ಚುನಾವಣೆ ಸಿದ್ಧತೆಯ ಗಡಿಬಿಡಿ...
ಕ.ಪ್ರ.ವಾರ್ತೆ ಶಿವಮೊಗ್ಗ ಮಾ.20
ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆ, ಕೆಜೆಪಿಗೆ ಸೇಡಿನ ತಹತಹ, ಕಾಂಗ್ರೆಸ್-ಜೆಡಿಎಸ್‌ಗೆ ಹಳೆಯ ವೈಭವದ ಕನವರಿಕೆ, ಬಿಎಸ್‌ಆರ್ ಕಾಂಗ್ರೆಸ್‌ಗೆ ಕಾಲೂರುವ ಕುತೂಹಲ...
ರಾಜಕೀಯ ಪಕ್ಷಗಳು ನಗರ ಸ್ಥಳೀಯ ಸಂಸ್ಥೆ ಚುನಾವಣೆ ಮುಗಿಸಿ ಸುಧಾರಿಸಿಕೊಳ್ಳುವ ಮುಂಚೆಯೇ ವಿಧಾನಸಭೆ ಚುನಾವಣೆ ಬಂದು ನಿಂತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳಲ್ಲಿ ಗಡಿಬಿಡಿ ಶುರುವಾಗಿದೆ. ಪಕ್ಷ ಪ್ರತಿಷ್ಠೆ- ವ್ಯಕ್ತಿ ಪ್ರತಿಷ್ಠೆಯ ಲೆಕ್ಕಾಚಾರ ಶುರುವಾಗಿದೆ.
ಜ್ವರ ಶುರು: ಎಲ್ಲ ಪಕ್ಷಗಳಿಗೂ ವಿಧಾನಸಭೆ ಚುನಾವಣೆ ಸದ್ಯವೇ ಘೋಷಣೆಯಾಗು ನಿರೀಕ್ಷೆ ಇತ್ತು. ಆದರೆ ಇನ್ನು ಬಾಕಿ ಉಳಿದಿರುವುದು 45 ದಿನ ಮಾತ್ರ ಎಂದು ಗೊತ್ತಾದಾಗ ನಿಜವಾದ ಚುನಾವಣಾ ಜ್ವರ ಏರಿದೆ.
ಚುನಾವಣೆ ಹತ್ತಿರದಲ್ಲೇ ಇದೆ ಎಂದು ಗೊತ್ತಿದ್ದರೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಉಸಾಬರಿಗೆ ಹೋಗಿರಲಿಲ್ಲ. ಇದ್ದುದರಲ್ಲೇ ಜೆಡಿಎಸ್ ಪರವಾಗಿಲ್ಲ. ಈಗಾಗಲೇ ಜಿಲ್ಲೆಯ ನಾಲ್ಕು ಕ್ಷೇತ್ರಗಳಲ್ಲಿ ಅಭ್ಯರ್ಥಿ ಅಂತಿಮಗೊಳಿಸಿದೆ. ಕೆಜೆಪಿ ಹಾಗೂ ಬಿಜೆಪಿ ವಿಭಜನೆಯಾದ ನಂತರ ಅಭ್ಯರ್ಥಿ ಅಂತಿಮಗೊಳಿಸಲು ಹಿಂದೆಮುಂದೆ ನೋಡುತ್ತಿವೆ. ಕಾಂಗ್ರೆಸ್ ಮೂರು ಕ್ಷೇತ್ರಗಳಿಂದ ಕೇವಲ ಒಬ್ಬರ ಹೆಸರನ್ನು ಶಿಫಾರಸು ಮಾಡಿದ್ದು, ಅವರಿಗೇ ಟಿಕೆಟ್ ಅಂತಿಮವಾಗಬಹುದು. ಬಿಎಸ್‌ಆರ್ ಪಕ್ಷವೂ ಕಣದಲ್ಲಿ ತಯಾರಿ ನಡೆಸುತ್ತಿದೆ.
ಜಿಲ್ಲೆಯಲ್ಲಿ ಪಕ್ಷಗಳ ಸದ್ಯದ ಸ್ಥಿತಿಗತಿಯನ್ನು ಹೀಗೆ ವಿಶ್ಲೇಷಿಸಬಹುದು.
ಕೆಜೆಪಿ ತಹತಹ: ಮಲೆನಾಡ ಕಣ ಈ ಬಾರಿ ತೀವ್ರ ಹಣಾಹಣಿಯ ಕಣವಾಗುವುದರಲ್ಲಿ ಅನುಮಾನವಿಲ್ಲ. ಬಹುಮುಖ್ಯವಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಎಂದೂ ಕಾರಣದಷ್ಟು ಗೆಲವು ದೊರಕಿಸಿಕೊಟ್ಟಿದ್ದ ಯಡಿಯೂರಪ್ಪ ಈ ಬಾರಿ ಬಿಜೆಪಿಯಲ್ಲಿ ಇಲ್ಲ. ಶತಾಯಗತಾಯ ತವರು ಜಿಲ್ಲೆಯಲ್ಲಿ ಗೆಲವು ಹೊಂದಲು ತಹತಹಿಸುತ್ತಿರುವ ಕೆಜೆಪಿಗೆ ಸಂಸದ ಬಿ.ವೈ. ರಾಘವೇಂದ್ರ ಬೆನ್ನೆಲಬು.
ಆದರೆ ಅವರಿಗಿದು ಸಂಕ್ರಮಣ ಕಾಲ. ಇನ್ನೂ ಬಿಜೆಪಿ ಬಿಡದಿರುವ ಅವರು ಈಗ ತೀರ್ಮಾನ ಕೈಗೊಳ್ಳುವ ಕಾಲ ಬಂದಿದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಹರತಾಳು ಹಾಲಪ್ಪ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ ಈಗ ಕೆಜೆಪಿ ಪಾಲು. ಆದರೂ ಶಿವಮೊಗ್ಗ, ಗ್ರಾಮಾಂತರ, ಭದ್ರಾವತಿ ಹಾಗೂ ಸಾಗರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ.
ಬಿಜೆಪಿ ಹುಡುಕಾಟ: ಜಿಲ್ಲೆಯ ಮಟ್ಟಿಗೆ ಯಡಿಯೂರಪ್ಪರ ತೀವ್ರ ಎದುರಾಳಿ ಒಂದು ಕಾಲದ ಅವರ ಸ್ನೇಹಿತ, ಹಾಲಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರ ಪ್ರತಿರೋಧಿ. ಅವರೀಗ ಕೆಜೆಪಿಗೆ ಗುಳೆ ಹೋದ ನಂತರ ಉಳಿದ ಕಾರ್ಯಕರ್ತರ ಜತೆ ಪಕ್ಷ ರಾಜ್ಯಭಾರ ಮಾಡಬೇಕಾಗಿದೆ. ತಮ್ಮ ಕ್ಷೇತ್ರ ಹಾಗೂ ಗ್ರಾಮಾಂತರ ಕ್ಷೇತ್ರ ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಅಥವಾ ಮುಂಚೂಣಿಗೆ ತರಲು ಆಗಿಲ್ಲ.
ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಈಡಿಗರ ಮತ ತಂದುಕೊಟ್ಟಿದ್ದ ಬೇಳೂರು ಗೋಪಾಲಕೃಷ್ಣ ಈ ಪಕ್ಷದಿಂದ ಹೊರಗೆ ಕಾಲಿಟ್ಟಿದ್ದಾರೆ. ಹಾಲಪ್ಪ ಬಿಟ್ಟುಹೋಗಿದ್ದಾರೆ. ಶಿಕಾರಿಪುರ, ಸೊರಬ, ಭದ್ರಾವತಿ, ಸಾಗರ ಕ್ಷೇತ್ರದಲ್ಲಿ ಇನ್ನೂ ಅಭ್ಯರ್ಥಿಗಳ ಹುಡುಕಾಟದಲ್ಲಿದೆ. ತೀರ್ಥಹಳ್ಳಿಗೆ ಬಹುತೇಕ ಮಾಜಿ ಶಾಸಕ ಆರಗ ಜ್ಞಾನೇಂದ್ರ ಕಣಕ್ಕಿಳಿಯಬಹುದು.
ಜೆಡಿಎಸ್ ಸಿದ್ಧತೆ: ಜೆಡಿಎಸ್ ಸಿದ್ಧತೆಯಲ್ಲಿ ಉಳಿದ ಪಕ್ಷಗಳಿಗಿಂತ ಪರವಾಗಿಲ್ಲ. ತಿಂಗಳುಗಳ ಮುಂಚೆಯೇ ಪಕ್ಷದ ರಾಜ್ಯಾಧ್ಯಕ್ಷ ಅವರು ಜಿಲ್ಲೆಯ ಐದು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಆದರೆ ಸಾಗರ ಹಾಗೂ ಶಿಕಾರಿಪುರದಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಈ ಪಕ್ಷಕ್ಕೂ ಆಗಿಲ್ಲ.
ಕಾಂಗ್ರೆಸ್ ಗಡಿಬಿಡಿ: ಎಂದಿನಂತೆ ಈ ಬಾರಿಯೂ ಕಾಂಗ್ರೆಸ್ ತಯಾರಿಯಲ್ಲಿ ಈಗ ಗಡಿಬಿಡಿ ಶುರುವಾಗಿದೆ. ಕನಿಷ್ಠ ಒಂದು ತಿಂಗಳು ಮುಂಚೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಎಂಬ ಜಿಲ್ಲಾ ನಾಯಕರ ಮನವಿಗೆ ವರಿಷ್ಠರು ಮಾನ್ಯತೆ ನೀಡಿಲ್ಲ. ಆದರೆ ಜಿಲ್ಲಾ ಘಟಕಗಳಿಂದ ಶಿಫಾರಸುಗಳನ್ನು ಸ್ವೀಕರಿಸಿದೆ. ಹಾಲಿ ಶಾಸಕ ಕಿಮ್ಮನೆ ರತ್ನಾಕರ್ ಹೊರತುಪಡಿಸಿ ಒಂದು ಕ್ಷೇತ್ರದಿಂದ ಒಂದೇ ಹೆಸರು ಶಿಫಾರಸು ಆಗಿರುವುದು ಕಾಗೋಡು ತಿಮ್ಮಪ್ಪ ಹಾಗೂ ಕುಮಾರ್ ಬಂಗಾರಪ್ಪ ಅವರದ್ದು ಮಾತ್ರ. ಉಳಿದೆಲ್ಲಾ ಕ್ಷೇತ್ರಗಳಲ್ಲಿ ಐದಕ್ಕಿಂತಲೂ ಹೆಚ್ಚು ಹೆಸರುಗಳು ಶಿಫಾರಸು ಆಗಿವೆ. ಪೈಪೋಟಿಯೂ ಇದೆ.
ಚುನಾವಣೆ ಸಿದ್ಧತೆ ಶುರು ಆಗಿದೆ. ರಾಜ್ಯ ಮಟ್ಟದಲ್ಲಿ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಶುರು ಆಗಿದ್ದು, ಈ ನಡುವೆ ಶಿವಮೊಗ್ಗದ ಎನ್‌ಇಎಸ್ ಮೈದಾನದಲ್ಲಿ ಮಾ.24ರಂದು ಸಂಜೆ 4 ಗಂಟೆಗೆ ಕಾರ್ಯಕರ್ತರ ಬೃಹತ್ ಸಮಾವೇಶ ಮಾಡಲಿದ್ದೇವೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಸೇರಿದಂತೆ ಹಲವು ಮುಖಂಡರು ಭಾಗವಹಿಸುತ್ತಾರೆ. ನಂತರ ಕ್ಷೇತ್ರವಾರು ಚಟುವಟಿಕೆ ಆರಂಭವಾಗಲಿದೆ.
- ಆರ್.ಕೆ. ಸಿದ್ದರಾಮಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ
ಎಲ್ಲಾ ಕ್ಷೇತ್ರಗಳಲ್ಲಿ ಬೂತ್ ಮಟ್ಟದ ಸಭೆ ನಡೆಸಿದ್ದೇವೆ. ಅಭ್ಯರ್ಥಿಗಳು ಆಯಾ ಕ್ಷೇತ್ರಗಳಲ್ಲಿ ತಿಂಗಳುಗಳಿಂದಲೇ ತಯಾರಿ ನಡೆಸುತ್ತಿದ್ದಾರೆ. ನಗರಸಭೆ ಚುನಾವಣೆಗೆ ಮಾಡಿದ್ದ ತಯಾರಿ ನಮಗೆ ಈ ಚುನಾವಣೆಗೂ ಅನುಕೂಲವಾಗಲಿದೆ. ನಾವು ಈ ಬಾರಿ ಭರ್ಜರಿ ತಯಾರಿಯೊಂದಿಗೆ ಚುನಾವಣೆ ಎದುರಿಸಲಿದ್ದೇವೆ.
- ಎಂ. ಶ್ರೀಕಾಂತ್, ಜೆಡಿಎಸ್ ಜಿಲ್ಲಾಧ್ಯಕ್ಷ
ಇನ್ನೆರಡು ದಿನದಲ್ಲಿ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ, ನಂತರ ಬೂತ್ ಮಟ್ಟದ ಸಭೆ ಮಾಡಲು ಸೂಚನೆ ನೀಡಲಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಗೆ ನಡೆಸಿದ್ದ ಸಿದ್ಧತೆಯನ್ನು ಮತ್ತೊಮ್ಮೆ ಆಕ್ಟಿವೇಟ್ ಮಾಡುತ್ತೇವೆ. ಗ್ರಾ.ಪಂ. ಘಟಕಗಳ ಸಭೆ ಮಾಡಿದ್ದೇವೆ. ಅಲ್ಲದೇ, ಕಾಂಗ್ರೆಸ್‌ಗೆ ಬನ್ನಿ- ಬದಲಾವಣೆ ತನ್ನಿ, ಚಿಂತನ- ಮಂಥನ ಕಾರ್ಯಕ್ರಮಗಳು ಆಗಿದೆ. ನಾವು ಚುನಾವಣೆಗೆ ಸಂಪೂರ್ಣ ಸಿದ್ಧರಾಗಿದ್ದೇವೆ.
- ಆರ್. ಪ್ರಸನ್ನಕುಮಾರ್,ಕಾಂಗ್ರೆಸ್ ಜಿಲ್ಲಾಧ್ಯಕ್ಷ
ನಾವು ಸಿದ್ಧರಿದ್ದೇವೆ. ಬಿರುಸಿನ ತಯಾರಿ ನಡೆಸಿದ್ದೇವೆ. ಈಗಾಗಲೇ ಎಲ್ಲಾ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಿದ್ದೇವೆ. 23ರಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರು ಸೊರಬ, ತೀರ್ಥಹಳ್ಳಿ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಬೂತ್ ಮಟ್ಟದ ಸಭೆ ನಡೆಸಲಿದ್ದಾರೆ. ಮುಂದಿನ ವಾರ ರಾಜ್ಯ ನಾಯಕರು ಸಭೆ ನಡೆಸುತ್ತಾರೆ.
- ಜ್ಯೋತಿಪ್ರಕಾಶ್, ಕೆಜೆಪಿ ಜಿಲ್ಲಾಧ್ಯಕ್ಷ
ಇವರು ಕಣದಲ್ಲಿ ಖಂಡಿತ...
ಕಾಂಗ್ರೆಸ್: ಕಿಮ್ಮನೆ ರತ್ನಾಕರ್ (ತೀರ್ಥಹಳ್ಳಿ) ಕಾಗೋಡು ತಿಮ್ಮಪ್ಪ (ಸಾಗರ), ಕುಮಾರ್ ಬಂಗಾರಪ್ಪ (ಸೊರಬ)
ಬಿಜೆಪಿ: ಕೆ.ಎಸ್. ಈಶ್ವರಪ್ಪ (ಶಿವಮೊಗ್ಗ), ಕೆ.ಜಿ. ಕುಮಾರಸ್ವಾಮಿ (ಶಿವಮೊಗ್ಗ ಗ್ರಾಮಾಂತರ)
ಕೆಜೆಪಿ: ಬಿ.ಎಸ್. ಯಡಿಯೂರಪ್ಪ (ಶಿಕಾರಿಪುರ), ಆರ್.ಎಂ. ಮಂಜುನಾಥ ಗೌಡ (ತೀರ್ಥಹಳ್ಳಿ), ಹರತಾಳು ಹಾಲಪ್ಪ (ಸೊರಬ)
ಜೆಡಿಎಸ್: ಎಂ. ಶ್ರೀಕಾಂತ್ (ಶಿವಮೊಗ್ಗ), ಅಪ್ಪಾಜಿಗೌಡ (ಭದ್ರಾವತಿ), ಶಾರದಾ ಪೂರ್ಯಾನಾಯ್ಕ (ಶಿವಮೊಗ್ಗ ಗ್ರಾಮಾಂತರ), ಮದನ್ (ತೀರ್ಥಹಳ್ಳಿ), ಮಧು ಬಂಗಾರಪ್ಪ (ಸೊರಬ)
ಬಿಎಸ್‌ಆರ್ ಕಾಂಗ್ರೆಸ್: ಫಕೀರಪ್ಪ (ಶಿಕಾರಿಪುರ)
-ಹೊನ್ನಾಳಿ ಚಂದ್ರಶೇಖರ್