ಏ.30ರವರೆಗೆ ಮಾತ್ರ ನೀರು
ಶಿವಮೊಗ್ಗ: ಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ಮೇ ಅಂತ್ಯದ ವರೆಗೆ ಒಟ್ಟು 95 ದಿನ ನೀರು ಹರಿಸುವುದಾಗಿ ಅಚ್ಚುಕಟ್ಟು ಪ್ರಾಧಿಕಾರವು ಭರವಸೆ ನೀಡಿತ್ತು. ಆದರೆ ಈಗ ಉಳಿದಿರುವ ನೀರು ಏ.30ರ ವರೆಗೆ ಮಾತ್ರ ಹರಿಯಬಹುದು.
ರೈತರಿಗೆ ಸಂಕಷ್ಟ: ಕುಡಿಯುವ ನೀರು ಕಾಯ್ದಿರಿಸಿದ ನಂತರ ಏ.18ರಂದು ಭದ್ರಾ ಜಲಾಶಯದಲ್ಲಿ ಕೃಷಿಗೆ ಲಭ್ಯವಿರುವ ನೀರಿನ ಪ್ರಮಾಣ 13.665 ಟಿಎಂಸಿ ಮಾತ್ರ. ಕಳೆದ ವರ್ಷ ಇದೇ ದಿನ 26 ಟಿಎಂಸಿ ನೀರು ಇತ್ತು. ಹಾಗಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ನೀರಿನ ಕೊರತೆ ಮುನ್ಸೂಚನೆ ಅರಿವಿದ್ದ ನೀರಾವರಿ ಸಲಹಾ ಸಮಿತಿ ಈ ಬಾರಿ ಅರೆ ನೀರಾವರಿ ಬೆಳೆಯನ್ನು ಮಾತ್ರ ಬೆಳೆಯುವಂತೆ ರೈತರಿಗೆ ಸಲಹೆ ನೀಡಿತ್ತು. ಇದನ್ನು ಮೀರಿ ಕೆಲವೆಡೆ ಬತ್ತ ಬೆಳೆಯಲಾಗಿದೆ. ಏ.30ರ ವೇಳೆಗೆ ಸರಿಯಾಗಿ ಇಲ್ಲಿ ಬತ್ತ ಹಾಲುಗಟ್ಟುತ್ತಿರುತ್ತದೆ. ಆದರೆ ನೀರು ಸಿಗುವುದು ಅನುಮಾನ. ಇಂತಹ ಸ್ಥಳದಲ್ಲಿ ರೈತರು ಭಾರಿ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ.
ಸದ್ಯವೇ ಸಭೆ: ನೀರಿನ ಕೊರತೆಯನ್ನು ಮನಗಂಡು ಸದ್ಯವೇ ನೀರಾವರಿ ಸಲಹಾ ಸಮಿತಿ ಸಭೆಯನ್ನು ಸದ್ಯವೇ ಕರೆಯಲಾಗುವುದು ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಪಟೇಲ್ ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ಏಪ್ರಿಲ್ ತಿಂಗಳಲ್ಲಿ ಕೆಲ ದಿನ ನೀರು ಸ್ಥಗಿತಗೊಳಿಸಿದರೆ ಬೆಳೆ ಕೈಗೆ ಬರುವ ಸಮಯದಲ್ಲಿ ನೀರು ನೀಡಬಹುದು. ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದಿದ್ದಾರೆ.
ಈ ಹಿನ್ನಲೆಯಲ್ಲಿ ನದಿ ಮತ್ತು ನಾಲೆಗೆ ಅಕ್ರಮ ಪಂಪ್‌ಸೆಟ್‌ಗಳಿಗೆ ಕಡಿವಾಣ ಹಾಕಲಾಗುವುದು ಎಂದರು.
ಮರಳು ಗಣಿಗಾರಿಕೆ ಕಾರಣ ನದಿ ಮೂಲಕ ಕುಡಿಯುವ ನೀರು ಹರಿಸುವುದಕ್ಕೂ ಸಮಸ್ಯೆಯಾಗಿದೆ. ನದಿಯಲ್ಲಿ ದೊಡ್ಡ ಹೊಂಡಗಳನ್ನು ಮಾಡಿದ್ದು, ಹರಿಸುವ ನೀರು ಈ ಹೊಂಡವನ್ನು ತುಂಬುತ್ತಿದೆ. ಈ ಹಿನ್ನಲೆಯಲ್ಲಿ ಹಾವೇರಿ ಜಿಲ್ಲಾಧಿಕಾರಿಯವರು 2 ಟಿಎಂಸಿ ಹೆಚ್ಚು ನೀರನ್ನು ನದಿಯಲ್ಲಿ ಹರಿಸುವಂತೆ ಮನವಿ ಮಾಡಿದ್ದಾರೆ ಎಂದು ಹೇಳಿದರು. ಸದ್ಯವೇ ಸಭೆ ನಡೆಸಿ ನಾಲೆಗೆ ನೀರು ಹರಿಸುವ ಹೊಸ ವೇಳಾಪಟ್ಟಿ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ.