ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಗರಸಭೆ ಅಧಿಕಾರ ಹಿಡಿಯಲು ಈಶ್ವರಪ್ಪ ಕುತಂತ್ರ

Mainashree
Updated On : 20 Mar 2013, 11:13 am

ಕ.ಪ್ರ ವಾರ್ತೆ ಶಿವಮೊಗ್ಗ ಮಾ.19
ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತಾಗಿದ್ದು ಧೂಳೀಪಟವಾಗಿದೆ. ಮತದಾರರ ಅವಕೃಪೆಗೆ ಪಾತ್ರವಾಗಿದೆ. ಆದರೆ ಮತ್ತೊಂದೆಡೆ ಅಧಿಕಾರ ದಾಹದಿಂದ ಏನಾದರೂ ಮಾಡಿ ಮತ್ತೆ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಬಿಜೆಪಿ ವಾಮಮಾರ್ಗದ ತಂತ್ರ ಅನುಸರಿಸಲು ಮುಂದಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸೇವಾದಳ ಸಮನ್ವಯ ಸಮಿತಿಯ ಸದಸ್ಯ ವೈ.ಎಚ್.ನಾಗರಾಜ್ ಆರೋಪಿಸಿದ್ದಾರೆ.
ಕಳೆದ ಬಾರಿ ಶಿವಮೊಗ್ಗ ನಗರಸಭೆ ಆಡಳಿತ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಪಕ್ಷ ಜನವಿರೋಧಿ ಆಡಳಿತದಿಂದ  ನಾಗರಿಕರ ನೆಮ್ಮದಿ ಕೆಡಿಸಿತ್ತು. ಹಗರಣ, ಭ್ರಷ್ಟಾಚಾರದಲ್ಲಿ ಭಾಗಿಯಾಗಿತ್ತು. ಈ ಹಿನ್ನೆಲೆಯಲ್ಲಿ ನಗರದ  ಪ್ರಜ್ಞಾವಂತ ಮತದಾರರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮತದಾನದ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ.  
ಕುತಂತ್ರ ಖಂಡನಾರ್ಹ: ಪ್ರಸ್ತುತ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷದತ್ತ  ಹೆಚ್ಚಿನ ಮತದಾರರು ತಮ್ಮ ಒಲವು ವ್ಯಕ್ತಪಡಿಸಿದ್ದಾರೆ. ಆದರೆ ಕಾಂಗ್ರೆಸ್ ಆಳ್ವಿಕೆ ತಪ್ಪಿಸುವ ಉದ್ದೇಶದಿಂದ,  ಮತ್ತೆ ಅಧಿಕಾರಕ್ಕೇರಬೇಕೆಂಬ ಸ್ವಾರ್ಥದಿಂದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ತನಗೆ ಅನುಕೂಲಕರವಾದ ಮೀಸಲಾತಿ ನಿಗದಿ ಮಾಡಿಸಿಕೊಳ್ಳಲು ಬಿಜೆಪಿ ಇನ್ನಿಲ್ಲದ ಕುತಂತ್ರ ನಡೆಸುತ್ತಿರುವುದು ಖಂಡನಾರ್ಹ ಎಂದು ನಾಗರಾಜ್ ತಿಳಿಸಿದ್ದಾರೆ.  
ಅನುಕೂಲ ಸಿಂಧು ಮೀಸಲಾತಿ ನಿಗದಿ ಮಾಡುವಲ್ಲಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರು ನೇರ ಭಾಗಿಯಾಗಿರುವ ಆರೋಪಗಳು ಕೇಳಿಬರುತ್ತಿವೆ. ಹಿಂಬಾಗಿಲಿನ ಮೂಲಕ ಶಿವಮೊಗ್ಗ ನಗರಸಭೆಯ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ. ಕೂಡಲೇ ಕೆ.ಎಸ್. ಈಶ್ವರಪ್ಪರವರು ವಾಮಮಾರ್ಗದ ಮೂಲಕ ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿಯುವ ದುಸ್ಸಾಹಸ ಕೈ ಬಿಡಬೇಕು. ಇಲ್ಲದಿದ್ದರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪನವರಿಗೆ ಮತದಾರರು ತಕ್ಕ ಪಾಠ ಕಲಿಸುವುದು ನಿಶ್ಚಿತ  ಎಂದು ನಾಗರಾಜ್ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement