ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ಫೋಟಕ ವಸ್ತು ರವಾನೆ: ಇಬ್ಬರ ಬಂಧನ

Lingaraj Badiger
Updated On : 21 Mar 2013, 11:11 am

ಕ.ಪ್ರ. ವಾರ್ತೆ,ಶಿವಮೊಗ್ಗ,ಮಾ.20:
ಲಾರಿಯಲ್ಲಿ ಲಕ್ಷಾಂತರ ರುಪಾಯಿ ಮೌಲ್ಯದ ಅಕ್ರಮ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪದ  ಮೇಲೆ ಇಬ್ಬರನ್ನು ಬಂಧಿಸಿದ ಘಟನೆ ನಗರದ ಸೂಳೇಬೈಲು ಬಳಿ ನಡೆದಿದೆ.
ಲಾರಿ ಚಾಲಕ ಗೋವಿಂದ ಹಾಗೂ ಕ್ಲೀನರ್ ಶ್ರೀಧರ್ ಬಂಧಿತ ಆರೋಪಿಗಳು. ಇವರು ಕೊಡಗು ಜಿಲ್ಲೆಯ  ಕುಶಾಲನಗರದಿಂದ ಶಿವಮೊಗ್ಗ ನಗರಕ್ಕೆ ಲಾರಿಯಲ್ಲಿ ಅಕ್ರಮ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾರೆ ಎಂದು ಭದ್ರಾವತಿಯ ಡಿವೈಎಸ್‌ಪಿ ಖಚಿತ ಮಾಹಿತಿ ಪಡೆದಿದ್ದಾರೆ. ಈ ಆಧಾರದ ಮೇಲೆ ಲಾರಿ ನಿಲ್ಲಿಸಲು ಪೊಲೀಸರು ಸೂಚಿಸಿದ್ದಾರೆ. ಆದರೆ, ಚಾಲಕ ಲಾರಿ ನಿಲ್ಲಿಸದೆ ವೇಗವಾಗಿ ಶಿವಮೊಗ್ಗದ ಕಡೆಗೆ ಚಲಾಯಿಸಿಕೊಂಡು ಬಂದಿದ್ದಾನೆ. ನಂತರ ಭದ್ರಾವತಿ ಮತ್ತು ಶಿವಮೊಗ್ಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ನಗರದ ಸೂಳೇಬೈಲು  ಬಳಿ ಲಾರಿ, ಸ್ಫೋಟಕ ವಸ್ತು ಜಿಲೆಟಿನ್, ಅಮೋನಿಯಂ ಸಲ್ಪೇಟ್, ಡಿಟೋನೇಟರ್, ಸ್ಫೋಟಕ್ಕೆ ಬಳಸ್ಪಟ್ಟ ಬತ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಶಿವಮೊಗ್ಗ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಕಾರ್ಯಾಚರಣೆಯಲ್ಲಿ ಭದ್ರಾವತಿಯ ಎಸ್.ಐ ತಿರುಮಲೇಶ್, ತುಂಗಾನಗರ ಠಾಣೆಯ ಎಸ್.ಐ ರವಿ ಹಾಗೂ ಸಿಬ್ಬಂದಿ ಇದ್ದರು.
ಅಧಿಕಾರಿ ಇ- ಮೇಲ್ ಹ್ಯಾಕ್
ಶಿವಮೊಗ್ಗ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯೊಬ್ಬರ ಇ- ಮೇಲ್ ಐ.ಡಿ ಹ್ಯಾಕ್ ಮಾಡಿ ಸುಳ್ಳು ಸಂದೇಶ ರವಾನೆ ಮಾಡಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೆ ಮತ್ತೊಬ್ಬ ಸರ್ಕಾರಿ ಅಧಿಕಾರಿ ಇ- ಮೇಲ್ ಪಾಸ್‌ವರ್ಡ್ ಹ್ಯಾಕ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಹೊರವಲಯದ ನವುಲೆ ಬಡಾವಣೆಯ ಕೃಷಿ ವಿಜ್ಞಾನ ಕೇಂದ್ರದ ಪ್ರೊ.ಡಾ. ವೀರಣ್ಣ ಎಂಬುವರು ಬಳಸುತ್ತಿದ್ದ ಕೇಂದ್ರದ ಅಧಿಕೃತ ಇ- ಮೇಲ್ ಐಡಿಯಿಂದಲೇ ಈ ಸುಳ್ಳು ಸಂದೇಶ ರವಾನಿಸಲಾಗಿದೆ.  
ಡಾ. ವೀರಣ್ಣ ಅವರು ಕೇಂದ್ರ ಸಂಯೋಜನಾಧಿಕಾರಿ ಹುದ್ದೆಯಲ್ಲಿದ್ದರು. ಕೃಷಿ ವಿದ್ಯಾಲಯದಲ್ಲಿ ಕಳೆದ ಒಂದು ವರ್ಷದಿಂದ ಪ್ರೊಫೆಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ, ವೀರಣ್ಣ ಹೆಸರಿನಲ್ಲಿ ಕೇಂದ್ರದ ಸಂಯೋಜನಾಧಿಕಾರಿ ಇ- ಮೇಲ್ ಐಡಿಯಿಂದ ಅವರ ಸ್ನೇಹಿತರು ಹಾಗೂ ಇತರರಿಗೆ, ನಾನು ಫಿಲಿಫೈನ್ಸ್ ದೇಶಕ್ಕೆ ಪ್ರವಾಸ ಹೋಗಿದ್ದೆ, ಈ ವೇಳೆ ನನ್ನ ವೀಸಾ-ಪಾಸ್‌ಪೋರ್ಟ್, ನಗದನ್ನು ಕಳ್ಳರು ಅಪಹರಿಸಿದ್ದಾರೆ. ನಂತರ ವೀರಣ್ಣ ಅವರ ಸ್ನೇಹಿತರು ಕರೆ ಮಾಡಿ ಯಾವ ಸಮಸ್ಯೆ, ಏನಾಗಿದೆ ಎಂದೆಲ್ಲಾ ಕೇಳಿದ್ದಾಗ ವಿಷಯ ತಿಳಿದಿದೆ. ಸಂಯೋಜನಾಧಿಕಾರಿ ಹನುಮಂತಪ್ಪ ಪ್ರಕರಣ ದಾಖಲು ಮಾಡಿದ್ದಾರೆ.
ವಾಹನ ಡಿಕ್ಕಿ: ಸಾವು
ಸಾಗರ: ಇಲ್ಲಿನ ಸೊರಬ ರಸ್ತೆಯ ಕಟ್ಟಿಗೆ ಡಿಪೋ ಸಮೀಪ ಮಂಗಳವಾರ ರಾತ್ರಿ ಅಪರಿಚಿತ ವಾಹನಮೊಂದು ರಸ್ತೆ ಬದಿಯಲ್ಲಿ ಮಲಗಿದ್ದ ಮಾನಸಿಕ ಅಸ್ವಸ್ಥೆಯ ಮೇಲೆ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ನಡೆದಿದೆ.
 ಮೃತ ಮಹಿಳೆಯನ್ನು ಪ್ರತಿಮಾ (55) ಎಂದು ಗುರುತಿಸಲಾಗಿದೆ. ಈಕೆ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಇತ್ತೀಚೆಗೆ ಸಾಗರಕ್ಕೆ ಬಂದಿದ್ದರು ಎನ್ನಲಾಗಿದೆ. ಪ್ರತಿಮಾ ಮಾನಸಿಕ ಅಸ್ವಸ್ಥೆಯಾಗಿದ್ದು, ರಾತ್ರಿ ಮನೆಯಿಂದ ಹೊರಬಂದು ರಸ್ತೆ ಬದಿಯಲ್ಲಿ ಮಲಗಿದ್ದಳು ಎನ್ನಲಾಗಿದೆ. ವಾಹನ ತಿಳಿದು ಬಂದಿಲ್ಲ. ಪೇಟೆ ಠಾಣೆ ಪ್ರಕರಣ ದಾಖಲಾಗಿದೆ.
ಕೆರೆಗೆ ಬಿದ್ದು ಯುವಕ ಸಾವು
ಕ.ಪ್ರ.ವಾರ್ತೆ, ಶಿಕಾರಿಪುರ, ಮಾ.20 ಬುದ್ದಿಮಾಂದ್ಯ ಯುವಕನೊಬ್ಬ ಪಟ್ಟಣದ ಹುಚ್ಚೂರಾಯಸ್ವಾಮಿ ಪುಷ್ಕರಣಿಗೆ ಕಾಲು ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.
ಪಟ್ಟಣದ ನಿವೃತ್ತ ಶಿಕ್ಷಕಿ ಸರೋಜಮ್ಮನವರ ಪುತ್ರ ರಮೇಶ್(37) ಸಾವನ್ನಪ್ಪಿದ ಯುವಕನಾಗಿದ್ದು, ಬುದ್ದಿಮಾಂದ್ಯನಾಗಿದ್ದ ಈತ ನಿತ್ಯ ಪುಷ್ಕರಣಿ ಸಮೀಪ ಆಗಮಿಸಿ ಕೆಲ ಕಾಲ ವಿಶ್ರಮಿಸುತ್ತಿದ್ದು ಬುಧವಾರ ಮಧ್ಯಾಹ್ನ ಏಕಾಏಕಿ ಪುಷ್ಕರಣಿ ಬಳಿ ಧಾವಿಸಿದ ಈತ ಪುಷ್ಕರಣಿಯಲ್ಲಿ ಜಾರಿ ಬಿದ್ದಿರಬಹುದೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಅಧಿಕಾರಿ ಪಾಟೀಲ ಹಾಗೂ ಸಿಬ್ಬಂದಿ ತೆಪ್ಪದ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಮೊರಾರ್ಜಿರಾವ್, ಮುಖಂಡ ಗುರುಮೂರ್ತಿ, ಪುರಸಭಾ ಸದಸ್ಯ ವಸಂತಗೌಡ, ನಾಗರಾಜ ಗೌಡ ಆಗಮಿಸಿ ಮೃತರ ಸಂಬಂಧಿಗಳಿಗೆ ಸಾಂತ್ವನ ತಿಳಿಸಿದರು. ಪ್ರಕರಣ ದಾಖಲಾಗಿದೆ.
ಅಕ್ರಮ ನಾಟ ಸಾಗಣೆ; ಪ್ರಕರಣ ದಾಖಲು
ಹೊಸನಗರ: ಚಕ್ರಾನಗರದಲ್ಲಿ ಕಟ್ಟಡಗಳ ಹರಾಜು ಪ್ರಕರಣಕ್ಕೆ ಸಂಬಂಧಿಸಿ ಅಕ್ರಮ ನಾಟ ಸಾಗಣೆ ಮತ್ತು ಕೊಯ್ತಾ ಮಾಡಿದ ಆರೋಪದ ಮೇಲೆ ನೂಲಿಗ್ಗೇರಿ ಚಂದ್ರಶೇಖರ್ ಎಂಬಾತನ ಮೇಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
ಚಕ್ರಾನಗರದ ಕಟ್ಟಡದ ಮರದ ಸಾಮಗ್ರಿಗಳನ್ನು ಪರವಾನಗಿ ಪಡೆಯದೆ ನೂಲಿಗ್ಗೇರಿಗೆ ಸಾಗಿಸಲಾಗಿದೆ ಎಂದು ಅಕ್ರಮ ನಾಟ ವಹಿವಾಟು ನಡೆಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಯಪ್ಪ ಮತ್ತು ತಂಡ ಚಂದ್ರಶೇಖರ್ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಅಕ್ರಮ ನಾಟ ಸಾಗಣೆ ಮತ್ತು ಪರವಾನಗಿ ಪಡೆಯದೆ ಕೊಯ್ತಾ ಮಾಡಿರುವುದು ದೃಢಪಟ್ಟ ಮೇಲೆ ಪ್ರಕರಣ ದಾಖಲಿಸಿ ಮರದ ನಾಟಗಳನ್ನು ಇಲಾಖೆ ವಶಕ್ಕೆ ತೆಗೆದುಕೊಂಡಿದೆ.
ಇನ್ನು ಚಕ್ರಾನಗರದ ಹರಾಜು ಪ್ರಕರಣಕ್ಕೆ ಒಳಪಡದಿದ್ದರೂ ಸಾರ್ವಜನಿಕ ತಂಗುನಿಲ್ದಾಣ, ರಸ್ತೆ ಪಿಚ್ಚಿಂಗ್, ಇತರ ಸಾಮಗ್ರಿ ಸಾಗಿಸಲಾಗಿದ್ದು ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲಾಗುವುದೆಂದು ನಗರ ವಲಯ ಅರಣ್ಯಾಧಿಕಾರಿ ಮೃತ್ಯುಂಜಪ್ಪ ತಿಳಿಸಿದ್ದಾರೆ. ಉಪವಲಯ ಅರಣ್ಯಾಧಿಕಾರಿಗಳಾದ ಮಧುಕರ್, ದಿಲೀಪ್, ವಿಶ್ವನಾಥ್, ಅಶೋಕ ಕುಮಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement