ನೂತನ ಮಾನದಂಡ ಅವೈಜ್ಞಾನಿಕ
ಕ.ಪ್ರ ವಾರ್ತೆ ಶಿವಮೊಗ್ಗ ಮಾ.19
ಪಡಿತರ ಚೀಟಿ ಪಡೆಯಲು ಸರ್ಕಾರ ಜಾರಿಗೆ ತಂದಿರುವ ನೂತನ ಮಾನದಂಡ ಅವೈಜ್ಞಾನಿಕವಾಗಿದೆ. ಬಡ -ಮಧ್ಯಮ ವರ್ಗದವರಿಗೆ ಅನನುಕೂಲವಾಗಿದೆ ಎಂದು ಶಾಂತಿನಗರ ಬಡಾವಣೆ ನಿವಾಸಿಗಳು ಆರೋಪಿಸಿದ್ದಾರೆ.
ಈ ಕೂಡಲೇ ಮಾನದಂಡ ಬದಲಿಸಬೇಕೆಂದು ಆಗ್ರಹಿಸಿರುವ ನಿವಾಸಿಗಳು ಮಂಗಳವಾರ ಹೆಚ್ಚುವರಿ ಡಿಸಿ ಶ್ರೀರಂಗಯ್ಯ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಳೆಯ ವ್ಯವಸ್ಥೆ ಬದಲಾಯಿಸಿ ಹೊಸದಾಗಿ ಜಾರಿಗೆ ತಂದಿರುವ ವ್ಯವಸ್ಥೆ ಕಬ್ಬಿಣದ ಕಡಲೆಯಾಗಿದೆ. ಅಕ್ಷರಸ್ಥರು ಕೂಡ ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ ಎಂದು ನಿವಾಸಿಗಳು ಆರೋಪಿಸಿದರು.
ಕೂಡಲೇ ರಾಜ್ಯ ಸರ್ಕಾರ ಪಡಿತರ ಚೀಟಿಗೆ ಜಾರಿಗೆ ತಂದಿರುವ ಹೊಸ ವ್ಯವಸ್ಥೆ ಸರಳೀಕರಣಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ಮನವಿ ಸಲ್ಲಿಸುವ ಸಂದರ್ಭ ಜಮೀಲಾ ಖಾನಂ, ಪಯಾಬ್, ಮುಬೀನಾ ಬಾನು, ನೂರ್ ಜಹಾನ್ ಮೊದಲಾದವರು ಉಪಸ್ಥಿತರಿದ್ದರು.