ರಕ್ಷಿಸಿದ ಜಿಂಕೆ ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು
ಸಾಗರ: ಕಾಡಿನಲ್ಲಿ ಕಾಲು ಮುರಿದುಕೊಂಡು ನಾಯಿಗಳಿಂದ ತಪ್ಪಿಸಿಕೊಳ್ಳಲು ಅಗಳದಲ್ಲಿ ಆಶ್ರಯ ಪಡೆದಿದ್ದ ಜಿಂಕೆಯೊಂದನ್ನು ಮಂಕಳಲೆ ಗ್ರಾಮದವರು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ ಘಟನೆ ಬುಧವಾರ ನಡೆದಿದೆ.
ಮಂಕಳಲೆ ಗ್ರಾಮದ ಶ್ರೀಪಾದ ಪಟೇಲ್ ಎಂಬವರ ಪುತ್ರ ಸುಮಂತ್ ಎಂಬಾತ ಬೆಳಿಗ್ಗೆ ದನಗಳನ್ನು ಮೇಯಲು ಬಿಡಲು ಹೊಗುತ್ತಿದ್ದ ಸಂದರ್ಭದಲ್ಲಿ ಅವರ ತೋಟದ ಹಿಂಭಾಗದ ಕಾಡಿನ ಸಮೀಪ ಅಗಳದಲ್ಲಿ ಜಿಂಕೆಯೊಂದು ನಿತ್ರಾಣ ಸ್ಥಿತಿಯಲ್ಲಿ ಬಿದ್ದಿತ್ತು. ತಕ್ಷಣ ಸುಮಂತ್ ಮನೆಗೆ ಬಂದು ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಹೋದ ಶ್ರೀಪಾದ ಪಟೇಲ್ ಹಾಗೂ ಅಕ್ಕಪಕ್ಕದವರು ಜಿಂಕೆಯನ್ನು ಮೇಲೆತ್ತಿ ಮನೆಯಲ್ಲಿ ತಂದು ಆರೈಕೆ ಮಾಡಿದ್ದಾರೆ. ಜಿಂಕೆಯು ಕಾಡಿನಲ್ಲಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಬೆನ್ನಟ್ಟಿಕೊಂಡು ಬಂದ ನಾಯಿಯಿಂದ ತಪ್ಪಿಸಿಕೊಳ್ಳಲು ಓಡುವಾಗ ಅಗಳಕ್ಕೆ ಬಿದ್ದಿರಬಹುದೆಂದು ಊಹಿಸಲಾಗಿದ್ದು ಇದರಿಂದ ಜಿಂಕೆಯ ಹಿಂಬದಿಯ ಬಲಗಾಲು ಮುರಿದಿದೆ. ಮನೆಯವರಿಂದ ವಿಷಯ ತಿಳಿದ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ, ಪಶುವೈದ್ಯರಿಂದ ಪ್ರಥಮ ಚಿಕಿತ್ಸೆ ಕೊಡಿಸಿ ಕರೆದೊಯ್ದಿದ್ದಾರೆ.