ಅಕ್ರಮ ಪಂಪ್‌ಸೆಟ್: 2 ದಿನದಲ್ಲಿ ಕಾರ್ಯಾಚರಣೆ
ಕ.ಪ್ರ.ವಾರ್ತೆ ಶಿವಮೊಗ್ಗ ಮಾ. 19
ಅಕ್ರಮ ನೀರಾವರಿ ಪಂಪ್‌ಸೆಟ್‌ಗಳನ್ನು ತೆರವು ಮಾಡಲು ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ನಿರ್ಧರಿಸಿದ್ದು, ಇನ್ನೆರಡು ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಿದೆ.
ಪ್ರಾಧಿಕಾರದ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಈ ಹಿನ್ನಲೆಯಲ್ಲಿ ಪ್ರತಿ ಜಿಲ್ಲೆಯಲ್ಲಿ 6 ತಂಡಗಳನ್ನು ರಚಿಸಲಾಗಿದೆ. ತಂಡದಲ್ಲಿ ಮೆಸ್ಕಾಂ- ಬೆಸ್ಕಾಂ ಅಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳು ಇರುತ್ತಾರೆ. ಪೊಲೀಸ್ ಇಲಾಖೆ ಸಹಕಾರವನ್ನೂ ಪಡೆಯಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಪಟೇಲ್ ಹೇಳಿದ್ದಾರೆ.
ಅಕ್ರಮ ಪಂಪ್‌ಸೆಟ್ ತೆರವು: ಭದ್ರಾ ಜಲಾಶಯದ ವ್ಯಾಪ್ತಿಯಲ್ಲಿ 2,744 ಅಕ್ರಮ ಪಂಪ್‌ಸೆಟ್‌ಗಳನ್ನು ಗುರುತಿಸಲಾಗಿದೆ. ನಾಲೆಗೆ ಪೈಪ್ ಅಳವಡಿಸಿ, ಪ್ರಾಧಿಕಾರದಿಂದ ನೋಟಿಫಿಕೇಶನ್ ಆಗದ ಜಾಗಕ್ಕೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ಉದ್ದಿಮೆ ನಡೆಸುವುದಕ್ಕೂ ಬಳಸಲಾಗುತ್ತಿದೆ. ಈ ಪಂಪ್‌ಸೆಟ್‌ಗಳಿಂದ ಪ್ರತಿದಿನ 400-500 ಕ್ಯೂಸೆಕ್ಸ್ ನೀರು ಹರಿದುಹೋಗುತ್ತಿದೆ. ಈ ಹಿನ್ನಲೆಯಲ್ಲಿ ಅಕ್ರಮ ಪಂಪ್‌ಸೆಟ್‌ಗಳ ತೆರವಿಗೆ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಕಾಡಾ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ ವ್ಯಾಪ್ತಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳ ಸಭೆಯನ್ನು ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.
ಈ ಬಾರಿ ಮೊಕದ್ದಮೆ ದಾಖಲು: ಅಕ್ರಮ ಪಂಪ್‌ಸೆಟ್‌ಗಳ ಸ್ಥಾಪನೆಗೆ ಕಾರಣಗಳನ್ನೂ ಪಟ್ಟಿ ಮಾಡಿರುವ ಅವರು, ನೀರಾವರಿ ಇಲಾಖೆ ಅಧಿಕಾರಿಗಳ ಕರ್ತವ್ಯಲೋಪ, ಅಕ್ರಮ ವಿದ್ಯುತ್ ಶಕ್ತಿ ಬಳಕೆ, ಜನಪ್ರತಿನಿಧಿಗಳ ಹಸ್ತಕ್ಷೇಪ, ರೈತರ ಪ್ರತಿರೋಧದಿಂದ ಇವುಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದನ್ನು ತಡೆಯದೇ ಹೋದರೆ ರೈತರಿಗೆ ಭರವಸೆ ನೀಡಿದಂತೆ ನೀರು ಹರಿಸುವುದು ಸಾಧ್ಯವಿಲ್ಲ ಎಂದರು.
ಕಾಡಾ ಆಡಳಿತಾಧಿಕಾರಿ ಅಣ್ಣಯ್ಯ, ಹಿಂದೊಮ್ಮೆ ಅಕ್ರಮ ಪಂಪ್‌ಸೆಟ್‌ಗಳ ತೆರವು ಕಾರ್ಯಾಚರಣೆ ಮಾಡಲಾಗಿತ್ತು. ಆದರೆ, ವಿದ್ಯುತ್ ಸಂಪರ್ಕ ಕಡಿತ ಹಾಗೂ ಪಂಪ್‌ಸೆಟ್ ಜಪ್ತಿ ಮಾಡುವುದಕ್ಕಷ್ಟೇ ಸೀಮಿತವಾಗಿತ್ತು. ಈ ಬಾರಿ ಮೊಕದ್ದಮೆ ದಾಖಲಿಸಲಾಗುವುದು ಎಂದರು.
ಮಾಲಿನ್ಯ ತಡೆಗೆ ಕ್ರಮ: ನಗರ ಪ್ರದೇಶದಲ್ಲಿ ಸಾಗುವ ನದಿಗೆ ಹಾಗೂ ಜಲಾಶಯದ ನಾಲೆಗೆ ಕಲ್ಮಶ ಸೇರುತ್ತಿದೆ. ವಿವೇಚನಾರಹಿತವಾಗಿ ಕಲ್ಮಶ ಬಿಡುತ್ತಿರುವುದರಿಂದ ನೀರು ಕಲುಷಿತವಾಗುತ್ತಿದೆ. ಭದ್ರಾವತಿ, ಹರಿಹರ ಕಾರ್ಖಾನೆಗಳ ಗಲೀಜು, ಹೊನ್ನಾಳಿ- ಶಿವಮೊಗ್ಗ ಸೇರಿದಂತೆ ಹಲವು ಪಟ್ಟಣದ ಮನೆಗಳ ಕೊಳಚೆ ನೀರು ನೇರವಾಗಿ ಬಿಡಲಾಗುತ್ತಿದೆ ಎಂದು ಗಿರೀಶ್ ಪಟೇಲ್ ಹೇಳಿದ್ದು, ಇದನ್ನು ನಿಯಂತ್ರಿಸುವ ಬಗ್ಗೆ ಪರಿಸರ ಮಾಲಿನ್ಯ ಇಲಾಖೆ ಜತೆ ಸೇರಿ ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ಜಲಚರಗಳ ಜೀವಕ್ಕೆ ಧಕ್ಕೆ: ದಾವಣಗೆರೆ ಪಾಲಿಕೆ ವ್ಯಾಪ್ತಿಯ ಹಲವೆಡೆ ಮಲಿನ ನೀರು ದಾವಣಗೆರೆ ಹಾಗೂ ಹರಿಹರ ಉಪಕಾಲುವೆಗೆ ಸೇರ್ಪಡೆಯಾಗುತ್ತಿದೆ. ಇದರಿಂದ ಜಲಚರಗಳ ಜೀವಕ್ಕೆ ಧಕ್ಕೆಯಾಗುತ್ತಿದೆ ಎಂದರು.
ಘನತ್ಯಾಜ್ಯ ಹಾಗೂ ಮಲಿನ ನೀರು ನಿರ್ವಹಣೆ ಮಾಡುವುದು ಆಯಾ ನಗರಸಭೆಗಳ ಆದ್ಯ ಕರ್ತವ್ಯವಾಗಿದೆ. ಹಾಗಾಗಿ ಈ ದಿಕ್ಕಿನಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದರು.