ರೇಣುಕಮ್ಮ, ಶಕುಂತಲ, ಮೇಲ್ವಿಚಾರಕಿ ನೇತ್ರಾವತಿ ಹುನವಳ್ಳಿ, ವರುಣಾಕ್ಷಿ, ಕೈಸೋಡಿ ನಾಗರಾಜ್, ಭೈರಪ್ಪ ಮೊದಲಾದವರು ಇದ್ದರು.