ರಾಮಾಯಣ ಪಾತ್ರ ಅನನ್ಯ: ಡಾ. ಪ್ರಕಾಶರಾವ್
ಕ.ಪ್ರ.ವಾರ್ತೆ \ಸಾಗರ \ ಮಾ.19
ದೇಶದ ಜನರಲ್ಲಿ ಸಾಂಸ್ಕೃತಿಕ ಎಚ್ಚರ ಹಾಗೂ ಸಾಮಾಜಿಕ ಕಾಳಜಿ ಬೆಳೆಸುವಲ್ಲಿ ರಾಮಾಯಣದ ಪಾತ್ರ ಅನನ್ಯವಾದುದು ಎಂದು ಸತ್ಯದರ್ಶನ ಖ್ಯಾತಿಯ ಡಾ. ಪಾವಗಡ ಪ್ರಕಾಶರಾವ್ ಹೇಳಿದರು.
ಇಲ್ಲಿನ ಶೃಂಗೇರಿ ಶಂಕರಮಠದಲ್ಲಿ ರವೀಂದ್ರ ಪುಸ್ತಕಾಲಯ ಆಯೋಜಿಸಿರುವ ಆರು ದಿನಗಳ ಶ್ರೀ ರಾಮಾಯಣ ದರ್ಶನ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ, ರಾಮಾಯಣವನ್ನು ಪೂರ್ಣವಾಗಿ ಅಧ್ಯಯನ ಮಾಡದೆ ಅದನ್ನು ಟೀಕಿಸುವುದು ಸರಿಯಲ್ಲ ಎಂದರು. ಇಂದಿಗೂ ಜಗತ್ತಿನ ಯಾವುದೇ ದೇಶದಲ್ಲಿ ಏಕಪತ್ನಿವೃತಸ್ಥ ಕೌಟುಂಬಿಕ ಪದ್ಧತಿ ಜಾರಿಯಲ್ಲಿಲ್ಲ. ರಾಮಾಯಣ ಕೃತಿಯಿಂದ ಪ್ರಭಾವಿತವಾಗಿರುವ ಭಾರತದಲ್ಲಿ ಮಾತ್ರ ಏಕಪತ್ನಿತ್ವ ಪದ್ಧತಿ ಜಾರಿಯಲ್ಲಿದೆ. ರಾಮಾಯಣ ಕಾಲದಲ್ಲಿಯೆ ಭಾರತದಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನಮಾನವನ್ನು ಕಲ್ಪಿಸಲಾಗಿತ್ತು ಎನ್ನುವುದನ್ನು ಯಾರೂ ಮರೆಯಬಾರದು ಎಂದರು.
700 ವರ್ಷಗಳ ಹಿಂದೆ ಅಕ್ಬರನ ಆಸ್ಥಾನದಲ್ಲಿದ್ದ ಕವಿ ಅಬ್ದುಲ್ ಖಾದರ್ ಬಡಾಲಿ ಪರ್ಶಿಯನ್ ಭೆಯಲ್ಲಿ ರಾಮಾಯಣ ಕೃತಿಯನ್ನು ಅನುವಾದ ಮಾಡಿದಾಗಿನಿಂದ ಈವರೆಗೆ ಅಕ್ಷರ ಬರುವ ಎಲ್ಲಾ ರಾಷ್ಟ್ರಗಳು ತಮ್ಮತಮ್ಮ ದೇಶದ ಭಾಷೆಯಲ್ಲಿ ರಾಮಾಯಣವನ್ನು ಅನುವಾದ ಮಾಡಿರುವುದು ತಿಳಿದು ಬರುತ್ತದೆ. ಮನುಷ್ಯನ ದುರ್ನಡತೆಯನ್ನು ಬದಲಿಸಿ, ಸಾತ್ವಿಕ ವ್ಯಕ್ತಿತ್ವ ರೂಪಿಸುವ ವಿಶೇಷವಾದ ಶಕ್ತಿ ರಾಮಾಯಣಕ್ಕೆ ಇದೆ ಎಂದು ಹೇಳಿದರು. ಶಂಕರಮಠದ ಧರ್ಮಾಧಿಕಾರಿ ಎಸ್.ಆರ್.ತಿಮ್ಮಪ್ಪ, ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಸಿ. ಗೋಪಾಲಕೃಷ್ಣರಾವ್, ರವೀಂದ್ರ ಪುಸ್ತಕಾಲಯದ ವೈ.ಎ. ದಂತಿ, ಅಶ್ವಿನಿಕುಮಾರ್ ಹಾಜರಿದ್ದರು.