ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಹಭಾಗಿತ್ವವಿದ್ದರೆ ಪ್ರಗತಿ ಸಾಧ್ಯ'

Lingaraj Badiger
Updated On : 19 Mar 2013, 10:37 am

ಕ.ಪ್ರ ವಾರ್ತೆ, ಸಾಗರ, ಮಾ.18
ಸಮುದಾಯದ ಸಹಭಾಗಿತ್ವವಿದ್ದರೆ ಶಿಕ್ಷಣ ಕ್ಷೇತ್ರದಲ್ಲಿ ಒಂದಿಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು.
ತಾಲೂಕಿನ ಆನಂದಪುರಂ ಮುರುಘಾ ಮಠದಲ್ಲಿ ಶಿವಮೊಗ್ಗ ಮಹಾತ್ಮಾಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಪರಿವರ್ತನಾ ಟ್ರಸ್ಟ್, ಎಸ್.ಜೆ.ಜಿ. ಶಿಕ್ಷಣ ಮಹಾವಿದ್ಯಾಲಯ ಹಾಗೂ ಎಸ್.ಜೆ.ಜಿ. ಶಿಕ್ಷಕ ತರಬೇತಿ ಸಂಸ್ಥೆ ಏರ್ಪಡಿಸಿದ್ದ ಗುಣಾತ್ಮಕ ಶಿಕ್ಷಣದಲ್ಲಿ ಸಮುದಾಯದ ಸಹಭಾಗಿತ್ವ ಕುರಿತ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆ. ಸಮುದಾಯವನ್ನು ಜಾಗೃತಿಗೊಳಿಸುವ ಇಂತಹ ಕಾರ್ಯಾಗಾರಗಳಲ್ಲಿ ಪೋಷಕರು ಹೆಚ್ಚು ಪಾಲ್ಗೊಳ್ಳಬೇಕು ಎಂದರು.
ಡೊನೇಷನ್ ವಿರುದ್ಧ ಧ್ವನಿ ಎತ್ತಿ: ಖಾಸಗಿ ಶಾಲೆಗಳಲ್ಲಿ ಡೊನೇಶನ್ ಹಾವಳಿ ಮಿತಿಮೀರುತ್ತಿದ್ದು, ಪೋಷಕರು ಹೈರಾಣಾಗಿದ್ದಾರೆ. ಬಡಮಕ್ಕಳು ಖಾಸಗಿ ಶಾಲೆಯಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಗದ ಸ್ಥಿತಿ ಇದೆ. ಸರ್ಕಾರ ಡೊನೇಶನ್ ಹಾವಳಿ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಗಂಭೀರ ಪ್ರಯತ್ನ ನಡೆಸಬೇಕು. ಪೋಷಕರು ಹೆಚ್ಚಿನ ಡೊನೇಶನ್ ವಿರುದ್ಧ ಧ್ವನಿ ಎತ್ತಬೇಕು ಎಂದು ಹೇಳಿದರು.
ಆಚಾಪುರ ಗ್ರಾ.ಪಂ. ಅಧ್ಯಕ್ಷ ಸಹರಾ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಆನಂದಪುರಂ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮ ಎ., ಜಿಪಂ ಸದಸ್ಯ ಕಲಗೋಡು ರತ್ನಾಕರ್, ಶಾಂತಮ್ಮ, ಕರುಣಾಕರ ಎನ್.ಎನ್., ಬಿ.ಎಸ್.ತಿಮ್ಮೋಲಿ, ಎ.ಎಸ್.ಹನುಮಾನ್, ರೇಖಾ, ಕೆರಿಯಮ್ಮ ಹಾಜರಿದ್ದರು.

ರೇಷ್ಮೆ ಉತ್ಪನ್ನಗಳ ಮಾರಾಟ ಮೇಳ
ಶಿವಮೊಗ್ಗ: ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತವು ಯುಗಾದಿ ಹಬ್ಬದ ಅಂಗವಾಗಿ ಮಾ.24ರಿಂದ 28ರವರೆಗೆ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ಮೈಸೂರು ರೇಷ್ಮೆ ಉತ್ಪನ್ನಗಳ ಪ್ರದರ್ಶನ ಮತ್ತು  ಮಾರಾಟ ಮೇಳ ಏರ್ಪಡಿಸಿದೆ.
ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮೈಸೂರು ರೇಷ್ಮೆಯ ವಿವಿಧ ಉತ್ಪನ್ನಗಳನ್ನು ಆಕರ್ಷಕ ದರದಲ್ಲಿ ಮಾರಾಟ ಮಾಡಲಾಗುವುದು. ಅಲ್ಲದೆ ಸರ್ಕಾರಿ ನೌಕರರಿಗೆ ಕಂತಿನಲ್ಲಿ ಹಣ ಪಾವತಿಸಲು ಅನುಕೂಲವಾಗುವಂತೆ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಮೈಸೂರು ರೇಷ್ಮೆ ಉದ್ಯಮಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಅಮಿತಪ್ರಸಾದ್ ತಿಳಿಸಿದ್ದಾರೆ.
ಈ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನಾ ಸಮಾರಂಭ ಮಾ.24ರಂದು ಬೆಳಿಗ್ಗೆ 11 ಗಂಟೆಗೆ   ನಡೆಯಲಿದೆ.
ಪ್ರಾಧಿಕಾರದ ಸಭೆ ಮುಂದೂಡಿಕೆ
ಶಿವಮೊಗ್ಗ: ಸಾರಿಗೆ ಇಲಾಖೆಯು ಮಾ.20ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ ವಿಪುಲ್ ಬನ್ಸಲ್ ಅವರ ಅಧ್ಯಕ್ಷತೆಯಲ್ಲಿ  ನಡೆಸಲು ಉದ್ದೇಶಿಸಿದ್ದ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯನ್ನು ಕಾರಣಾಂತರಗಳಿಂದ ಮುಂದೂಡಲಾಗಿದೆ. ಸಭೆಯು ಮಾ.21ರಂದು ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಪ್ರಾದೇಶಿಕ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement